ದೆಹಲಿ, ಏ. 22: ನಗರ ಮತ್ತು ದೇಶದಲ್ಲಿ ವೈದ್ಯಕೀಯ ಆಮ್ಲಜನಕದ ಪರಿಸ್ಥಿತಿ ತೀವ್ರವಾಗಿ ಬಿಗಡಾಯಿಸಿರುವ ಹಿನ್ನೆಲೆಯಲ್ಲಿ ಬುಧವಾರ ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರದ ಆಡಳಿತ ವೈಖರಿಯನ್ನು ಕಟುನುಡಿಗಳಲ್ಲಿ ವಿಮರ್ಶಿಸಿತು. ‘ವಾಸ್ತವ ಅರ್ಥ ಮಾಡಿಕೊಳ್ಳಲು ನಿಮಗೇಕೆ ಸಾಧ್ಯವಾಗ್ತಿಲ್ಲ. ಆಮ್ಲಜನಕ ಇಲ್ಲದ ಕಾರಣ ಜನರು ಸಾಯುವಂಥ ಪರಿಸ್ಥಿತಿ ಬರಲು ಬಿಡಬಾರದಿತ್ತು’ ಎಂದು ಮ್ಯಾಕ್ಸ್ ಗ್ರೂಪ್ನ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.
ಆಮ್ಲಜನಕ ಒದಗಿಸುವ ಬಗ್ಗೆ ನ್ಯಾಯಾಲಯ ಹೇಳಿದ ಮಾತುಗಳು:
1) ಆಳುವ ಸರ್ಕಾರಕ್ಕೆ ವಾಸ್ತವದ ಅರಿವಿಲ್ಲ ಎಂದರೆ ಹೇಗೆ? ಆಮ್ಲಜನಕ ಇಲ್ಲವೆಂಬ ಕಾರಣಕ್ಕೆ ಜನರನ್ನು ಸಾಯಲು ಬಿಡಬಾರದು.
2) ಜನರು ಸರ್ಕಾರದ ಮೇಲೆ ಅವಲಂಬಿತರಾಗಿದ್ದಾರೆ. ನೀವು ಭಿಕ್ಷೆ ಬೇಡುತ್ತೀರೋ, ಕದಿಯುತ್ತೀರೋ, ಸಾಲ ತರುತ್ತೀರೋ. ಜನರನ್ನು ಬದುಕಿಸುವುದು ನಿಮ್ಮ ಹೊಣೆ.
3) ಆಸ್ಪತ್ರೆಗಳಲ್ಲಿ ಆಮ್ಲಜನಕ ಖಾಲಿಯಾಗಿದೆ. ನಮಗೆ ಕೇವಲ ದೆಹಲಿಯೊಂದೇ ಕಾಳಜಿಯಲ್ಲ. ಇಡೀ ದೇಶದಲ್ಲಿ ಆಮ್ಲಜನಕ ಸರಬರಾಜು ಉತ್ತಮ ಪಡಿಸಲು ಏನು ಮಾಡಿದ್ದೀರಿ ತಿಳಿಸಿ.
4) ವೈದ್ಯಕೀಯ ಆಮ್ಲಜನಕದ ಬೇಡಿಕೆ ಹಲವು ಪಟ್ಟು ಹೆಚ್ಚಾಗಿದೆ. ಅದೇನು ಮಾಡ್ತೀರೋ ಮಾಡಿ. ಜನರ ಬದುಕುವ ಹಕ್ಕು ಕಾಪಾಡಿ.
5) ಟಾಟಾ ಕಂಪನಿಯು ತಮ್ಮ ಉಕ್ಕು ಘಟಕಗಳಿಂದ ಆಮ್ಲಜನಕವನ್ನು ಬೇರೆಡೆಗೆ ರವಾನಿಸಲು ಮುಂದೆ ಬರಲು ಸಾಧ್ಯವಾಗುತ್ತದೆ ಎಂದಾದರೆ ಉಳಿದವರಿಗೆ ಏಕೆ ಆಗುವುದಿಲ್ಲ? ಇದು ಮನುಷ್ಯತ್ವದ ಪ್ರಶ್ನೆ ಅಲ್ಲವೇ?
6) ಕೈಗಾರಿಕೆಗಳು ಸಹಾಯ ಮಾಡಲು ಸಿದ್ಧವಾಗಿವೆ. ನೀವೊಂದು ಆದೇಶ ಹೊರಡಿಸಿ, ಅವರ ಸಹಾಯ ಕೇಳಿ. ನಿಮಗೆ (ಸರ್ಕಾರಕ್ಕೆ) ನಿಮ್ಮದೇ ಆದ ಎಷ್ಟೋ ಕೈಗಾರಿಕೆಗಳಿವೆ. ಅವನ್ನು ಬಳಸಿಕೊಳ್ಳಿ.
7) ಸರ್ಕಾರಕ್ಕೆ ವಾಸ್ತವ ಪರಿಸ್ಥಿತಿ ಏಕೆ ಅರ್ಥವಾಗುತ್ತಿಲ್ಲ? ನೀವೀಗ ಎಚ್ಚೆತ್ತುಕೊಳ್ಳದಿದ್ದರೆ ಭೂಮಿಯ ಮೇಲಿನ ನರಕ ಇಲ್ಲಿ ಸೃಷ್ಟಿಯಾಗುತ್ತೆ