ಬೆಂಗಳೂರು, ಮೇ. 01: ದೇಶದಲ್ಲಿ 18ರಿಂದ 45 ವರ್ಷ ವಯೋಮಾನದವರಿಗೆ ಮೇ 1ರಿಂದ ಉಚಿತವಾಗಿ ಕೋವಿಡ್ ಲಸಿಕೆ ನೀಡುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ಆದರೆ, ಸರ್ಕಾರದಿಂದ ಅಧಿಕೃತವಾಗಿ ಆದೇಶ ಬರುವ ತನಕ ಯಾರು ಸಹ ಆಸ್ಪತ್ರೆಗೆ ತೆರಳಿ ಲಸಿಕೆ ಪಡೆಯಬೇಡಿ ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಹೇಳಿದ್ದಾರೆ.
ಮೇ 1ರಿಂದ ಆರಂಭವಾಗಬೇಕಿದ್ದ ಲಸಿಕೆ ವಿತರಣೆ ಬಗ್ಗೆ ಲಸಿಕೆ ಉತ್ಪಾದನಾ ಕಂಪನಿಯಿಂದ ರಾಜ್ಯ ಸರ್ಕಾರಕ್ಕೆ ಅಧಿಕೃತ ಮಾಹಿತಿ ಬಂದಿಲ್ಲ. ಹೀಗಾಗಿ, ನಾಳೆ ಯಾರೂ ಲಸಿಕೆ ಪಡೆಯಲೆಂದು ಆಸ್ಪತ್ರೆಗೆ ಹೋಗುವುದು ಬೇಡ ಎಂದು ತಿಳಿಸಿದ್ದಾರೆ.
ನಮ್ಮಲ್ಲಿ ಲಸಿಕೆ ಪಡೆಯಲು ಇದೀಗ ಅರ್ಹತೆ ಪಡೆದವರು ಅಂದಾಜು 3 ರಿಂದ 3.5 ಕೋಟಿಯಷ್ಟು ಜನರಿದ್ದಾರೆ. ಈಗಾಗಲೇ 1 ಕೋಟಿ ಡೋಸ್ ಕೊವಿಶೀಲ್ಡ್ ಆರ್ಡರ್ ಮಾಡಲಾಗಿದೆ. ಅದಕ್ಕಾಗಿ 400 ಕೋಟಿ ಮೀಸಲಿಡಲಾಗಿದೆ. ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಒಂದು ತಿಂಗಳಲ್ಲಿ 5-6 ಕೋಟಿ ಡೋಸ್ ಲಸಿಕೆ ಉತ್ಪಾದನೆ ಮಾಡುತ್ತಿದೆ.
ಭಾರತ್ ಬಯೋಟೆಕ್ 1-1.5 ಕೋಟಿ ಡೋಸ್ ಲಸಿಕೆ ಉತ್ಪಾದನೆ ಮಾಡುತ್ತಿದೆ. ಸದ್ಯದಲ್ಲೇ ರಷ್ಯಾದ ಸ್ಪುಟ್ನಿಕ್-ವಿ ಲಸಿಕೆ ಕೂಡಾ ಬರಲಿದೆ. ಹೀಗಾಗಿ ಕೊವಿನ್ ಪೋರ್ಟಲ್ ಮೂಲಕ ನೋಂದಣಿ ಮಾಡಿಕೊಂಡವರಿಗೆ ಲಸಿಕೆ ಸಿಗಲಿದೆ. ಆದರೆ, ಸರ್ಕಾರ ಅಧಿಕೃತವಾಗಿ ಹೇಳುವ ತನಕ ಕಾಯಬೇಕು ಎಂದು ಮಾಹಿತಿ ನೀಡಿದ್ದಾರೆ.
18-45 ವರ್ಷದವರಿಗೆ ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಲಸಿಕೆ ಕೊಡುತ್ತೇವೆ ಎಂದು ಸ್ಪಷ್ಟವಾಗಿ ತಿಳಿಸಿದ್ದೇವೆ. ಈ ವಿಚಾರದಲ್ಲಿ ಯಾವುದೇ ಗೊಂದಲ ಬೇಡ ಎಂದು ಸ್ಪಷ್ಟಪಡಿಸಿದ್ದಾರೆ.