ಚಿತ್ರರಂಗ ಅಂದ್ರೇನೆ ಹಾಗೆ, ಅದೊಂದು ಬಣ್ಣದ ಲೋಕ, ಅವಕಾಶಗಳ ಆಗರ, ಅಭಿನಯದ ವೇದಿಕೆ, ಪ್ರತಿಭೆಯ ಅನಾವರಣ. ಇಂದು ಅದೆಷ್ಟೋ ಜನರು ಇಲ್ಲಿ ಅನೇಕ ರೀತಿಯ ಉದ್ಯೋಗಾವಕಾಶವನ್ನು ಪಡೆಯುತ್ತಿದ್ದಾರೆ. ನಟನೆ, ನಿರ್ದೇಶನ, ನಿರ್ಮಾಣ, ಸಂಗೀತ ನಿರ್ದೇಶನ, ಹಿನ್ನಲೆ ಗಾಯನ, ಸಂಕಲನ, ಪ್ರಸಾಧನ ಹೀಗೆ ಬಹಳಷ್ಟು ಅವಕಾಶಗಳು ಈ ಕ್ಷೇತ್ರದಲ್ಲಿವೆ. ಕೇವಲ ಉದ್ಯೋಗ ಮಾತ್ರವಲ್ಲದೆ ಒಳ್ಳೆಯ ಹೆಸರು, ಸಾಧನೆ ಮಾಡಲು ಈ ಕ್ಷೇತ್ರ ಸೂಕ್ತವಾದಂತಹದ್ದು. ನಮ್ಮ ಸ್ಯಾಂಡಲ್‌ವುಡ್ ಕೂಡ ಇದಕ್ಕೆ ಹೊರತಾಗಿಲ್ಲ. ಅದೇಷ್ಟೋ ನಟ-ನಟಿಯರು, ಸಂಗೀತಗಾರರು, ನಿರ್ದೇಶಕರು ತಮ್ಮ ಪ್ರತಿಭೆ-ಕೌಶಲ್ಯವನ್ನು ಸಿನಿಮಾ ಮೂಲಕ ಪ್ರಸ್ತುತಪಡಿಸಿ ಜನರ ಮನಗೆದ್ದಿದ್ದಾರೆ. ಸಾಕಷ್ಟು ಕಷ್ಟಪಟ್ಟು ತಮ್ಮ ಜೀವನವನ್ನೇ ಸಿನಾಮಾಕ್ಕಾಗಿ ಮುಡಿಪಾಗಿಡುತ್ತಾರೆ. ಇಂತಹ ಮಹಾನ್ ವ್ಯಕ್ತಿಗಳಲ್ಲಿ ಕನ್ನಡ ಚಿತ್ರರಂಗಕ್ಕೆ ತಮ್ಮ ನಟನಾ ಶೈಲಿಯ ಮೂಲಕ ಪ್ರೇಕ್ಷಕರ ಮನಗೆದ್ದಿರುವುದಲ್ಲದೇ ರಾಷ್ಟ್ರ ಪ್ರಶಸ್ತಿಯನ್ನು ತಂದುಕೊಟ್ಟ ಕೀರ್ತಿಯನ್ನು ಪಡೆದ ವ್ಯಕ್ತಿ ಸಂಚಾರಿ ವಿಜಯ್.
ಅದ್ಭುತ ನಟನೆ ಮೂಲಕ ಎಲ್ಲರ ಗಮನ ಸೆಳೆದ ವಿಜಯ್ ಕೇವಲ 37ನೇ ವಯಸ್ಸಿಗೆ ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದಾರೆ. ಸಾಕಷ್ಟು ಸಮಾಜಮುಖಿ ಕೆಲಸ ಮಾಡಿದ ಅವರನ್ನು ದೇವರು ಇಷ್ಟು ಬೇಗ ಕರೆಸಿಕೊಳ್ಳಲು ಮುಂದಾಗುತ್ತಿದ್ದಾನಾ? ಎಂಬುದು ಪ್ರಶ್ನಾತೀತವಾಗಿ ಉಳಿದಿದೆ. ‘ನಾನು ಅವನಲ್ಲ.. ಅವಳು’ ಸಿನಿಮಾದಲ್ಲಿನ ಅವರ ನಟನೆಗೆ ಮನ ಸೋಲದವರಿಲ್ಲ. ಸಂಚಾರಿ ವಿಜಯ್ ಪ್ರತಿ ಸಿನಿಮಾದಲ್ಲೂ ವಿಭಿನ್ನ ಪಾತ್ರಗಳ ಆಯ್ಕೆ ಮಾಡಿಕೊಳ್ಳುತ್ತಿದ್ದರು.
ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಸಾಕಷ್ಟು ಜನರು ಮುಂದಾಗುತ್ತಾರೆ. ಆದರೆ, ಎಲ್ಲರಿಗೂ ಯಶಸ್ಸು ಸಿಗೋದಿಲ್ಲ. ಆದರೆ, ಸಂಚಾರಿ ವಿಜಯ್ಗೆ ನಟನಾ ಕಲೆ ಅದ್ಭುತವಾಗಿ ಒಲಿದಿತ್ತು. ಯಾವುದೇ ಪಾತ್ರ ಕೊಟ್ಟರೂ ಅದನ್ನು ಸುಲಲಿತವಾಗಿ ನಿಭಾಯಿಸುತ್ತಿದ್ದರು. ತಾವು ಸೆಲೆಬ್ರಿಟಿ ಎನ್ನುವ ಅಹಂ ಅವರಲ್ಲಿ ಎಂದಿಗೂ ಇರಲಿಲ್ಲ. ಕೊವಿಡ್ ಸಂದರ್ಭದಲ್ಲಿಯೂ ಸಂಚಾರಿ ವಿಜಯ್ ಸಾಕಷ್ಟು ಜನಪರ ಕೆಲಸಗಳನ್ನು ಮಾಡಿದ್ದರು ಎಂಬುದನ್ನು ಇಲ್ಲಿ ನೆನೆಯಲೇಬೇಕು.
1983ರ ಜುಲೈ 18ರಂದು ಚಿಕ್ಕಮಗಳೂರಿನ ಕಡೂರಿನ ಪಂಚನಹಳ್ಳಿಯಲ್ಲಿ ವಿಜಯ್ ಜನಿಸಿದರು. ವಿಜಯ್ ಕುಮಾರ್ ಬಿ. ಎಂಬುದು ಅವರಿಗೆ ಇಟ್ಟ ಹೆಸರು. ಸಣ್ಣ ವಯಸ್ಸಿನಿಂದಲೇ ನಟನೆ ಬಗ್ಗೆ ಆಸಕ್ತಿ ಹೊಂದಿದ್ದ ಅವರು, ರಂಗಭೂಮಿಯಲ್ಲಿ ಪಳಗಿದವರು. ‘ಸಂಚಾರಿ’ ಥಿಯೇಟರ್ ಗ್ರೂಪ್ನಿಂದ ಬಂದ ಕಾರಣ ಸ್ಯಾಂಡಲ್ವುಡ್ನಲ್ಲಿ ಸಂಚಾರಿ ವಿಜಯ್ ಎಂದೇ ಅವರು ಖ್ಯಾತಿ ಪಡೆದುಕೊಂಡರು.
2011ರಲ್ಲಿ ತೆರೆಗೆ ಬಂದ ‘ರಂಗಪ್ಪ ಹೋಗ್ಬಿಟ್ಟಾ’ ಸಂಚಾರಿ ವಿಜಯ್ ಅವರ ಮೊದಲ ಸಿನಿಮಾ. ರಮೇಶ್ ಅರವಿಂದ್ ಅಭಿನಯಿಸಿದ ಈ ಚಿತ್ರದಲ್ಲಿ ನೀನಾಸಂ ಸತೀಶ್, ಮೊದಲಾದವರು ನಟಿಸಿದ್ದರು. ಈ ಚಿತ್ರದಲ್ಲಿ ಸಂಚಾರಿ ವಿಜಯ್ ಕೂಡ ಕಾಣಿಸಿಕೊಂಡಿದ್ದರು.
ಅದೇ ವರ್ಷ ತೆರೆಗೆ ಬಂದ ‘ರಾಮ ರಾಮ ರಘು ರಾಮ’ ಚಿತ್ರದಲ್ಲಿ ವಿಜಯ್ ನಟಿಸಿದರು. 2013ರಲ್ಲಿ ಪ್ರೇಮ್ ನಟನೆಯ ‘ದಾಸ್ವಾಳ’ ಚಿತ್ರದಲ್ಲಿ ಪಾತ್ರ ಒಂದನ್ನು ನಿರ್ವಹಿಸಿದ್ದರು. 2014ರಲ್ಲಿ ಬಂದ ‘ಹರಿವು’ ಚಿತ್ರದಲ್ಲಿ ಸಂಚಾರಿ ಮೊದಲ ಬಾರಿಗೆ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡರು. ಮಂಸೋರೆ ನಿರ್ದೇಶಿಸಿದ ಆ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು.
2015ರಲ್ಲಿ ತೆರೆಗೆ ಬಂದ ಅವರ ನಟನೆಯ ‘ನಾನು ಅವನಲ್ಲ ಅವಳು’ ಸಿನಿಮಾ ಸಂಚಾರಿ ವಿಜಯ್ ಅವರ ವೃತ್ತಿ ಜೀವನವನ್ನೇ ಬದಲಾಯಿಸಿತು. ಈ ಚಿತ್ರದಲ್ಲಿ ಅವರ ಅದ್ಭುತ ನಟನೆಗೆ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿಗಳು ಸಿಕ್ಕವು. ಈ ಚಿತ್ರ ತೆರೆಕಂಡ ನಂತರ ಅವರಿಗೆ ಅವಕಾಶಗಳು ತೀವ್ರವಾಗಿ ಹೆಚ್ಚಿದವು. 2017 ಮತ್ತು 2018ರಲ್ಲಿ ಅವರ ನಟನೆಯ 8-9 ಚಿತ್ರಗಳು ತೆರೆಗೆ ಬಂದವು. ‘ಆ್ಯಕ್ಟ್ 1978’ ಅವರ ಕೊನೆಯ ಚಿತ್ರ. ‘ಮೇಲೊಬ್ಬ ಮಾಯಾವಿ’ ಚಿತ್ರದಲ್ಲಿ ನಟಿಸುತ್ತಿದ್ದರು.
ಇಲ್ಲೊಂದು ವಿಚಿತ್ರ ಇದೆ. ‘ಮೇಲೊಬ್ಬ ಮಾಯಾವಿ’ ಸಿನಿಮಾದ ಹೆಸರಿನಂತೆಯೇ ಸಂಚಾರಿ ವಿಜಯ್ ಕೂಡ ಮೇಲಿರುವ ಮಾಯಾವಿಯ ಆಟದ ಕೈಗೊಂಬೆಯಾಗಿದ್ದಾರೆ.