ಬೆಂಗಳೂರು ಜ 18 : ಒಂದೆಡೆ ದೇಶಾದ್ಯಂತ ಕರೊನಾ ಹಾವಳಿ ಹೆಚ್ಚಾಗಿದೆ ಈ ನಡುವೆ ಗಣರಾಜ್ಯೋತ್ಸವಕ್ಕೆ ಪರೇಡ್‌ಗೆ ಸಂಬಂಧಿಸಿದಂತೆ ದಿನೇಶ್ ಗುಂಡೂರಾವ್ ಪ್ರಧಾನಿ ವಿರುದ್ದ ವಗ್ದಾಳಿ ನಡೆಸಿದ್ದಾರೆ. ನರೇಂದ್ರ ಮೋದಿಯವರೇ ನೀವು ಪ್ರಧಾನಿಯಾಗಿ ದ್ವೇಷದ ರಾಯಭಾರಿಯಾಗಬೇಡಿ, ಪ್ರೀತಿಯ ಸಂದೇಶ ಸಾರುವ ಪಾರಿವಾಳವಾಗಿ ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಗುಡುಗಿದ್ದಾರೆ.
ಈ ಬಾರಿಯ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಕೇರಳ ರಾಜ್ಯದಿಂದ ಕಳುಹಿಸಲಾಗಿದ್ದ ನಾರಾಯಣ ಗುರು ಅವರ ಚಿತ್ರವಿದ್ದ ಸ್ತಬ್ಧಚಿತ್ರವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದ್ದರಿಂದ ಕೇಂದ್ರದ ಈ ನಡೆಗೆ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ. ಸಮಾಜ ಸುಧಾರಕ ನಾರಾಯಣ ಗುರು ಸ್ತಬ್ಧಚಿತ್ರ ಪ್ರದರ್ಶನವನ್ನು ಕೇಂದ್ರ ತಿರಸ್ಕರಿಸಿದೆ. ಜೊತೆಗೆ ಪ.ಬಂಗಾಳ ಕಳಿಸಿದ್ದ ನೇತಾಜಿ ಸ್ತಬ್ದಚಿತ್ರವನ್ನೂ ಸಹ ತಿರಸ್ಕರಿಸಿದೆ. ಹುತಾತ್ಮ ನೇತಾಜಿ ಹಾಗೂ ಸಾಮಾಜ ಸುಧಾರಕ ನಾರಾಯಣ ಗುರುಗಳ ಬಗ್ಗೆ ಕೇಂದ್ರಕ್ಕೆ ಅಷ್ಟೊಂದು ತಿರಸ್ಕಾರ ಭಾವನೆ ಯಾಕೆ? ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ನಾರಾಯಣ ಗುರು ನಮ್ಮ ಬಸವಣ್ಣರ ಇನ್ನೊಂದು ಅವತಾರ. ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಇವರು ಕೇರಳದಲ್ಲಿ ಕ್ರಾಂತಿಯನ್ನೇ ಸೃಷ್ಟಿ ಮಾಡಿದ್ದರು. ಆದರೆ ಯಥಾಸ್ಥಿತಿವಾದಿ ಹಾಗೂ ಮೂಲಭೂತವಾದಿಯವರಿಗೆ ನಾರಾಯಣ ಗುರುಗಳ ಕಾಯಕ ಅಪಥ್ಯವಾಗಿತ್ತು. ಆ ಯಥಾಸ್ಥಿತಿವಾದಿಗಳ ಸಂತತಿಯಾಗಿರುವಂತಹ ಬಿಜೆಪಿ ಈಗ ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ತಿರಸ್ಕರಿಸಿ ತನ್ನ ವಿಕೃತ ಭಾವನೆಯನ್ನು ಅನಾವರಣಗೊಳಿಸಿದೆ ಎಂದರು. ಇದರ ಮೂಲಕ ಬಿಜೆಪಿಪಕ್ಷ ಹಾಗೂ ಪ್ರಧಾನಿ ಮೋದಿ ಜನರಿಗೆ ದ್ವೇಷ ಎಂದರೇನು? ಹೇಗಿರುತ್ತದೆ ಎಂದು ತೋರಿಸಿಕೊಟ್ಟು ದ್ವೇಷದ ರಾಯಭಾರಿಯಾಗಲು ಹೊರಟಿದ್ದಾರೆ ಎಂದು ಪ್ರಧಾನಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.