ತಾರಾಯೋಗ ಹಾಗೂ ಜಿಮ್‌ ನಡುವಿನ ವ್ಯತ್ಯಾಸ ಗೊತ್ತೆ ?

ಯೋಗೇನ ಚಿತ್ತಸ್ಯ ಪದೇನ ವಾಚಾಂ
ಮಲಂ ಶರೀರಸ್ಯ ಚ ವೈದಕೇನ
ಯೋಪಾ ಕರೋತ್ತಂ ಪ್ರವರಂ ಮುನೀನಾಂ
ಪತಂಜಲಿಂ ಪ್ರಾಂಜಲಿರಾನತೋಸ್ಮಿ

ಯೋಗದಿಂದ ಚಿತ್ತವನ್ನೂ ಪದಗಳಿಂದ ಮಾತನ್ನೂ ವೈದ್ಯಕೀಯದಿಂದ ಶರೀರದ ಕಲ್ಮಶಗಳನ್ನು ಶುಚಿಗೊಳಿಸುವ ವಿವರಗಳನ್ನು ತಿಳಿಸಿಕೊಟ್ಟ ಪತಂಜಲಿ ಮುನಿಗೆ ಕೈ ಮುಗಿಯುವೆ- ಎಂಬ ಶ್ಲೋಕವೊಂದಿದೆ.

ಅಂದರೆ ಯೋಗ ದೇಹಾರೋಗ್ಯಕ್ಕೆ ಮಾತ್ರವಲ್ಲ ಮಾನಸಿಕ ಆರೋಗ್ಯಕ್ಕೂ ರಹದಾರಿ ಎಂಬುದು ಇಲ್ಲಿ ವೇದ್ಯವಾಗುತ್ತದೆ. ಯೋಗ ಶರೀರ ಮತ್ತು ಉಸಿರಾಟ ಕ್ರಿಯೆಯನ್ನು ಸಮತೋಲನದೊಂದಿಗೆ ಬಳಸಿಕೊಂಡ ಆರೋಗ್ಯದಿಂದ ಆಧ್ಯಾತ್ಮದೆಡೆಗೆ ಕರೆದೊಯ್ಯುವ ವಿದ್ಯೆ. ಲೌಕಿಕದಲ್ಲೇ ಅಲೌಕಿಕ ಆನಂದ ನೀಡುವ ವಿದ್ಯೆ.

ಯುವಜನರು ಆಧುನಿಕ ಜಿಮ್‌ಗೆ ಮಾರುಹೋಗುತ್ತಿದ್ದಾರೆ. ಇಲ್ಲಿ ಲಕ್ಷಾಂತರ ರೂಪಾಯಿಗಳ ಉಪಕರಣ ಬೇಕಾಗುತ್ತದೆ. ಯೋಗಕ್ಕೆ ಶರೀರವೇ ಉಪಕರಣ. ಈ ಶರೀರವೆಂಬ ಉಪಕರಣವನ್ನು ಬಳಸಿದಷ್ಟೂ ಆರೋಗ್ಯವರ್ಧನೆಯ ಮೂಲಕ ಅದರ ಮೌಲ್ಯವರ್ಧನೆಯಾಗುತ್ತದೆ. ಜಿಮ್ ಮಾಡುವುದನ್ನು ಬಿಟ್ಟರೆ ಶರೀರದಲ್ಲಿ ಬೊಜ್ಜು ಬೆಳೆಯುತ್ತದೆ. ದೇಹಾಕಾರ ವಿಕಾರವಾಗುತ್ತದೆ. ಅತಿಯಾದ ಜಿಮ್ ವರ್ಕೌಟನಿಂದ ವಯಸ್ಸಾದಂತೆ ಅಂಗಾಂಗಗಳಲ್ಲಿ ನೋವು, ಮೂಳೆಸವೆತ ಕಾಣಿಸಿಕೊಳ್ಳಬಹುದು.

ಆದರೆ ಯೋಗದಿಂದ ಈ ಅಡ್ಡಪರಿಣಾಮಗಳ್ಯಾವವೂ ಇಲ್ಲ. ಒಟ್ಟಿನಲ್ಲಿ ಜಿಮ್ನಿಂದ ಯೌವನವಿದ್ದಾಗ ಶರೀರ ಬೆಳೆಸಿಕೊಳ್ಳಬಹುದೇ ವಿನಃ ಬುದ್ಧಿ ಬಲಿಸಿಕೊಳ್ಳಲು ಅಲ್ಲ ಎನ್ನಬಹುದು. ಅಲ್ಲದೇ ಜಿಮ್ಗೆ ತಿಂಗಳಿಗೆ ಸಾವಿರಾರು ರುಪಾಯಿ ಸುರಿಯಬೇಕು. ಖರ್ಚಿಲ್ಲದ ಯೋಗದಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ವಿಕಸಿತವಾಗುತ್ತದೆ.

ಜಿಮ್ ಬಾಡಿ ಮಾಡಿಕೊಂಡು ಎದೆಯುಬ್ಬಿಸಿಕೊಂಡು ಓಡಾಡುವಂತಹ ಎಷ್ಟೋ ಮಂದಿ ಇದ್ದಾರೆ.

ವರ್ಕೌಟ ತಕ್ಕಂತೆ ಅವರು ಅತಿಯಾದ ಕೃತಕ ಪೌಷ್ಟಿಕ ಆಹಾರ ಮತ್ತು ಮಾಂಸಾಹಾರಗಳನ್ನು ಸೇವಿಸಬೇಕಾಗುತ್ತದೆ. ಒಟ್ಟಿನಲ್ಲಿ ಶರೀರಕ್ಕೆ ಬೇಕೋ ಬೇಡವೋ ಹೊರಗಿನಿಂದ ಎಲ್ಲವನ್ನೂ ತಂದು ತಂದು ತುರುಕಿ ಆಕಾರ ಗಟ್ಟಿ ಮಾಡಿದಂತಿರುತ್ತದೆ. ಆದರೆ ಯೋಗಪಟುವನ್ನು ಕೂಲಂಕುಷವಾಗಿ ಗಮನಿಸಿ. ಹೊರಗಿನಿಂದ ಅವನು ಸಾಮಾನ್ಯ ಮನುಷ್ಯನಂತೆ, ಕೆಲವು ಸಲ ಸಣಕಲನಂತೆ ಕಾಣಿಸುತ್ತಾನೆ.

ಆದರೆ ಅವನ ನಡೆಯಲ್ಲಿ ಚುರುಕು ಮತ್ತು ಚಟುವಟಿಕೆ ಎದ್ದು ಕಾಣುತ್ತದೆ. ಮಾತಿನಲ್ಲಿ ಆತ್ಮವಿಶ್ವಾಸ ತುಂಬಿ ತುಳುಕುತ್ತದೆ. ನೋಟದಲ್ಲಿ ಮೊನಚಿರುತ್ತದೆ. ಏನೋ ಒಂದು ಆಕರ್ಷಣೆ ಇರುತ್ತದೆ. ಛಲದಿಂದಲೇ ಜಗತ್ತನ್ನು ಗೆಲ್ಲಬಲ್ಲ ಹುಮ್ಮಸಿರುತ್ತದೆ. ಸಂದರ್ಭ ಬಂದರೆ ಫೈಟ್ ಮಾಡುವಷ್ಟು ಗಟ್ಟಿಗರಾಗಿಯೂ ಇರುತ್ತಾರೆ.

ಯುಗದ ಹಿರೋ-ಯೋಗದ ಹಿರೋ:

ಸಿನಿಮಾ ಹಿರೋ ಆಗಲು ಜಿಮ್ ವರ್ಕೌಟ್ ಮಾಡಲೇಬೇಕೆಂಬ ಭ್ರಮೆ ಈಗಿನ ಉದಯೋನ್ಮುಖ ನಟರಲ್ಲಿದೆ. ಆದರೆ ನಿಜವಾದ ಹೀರೋ, ಕನ್ನಡ ಚಿತ್ರರಂಗದ ಸಾರ್ವಕಾಲಿಕ ಸರಿಸಾಟಿ ಇಲ್ಲದ ನಾಯಕ ಡಾ.ರಾಜಕುಮಾರ್ ಎಂದೂ ಜಿಮ್ಗೆ ಹೋಗಲಿಲ್ಲ. ಅವರು ತಮ್ಮ 40 ನೆಯ ವಯಸ್ಸಿಗೆ ಯೋಗ ಕಲಿತರು. ಅನೇಕ ಕ್ಲಿಷ್ಟಕರ ಆಸನಗಳನ್ನೂ ನಿರಾಯಾಸವಾಗಿ ಮಾಡುತ್ತಿದ್ದರು. `ಕಾಮನ ಬಿಲ್ಲು’ ಚಿತ್ರದಲ್ಲಿ ಅವರ ಯೋಗದ ಒಂದು ಝಲಕ್ ನೋಡಿರಬಹುದು. ಅವರ ಮರಣವನ್ನೂ ಇಚ್ಛಾಮರಣ ಎಂದೂ ಹೇಳಲಾಗುತ್ತಿದೆ. ಯೋಗದ ತುತ್ತತುದಿ ತಲುಪಿದವರಿಗೆ ಇದು ಅಸಾಧ್ಯವೇನಲ್ಲ. ಒಟ್ಟಿನಲ್ಲಿ ತನ್ನ ಯೌವನದಲ್ಲಿ ಯಾವ ಅಂಗಸೌಷ್ಟವ ಹೊಂದಿದ್ದರೋ ಅದೇ ಶರೀರ ಮಾಟವನ್ನು ತಮ್ಮ 77ನೆಯ ವಯಸ್ಸಿನಲ್ಲೂ ಹೊಂದಿದ್ದರು ಎನ್ನುವುದು ಸೋಜಿಗ.

ಇದು ಯೋಗಾಯೋಗ. ದಶಕಗಳ ಕಾಲ ಇವರಿಗೆ ಬಟ್ಟೆ ಹೊಲಿದುಕೊಟ್ಟ ದರ್ಜಿ ಹೇಳಿದ್ದು ಗಮನಾರ್ಹ- 34 ನೆಯ ವಯಸ್ಸಿನಲ್ಲೂ 75 ನೆಯ ವಯಸ್ಸಿನಲ್ಲೂ ರಾಜ್‌ ಅವರ ಸೊಂಟದ ಸುತ್ತಳತೆ ಒಂದೇ ಇತ್ತು ! ಇದು ಯೋಗಮಹಿಮೆ.

ಬಿಗ್ ಬಿ ಅಮಿತಾಭ್ ಕೊಂಚ ತಡವಾಗಿಯಾದರೂ ಯೋಗ ಕಲಿತು ಈಗ ಸಾಧನೆ ಮುಂದುವರಿಸಿದ್ದಾರಂತೆ. ಅವರ ಸೊಸೆ ವಿಶ್ವಸುಂದರಿ ಐಶ್ವರ್ಯ ಅಂತೂ ಮೊದಲಿನಿಂದಲೂ ಯೋಗಪ್ರಿಯೆ. ಮಗುವಾದರೂ ಶರೀರ ಮಾಗದಿರುವಂತೆ ನೋಡಿಕೊಳ್ಳಲು ಅವರು ಯೋಗದ ಮೊರೆಹೋಗಿದ್ದಾರಂತೆ. ಹಿಂದಿ ಚಿತ್ರರಂಗದ ಚಿರಯೌವನೆ ರೇಖಾ ಕೂಡ ಯೋಗದ ವಿದ್ಯಾರ್ಥಿ. ತಮ್ಮ 66ನೆಯ ವಯಸ್ಸಿನಲ್ಲಿ ಆಕೆ ಆ ಆಕರ್ಷಣೆ ಉಳಿಸಿಕೊಂಡಿದ್ದರೆ ಅದಕ್ಕೆ ಯೋಗ ಕಾರಣ. ಹಾಲಿವುಡ್ ಮೋಹನಾಂಗಿ ಮರ್ಜಿನ್‌ ಮನ್ರೋ ಕೂಡ ಭಾರತೀಯ ಯೋಗ ಅಭ್ಯಸಿಸಿದ್ದರು. ಹೀಗೆ ಯೋಗಾಂಗರಾದ ಚಿತ್ರತಾರೆಯರ ಪಟ್ಟಿ ದೊಡ್ಡದಿದೆ.

ಯೋಗಾಯೋಗಿಗಳಾಗಲು ಛಲ ಮತ್ತು ಸತತ ಪರಿಶ್ರಮ ಬೇಕು. ಕೆಲವರು ಆರಂಭ ಶೂರತ್ವದಿಂದ ಒಂದೆರಡು ದಿನ ಆಸನಗಳನ್ನು ಮಾಡುತ್ತಾರೆ. ಮೂರನೆ ದಿನ ಬೆಳಗ್ಗೆ ಎದ್ದೇಳುವುದೇ ಇಲ್ಲ.

ನೂರು ವರ್ಷ ಬದುಕಿದ ಯೋಗಪಟು ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮೀಜಿ, ಯೋಗದಿಂದ ಪ್ರಖ್ಯಾತರೂ ವಿವಾದಾತ್ಮಕ ವ್ಯಕ್ತಿಯೂ ಆಗಿ ಬೆಳೆದ ಬಾಬಾ ರಾಮದೇವ್ ಬಾಲ್ಯದಲ್ಲಿ ರೋಗಿಗಳಾಗಿದ್ದರು. ಬದುಕುವುದು ಕಷ್ಟವೆಂದು ವೈದ್ಯರು ನಿಶ್ಚಯಿಸಿಬಿಟ್ಟಿದ್ದರು. ಅಂಥವರನ್ನೂ ಯೋಗ ಬದುಕಿಸಿತು. ಜಗತ್ತಿಗೇ ಗುರುವಾಗಿ ನೀಡಿತು. ಉಪದೇಶ ಸುಲಭ. ಮಾಡಿತೋರಿಸುವುದು ಕಷ್ಟ. ಇಬ್ಬರೂ ಸ್ವತಃ ಯೋಗಾಸನಗಳನ್ನು ಮಾಡಿ ತೋರಿಸುತ್ತ, ಕಲಿಸುತ್ತ ಯೋಗ‌ ಗುರುಗಳೆಂಬ ಅಭಿದಾನಕ್ಕೆ ಪಾತ್ರರಾದರು.

ಭರತಮುನಿ ನಾಟ್ಯಶಾಸ್ತ್ರ ಬರೆದ. ಸುಶ್ರುತ ವೈದ್ಯಕೀಯ ಶಾಸ್ತ್ರ ಬರೆದ. ಚಾಣಕ್ಯ ಅರ್ಥಶಾಸ್ತ್ರ ಬರೆದ. ಕಣಾದ ವೈಮಾನಿಕ ಶಾಸ್ತ್ರ ಬರೆದ. ಪತಂಜಲಿ ಯೋಗಶಾಸ್ತ್ರವನ್ನು ಜಗತ್ತಿಗೆ ಕಾಣಿಕೆಯಾಗಿ ನೀಡಿದ. ಹೀಗೆ ಭಾರತದ ಋಷಿಗಳು ಜಗತ್ತಿಗೇ ಕಲಿಸಿಕೊಟ್ಟ ಶಾಸ್ತ್ರಗಳು ವಿದೇಶಗಳ ಶಾಲಾ ಪಠ್ಯಕ್ರಮದಲ್ಲಿ ಸೇರಿಕೊಳ್ಳುತ್ತದೆ. ಭಾರತದಲ್ಲೇ ವಿರೋಧ ವ್ಯಕ್ತವಾಗುತ್ತದೆ. ಯೋಗದ ಮಟ್ಟಿಗೆ ಹೇಳುವುದಾದರೆ ವಿರೋಧಿಸುವವರಿಗೇ ನಷ್ಟ.

  • ಎಸ್.ಎಸ್.ನಾಗನೂರಮಠ

Latest News

ಆರೋಗ್ಯ

ಸಕ್ಕರೆ ಖಾಯಿಲೆ ಇರುವವರು ಈ ಹಣ್ಣುಗಳನ್ನು ಸೇವಿಸಬಹುದು ; ತಪ್ಪದೇ ಈ ಮಾಹಿತಿ ಓದಿ

ತಜ್ಞರ ಪ್ರಕಾರ, ಸಕ್ಕರೆ ಕಾಯಿಲೆ ಇರುವವರು ಈ 5 ವಿಧದ ಹಣ್ಣುಗಳನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ಅಂತಹ ಹಣ್ಣುಗಳ ವಿವರ ಇಲ್ಲಿದೆ ನೋಡಿ.

ದೇಶ-ವಿದೇಶ

ದೇಶದ ಹೆಮ್ಮೆ ತ್ರಿವರ್ಣ ಧ್ವಜವೂ ಕೂಡ ಬಿಜೆಪಿಗೆ ವ್ಯಾಪಾರದ ಸರಕಾಗಿದೆ : ಬಿ.ಕೆ.ಹರಿಪ್ರಸಾದ್

38×11,80,000=4.484 ಕೋಟಿ, ಹೇಗಿದೆ ಮೋದಿ ಸರ್ಕಾರದ ಲೂಟಿ? ಕೇಂದ್ರದ ಮೋದಿ ಸರ್ಕಾರ ವಸೂಲಿ ಬಾಜಿತನಕ್ಕೆ ರಾಷ್ಟ್ರಧ್ವಜವನ್ನ ಬಳಸಿಕೊಂಡಿರುವುದು ಅಕ್ಷಮ್ಯ ಅಪರಾಧ

ಕ್ರೀಡೆ

ಕಾಮನ್‌ವೆಲ್ತ್ ಗೇಮ್ಸ್‌ 2022 ; ಕಂಚಿನ ಪದಕ ಗೆದ್ದ ಪತ್ನಿಯನ್ನು ಅಭಿನಂದಿಸಿದ ದಿನೇಶ್ ಕಾರ್ತಿಕ್

ಭಾರತದ ಸ್ಕ್ವ್ಯಾಶ್ ಆಟಗಾರ್ತಿ ದೀಪಿಕಾ ಪಲ್ಲಿಕ್ಕಲ್(Deepika Pallikal) ಮಿಕ್ಸೆಡ್ ಡಬಲ್ಸ್ ವಿಭಾಗದಲ್ಲಿ ಕಂಚಿನ ಪದಕ(Bronze Medal) ಗೆದ್ದುಕೊಂಡಿದ್ದಾರೆ.

ಆರೋಗ್ಯ

ದೇಹ ನೀಡುವ `ಈ’ ಸೂಚನೆಗಳು ಕಿಡ್ನಿ ವೈಪಲ್ಯವನ್ನು ಸೂಚಿಸುತ್ತವೆ ; ಇಲ್ಲಿದೆ ಮಾಹಿತಿ ಓದಿ

ಕಿಡ್ನಿ(Kidney) ನಮ್ಮ ದೇಹದ ಪ್ರಮುಖ ಅಂಗವಾಗಿದೆ. ದೇಹದಲ್ಲಿ ಶುದ್ಧ ರಕ್ತವನ್ನು ಪರಿಚಲನೆ ಮಾಡುವಲ್ಲಿ ಮೂತ್ರಪಿಂಡಗಳು ಮುಖ್ಯ ಪಾತ್ರವಹಿಸುತ್ತವೆ.