ಮೈಸೂರು, ಫೆ. 06: ಮೈಸೂರು: ಪಾಪ್ ಗಾಯಕಿ ರಿಹಾನ ಅವರಿಗೆ ರೈತರ ಕಷ್ಟದ ಬಗ್ಗೆ ಏನು ಗೊತ್ತು? ಅವರಿಗೆ ರೈತರ ಬಗ್ಗೆ ಮಾತನಾಡುವ ನೈತಿಕತೆ ಏನಿದೆ? ರಿಹಾನಾಗೆ ರೈತರ ಶ್ರಮದ ಬಗ್ಗೆ ಏನು ಗೊತ್ತಿದೆಯಾ?. ರಿಹಾನಾ ಭತ್ತದ ಗದ್ದೆ ನೋಡಿದ್ದಾರಾ? ಎಂದು ಕೇಂದ್ರ ಸಚಿವ ಸದಾನಂದಗೌಡ ರಿಹಾನ ವಿರುದ್ಧ ಕಿಡಿಕಾರಿದರು.
ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಹುಶಃ ರಿಹಾನಾ ಭತ್ತದ ಗದ್ದೆ ಮುಂದೆ ನಿಂತು ಫೋಟೋ ತೆಗೆಸಿಕೊಂಡು ಹೋಗಿರಬಹುದು. ರೈತರು ಹೇಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡ್ತಾರೆ ಅಂತ ರಿಹಾನಾಗೆ ಗೊತ್ತಾ ? ವಿದೇಶಿ ಕೈಗೊಂಬೆಯಾಗಿ ಅವರು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಅವರು ಯಾವತ್ತಾದರೂ ಭತ್ತದ ಗದ್ದೆ ನೋಡಿದ್ದಾರಾ ಹೇಳಲಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದಿದೆ. ಆದರೆ, ರೈತನಿಗೆ ಇನ್ನು ಸ್ವಾತಂತ್ರ್ಯ ಸಿಕ್ಕಿಲ್ಲ. ರೈತರು ಈಗ ಸರ್ಕಾರದ ಕೈಗೊಂಬೆಯಾಗಿದ್ದಾರೆ. ಬೇಕಾದವರಿಗೆ ಬೆಳೆ ಮಾರಾಟ ಮಾಡಲು ಸ್ವಾತಂತ್ರ್ಯ ಇಲ್ಲವಾಗಿದೆ. ರೈತನಿಗೆ ಬೆಳೆದ ಬೆಳೆಯನ್ನು ಮುಕ್ತವಾಗಿ ಮಾರಲು ಸ್ವಾತಂತ್ರ್ಯ ನೀಡುತ್ತಿದ್ದೇವೆ. ತನ್ನ ಬೆಳೆಗೆ ಯಾರಾದರೂ ಹೆಚ್ಚು ಬೆಲೆ ಕೊಡುತ್ತಾರೆ ಎಂದರೆ ಕೊಡಲಿ ಬಿಡಿ. ಸುಮ್ಮನೆ ಯಾಕೆ ಹಠ ಎಂದು ಪ್ರಶ್ನಿಸಿದರು.
ರೈತರಿಗೆ ಬೆಂಬಲ ನೀಡಿದ್ದು, ಮೋದಿ ಸರ್ಕಾರ. ರೈತರು ಎಪಿಎಂಸಿ ಕೈಗೊಂಬೆಯಾಗಿ ಇರೋದು ಬೇಡ. ರೈತರು ಸ್ವತಂತ್ರವಾಗಿ ಬೆಳೆ ಮಾರಾಟ ಮಾಡಲು ಅವಕಾಶ ಕೊಟ್ಟಿದ್ದೇವೆ. ಬಂಡವಾಳ ಶಾಹಿಗಳ ಕೈಗೊಂಬೆಯಾಗುತ್ತಾರೆ ಎನ್ನುವುದು ಸುಳ್ಳು ಎಂದು ಹೇಳಿದರು.
ಪಟ್ಟಭದ್ರ ಹಿತಾಸಕ್ತಿಯಿಂದ ರೈತರ ಪ್ರತಿಭಟನೆ ನಡೆಯುತ್ತಿದೆ. ಕೃಪಾಪೋಷಿತ ಜನರ ಪ್ರೇರಣೆಯಿಂದ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ನಾವು ರಾಜಿ ಆಗಿದ್ದೀವಿ. ಮಾತುಕತೆಗೂ ಸಿದ್ಧರಿದ್ದೇವೆ. ಆದರೆ, ರೈತರೇ ಹಠ ಮಾಡುತ್ತಿದ್ದಾರೆ ಎಂದು ಎಂದು ಹೇಳಿದರು.