ಪಿಎಸ್ಐ(PSI) ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿರುವ ಆರೋಪಿ ಕಲಬುರಗಿ(Kalburgi) ಜಿಲ್ಲಾ ಬಿಜೆಪಿ(BJP) ಮಹಿಳಾ ಘಟಕದ ಪ್ರಮುಖ ನಾಯಕಿ ದಿವ್ಯಾ ಹಾಗರಗಿ(Divya Hagaragi) ಜೊತೆಗೆ ಕಾಂಗ್ರೆಸ್ ರಾಜ್ಯಾಧ್ಯಕ್ಷ(Congress President) ಡಿ.ಕೆ ಶಿವಕುಮಾರ್(DK Shivkumar) ಮಾತನಾಡುತ್ತಿರುವ ಪೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.

“ಪಿಎಸ್‍ಐ ನೇಮಕಾತಿಯಲ್ಲಿ ಆರೋಪಿಯಾಗಿರುವ ಬಿಜೆಪಿ ನಾಯಕಿಯನ್ನು ಯಾವಾಗ ಬಂಧಿಸುತ್ತೀರಿ..?” ಎಂದು ಕಾಂಗ್ರೆಸ್ ಬಿಜೆಪಿಯನ್ನು ಪ್ರಶ್ನಿಸಿತ್ತು. ಪಿಎಸ್‍ಐ ನೇಮಕಾತಿ ಅಕ್ರಮದಲ್ಲಿ ದಿವ್ಯಾ ಹಾಗರಗಿ ಆರೋಪಿಯಾದ ತಕ್ಷಣ ಕಾಂಗ್ರೆಸ್, ದಿವ್ಯಾ ಹಾಗರಗಿ ಮತ್ತು ಗೃಹ ಸಚಿವ ಅರಗ ಜ್ಞಾನೇಂದ್ರ ಜೊತೆಯಲ್ಲಿರುವ ಪೋಟೋವನ್ನು ಹಾಕಿ ಗೃಹ ಸಚಿವರನ್ನು ವಿಚಾರಣೆಗೆ ಒಳಪಡಿಸಬೇಕೆಂದು ಆಗ್ರಹಿಸಿತ್ತು. ಗೃಹ ಸಚಿವರೊಂದಿಗೆ ದಿವ್ಯಾ ಹಾಗರಗಿ ಇರುವ ಪೋಟೋ ವೈರಲ್ ಆದ ಬೆನ್ನಲ್ಲೇ ಇದೀಗ ಡಿ.ಕೆ ಶಿವಕುಮಾರ್ ಅವರೊಂದಿಗೆ ದಿವ್ಯಾ ಹಾಗರಗಿ ಇರುವ ಪೋಟೋ ವೈರಲ್ ಆಗುತ್ತಿದೆ.
ಈ ಪೋಟೋವನ್ನು ರಾಜ್ಯ ಬಿಜೆಪಿ ತನ್ನ ಅಧಿಕೃತ ಟ್ವೀಟ್‍ರ್ ಖಾತೆಯಲ್ಲಿ ಹಂಚಿಕೊಂಡಿದೆ. “ಅಧಿಕಾರದಲ್ಲಿ ಇಲ್ಲದೇ ಇದ್ದರೂ, ವ್ಯವಸ್ಥೆಯಲ್ಲಿ ಭ್ರಷ್ಟಾಚಾರವನ್ನು ತುರುಕುವುದಕ್ಕೆ ಕಾಂಗ್ರೆಸ್ ನಾಯಕರಿಗೆ ಮಾತ್ರ ಸಾಧ್ಯ. ಪಿಎಸ್‍ಐ ಪರೀಕ್ಷೆಯಲ್ಲಿ ನಡೆದ ಅಕ್ರಮದ ಹಿಂದೆ ಕಾಂಗ್ರೆಸ್ ಪೋಷಿತ ನಾಟಕ ಮಂಡಳಿಯ ಟೂಲ್‍ಕಿಟ್ ಇರುವುದಕ್ಕೆ ಇಲ್ಲಿದೆ ನೋಡಿ ಸಾಕ್ಷಿ” ಎಂದು ಟ್ವೀಟ್ ಮಾಡಿದೆ.
ಡಿ.ಕೆ ಶಿವಕುಮಾರ್ ಅವರೊಂದಿಗೆ ದಿವ್ಯಾ ಹಾಗರಗಿ ಇರುವ ಪೋಟೋ ಕುರಿತು ಪ್ರತಿಕ್ರಿಯೆ ನೀಡಿರುವ ರಾಮಲಿಂಗಾ ರೆಡ್ಡಿ, ಈ ಪೋಟೋ ತೆಗೆದುಕೊಂಡ ಸಂದರ್ಭದಲ್ಲಿ ಡಿ.ಕೆ ಶಿವಕುಮಾರ್ ಗೃಹ ಸಚಿವರಾಗಿರಲಿಲ್ಲ. ಅವರು ಸಚಿವರಾಗಿದ್ದ ವೇಳೆ ಯಾವುದಾದರೂ ಹಗರಣ ನಡೆದಿದ್ದರೆ ಹೇಳಿ..? ಎಂದು ಪ್ರಶ್ನಿಸಿದ್ದಾರೆ.