2023ರಲ್ಲಿ ವಿಧಾನಸಭೆ ಚುನಾವಣೆ(Vidhanasabha Election) ಹಾಗೂ 2024 ರ ಲೋಕಸಭೆ ಚುನಾವಣೆಗಳು(Loksabha Elections) ನಡೆಯಲಿವೆ.

ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು(Congress Party) ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ‘ನವ ಸಂಕಲ್ಪ ಚಿಂತನಾ ಶಿಬಿರ’ದಲ್ಲಿ ಪಾಲ್ಗೊಂಡವರು ಚರ್ಚೆ ಮಾಡಬೇಕು ಹಾಗೂ ಸಲಹೆಗಳನ್ನು ನೀಡಬೇಕು ಎಂದು ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್(DK Shivkumar) ತಿಳಿಸಿದ್ದಾರೆ. ಇನ್ನು ಎಐಸಿಸಿ ಮಾರ್ಗದರ್ಶನದಂತೆ ರಾಜ್ಯಮಟ್ಟದ ‘ನವ ಸಂಕಲ್ಪ ಚಿಂತನಾ ಶಿಬಿರ’ ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ಪಾಲ್ಗೊಂಡವರು ರಾಜ್ಯ ಹಾಗೂ ದೇಶದ ಭವಿಷ್ಯ, ಪಕ್ಷದ ಬಲವರ್ಧನೆಯನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ಸಲಹೆ ನೀಡಬೇಕು.
2023ರಲ್ಲಿ ಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ನಾವು ಗೆಲ್ಲಲೇಬೇಕಿದೆ, ಈ ಸವಾಲನ್ನು ಸ್ವೀಕರಿಸಬೇಕಿದೆ. ಕಾಂಗ್ರೆಸ್ ಸದಸ್ಯತ್ವ ನೋಂದಣಿ ಮುಂದುವರಿಯಲಿದ್ದು, ಬೂತ್ ಮಟ್ಟದ ಸಮಿತಿ ಸೇರಿ ಎಲ್ಲ ಸಮಿತಿಗಳನ್ನು ರಚಿಸಲು ಕಾಲಮಿತಿ ನಿಗದಿ ಮಾಡಲಾಗಿದೆ. ಎಐಸಿಸಿ ನಿರ್ದೇಶನ ಪ್ರತಿ ಜಿಲ್ಲೆಯಲ್ಲಿ ಆಗಸ್ಟ್ 9 ರಿಂದ 15 ರವರೆಗೆ ಜಿಲ್ಲಾ ಮಟ್ಟದಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಬೇಕಿದೆ. ಸರ್ಕಾರದ ವೈಫಲ್ಯಗಳ ವಿರುದ್ಧ ಹೋರಾಟ ಮಾಡಬೇಕಾಗಿದೆ ಎಂದರು. ಇದೇ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ,

ನಾವು ಅಧಿಕಾರಕ್ಕೆ ಬರುವುದಕ್ಕಾಗಿ ಗೆಲ್ಲುವುದಲ್ಲ, ರಾಜ್ಯ ಮತ್ತು ಇಲ್ಲಿಯ ಜನರ ಉಳಿವಿಗಾಗಿ ಗೆಲ್ಲಬೇಕಾಗಿದೆ. ಈ ನಿಟ್ಟಿನಲ್ಲಿ ಶಿಬಿರದಲ್ಲಿ ಚರ್ಚಿಸಿ, ನಿರ್ಣಯಗಳನ್ನ ಮಾಡಿ, ಪಕ್ಷದ ನಿಲುವನ್ನ ಸ್ಪಷ್ಟಪಡಿಸಬೇಕಿದೆ. ಇನ್ನು 2023ರಲ್ಲಿ ವಿಧಾನಸಭೆ, 2024ರಲ್ಲಿ ಲೋಕಸಭೆ, ಜಿಲ್ಲಾ ಮತ್ತು ತಾಲೂಕು ಪಂಚಾಯತಿ, ಮಹಾನಗರ ಪಾಲಿಕೆ ಚುನಾವಣೆಗಳು ಬರುತ್ತಿವೆ. ಈ ಚುನಾವಣೆಗಳ ಹಿನ್ನೆಲೆಯಲ್ಲಿ ನವ ಸಂಕಲ್ಪ ಚಿಂತನಾ ಶಿಬಿರ ಆಯೋಜಿಸಲಾಗಿದೆ.
ಬೂತ್ ಮಟ್ಟದಿಂದ ಕೆಪಿಸಿಸಿ ಮಟ್ಟದವರೆಗೆ ಪಕ್ಷ ಸಂಘಟಿತಗೊಂಡರೆ ನಾವು ಇಂತಹ ಚುನಾವಣೆಗಳಲ್ಲಿ ಗೆಲುವು ಕಷ್ಟವೇನಲ್ಲ ಎಂದಿದ್ದಾರೆ.