ಬೆಂಗಳೂರು ಜ 3 : ನಿನ್ನೆ ಮುಖ್ಯಮಂತ್ರಿಗಳ ಕಾರ್ಯಕ್ರಮದ ವೇಳೆ ಡಿ.ಕೆ. ಸುರೇಶ್ ನಡೆಸಿದ ಗಲಾಟೆಗೆ ಸಂಬಂಧಿಸಿದಂತೆ ಬಿಜೆಪಿ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದೆ. ‘ರಾಮನಗರ ಜಿಲ್ಲೆ ಎಂದರೆ ‘ಕನಕಪುರ ರಿಪಬ್ಲಿಕ್’ ಎಂದು ಡಿಕೆ ಸಹೋದರರು ಭಾವಿಸಿದಂತಿದೆ. ನಿಮ್ಮ ಅಟ್ಟಹಾಸ, ದೌರ್ಜನ್ಯ, ರಾಜಕೀಯ ಮೇಲಾಟವನ್ನು ಎಲ್ಲ ಕಾಲಕ್ಕೂ ನೋಡಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ. ಸಾರ್ವಜನಿಕ ಸಭೆಯಲ್ಲಿ ಸಂಸದ ಡಿ.ಕೆ. ಸುರೇಶ್ ಹಾಗೂ ಎಂಎಲ್ಸಿ ರವಿ ಅವರ ವರ್ತನೆ ಅಕ್ಷಮ್ಯವಾದುದು’ ಅಂತಾ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
‘ಬಂಡೆ ಕಲ್ಲುಗಳನ್ನೇ ನುಂಗಿ ನೀರು ಕುಡಿದ ಕನಕಪುದ ರೌಡಿ ಸಹೋದರರಲ್ಲೊಬ್ಬರು ಮುಖ್ಯಮಂತ್ರಿಗಳಿದ್ದ ವೇದಿಕೆಯಲ್ಲೇ ಅಟ್ಟಹಾಸ ಮೆರೆದಿದ್ದಾರೆ, ಹಾಗಾದರೇ ಭೂಗತರಾಗಿ ಏನೇನು ಮಾಡಿರಬಹುದು!? ಕೊತ್ವಾಲನ ಶಿಷ್ಯರ ವಿರುದ್ಧ ಅರಣ್ಯ ಇಲಾಖೆಯ ಅಧಿಕಾರಿಗಳು ಸಲ್ಲಿಸಿದ್ದ ಕ್ರಿಮಿನಲ್ ಮೊಕದ್ದಮೆಗಳೇ ರೌಡಿ ಡಿಕೆ ಬ್ರದರ್ಸ್ ಗಳ ಇತಿಹಾಸ ಹೇಳುತ್ತದೆ’ ಎಂದು ಬಿಜೆಪಿ(BJP) ಟೀಕಿಸಿದೆ.
ಕನಕಪುರದ ನೈಸರ್ಗಿಕ ಸಂಪತ್ತೆಲ್ಲವೂ ಒಂದೇ ಕುಟುಂಬದ ಸ್ವತ್ತು ಎಂಬಂತೆ ರೌಡಿ ಡಿಕೆಬ್ರದರ್ಸ್ ನೋಡಿಕೊಂಡಿದ್ದಾರೆ. ಅಧಿಕಾರದ ರುಚಿ ನೋಡುವುದಕ್ಕೆ ಮುನ್ನವೇ ಶ್ರೀಗಂಧದ ಕಳ್ಳಸಾಗಣೆ ಮಾಡುತ್ತಿದ್ದವರು ಈಗ ಸರ್ಕಾರಿ ಯಂತ್ರವನ್ನೇ ಬೆದರಿಸುವ ಉಡಾಫೆತನ ತೋರಿದ್ದಾರೆ. ಕರ್ನಾಟಕ ಲಾಲೂ ಕಾಲದ ಬಿಹಾರವಲ್ಲ ಎಂಬುದು ನೆನಪಿರಲಿ’ ಅಂತಾ ಬಿಜೆಪಿ ಎಚ್ಚರಿಕೆ ನೀಡಿದೆ.
‘ತೋಳ್ಬಲ, ಅಕ್ರಮ ಸಂಪತ್ತಿನ ಬಲದಿಂದ ಮೆರೆಯುತ್ತಿರುವ ಕನಕಾಸುರರು ಕರ್ನಾಟಕ(Karnataka)ದ ಅಧಿಕಾರ ಹಿಡಿದು ಶಾಂತಿ ಕದಡುವ ಯತ್ನ ನಡೆಸುತ್ತಿದ್ದಾರೆ. ಇವರು ಅಧಿಕಾರಕ್ಕೆ ಬಂದರೆ ಕಂಡ ಕಂಡ ಖಾಲಿ ಜಾಗಕ್ಕೆ ಬೇಲಿ ಹಾಕುವುದರಲ್ಲಿ ಯಾವುದೇ ಅನುಮಾನವಿಲ್ಲ. ರಾಜ್ಯದ ಜನರು ರೌಡಿ ಡಿಕೆ ಬ್ರದರ್ಸ್ ಕೈಗೆ ಎಂದಿಗೂ ಅಧಿಕಾರ ನೀಡಲಾರರು’ ಅಂತಾ ಬಿಜೆಪಿ ಟ್ವೀಟ್ನಲ್ಲಿ ತಿಳಿಸಿದೆ