ಕಪ್ಪಾದ ಕೂದಲು ನಮ್ಮ ವ್ಯಕ್ತಿತ್ವ ಹಾಗೂ ಆತ್ಮವಿಶ್ವಾಸದ ಸಂಕೇತ. ವಯಸ್ಸಾದಂತೆ ಕೂದಲು ಬೆಳ್ಳಗಾಗುವುದು ಸಾಮಾನ್ಯ ವಿದ್ಯಮಾನ.
ಆದರೆ ಸಣ್ಣ ವಯಸ್ಸಿನಲ್ಲಿಯೇ ಕೆಲವರು ಬಿಳಿಕೂದಲಿನ ಸಮಸ್ಯೆಗೆ ಗುರಿಯಾಗುತ್ತಾರೆ. ಕೆಲವರಿಗೆ ಅಣುವಂಶೀಯ ಕೊಡುಗೆಯಾಗಿದ್ದರೆ, ಇನ್ನೂ ಕೆಲವರಿಗೆ ಅವರ ಅಭ್ಯಾಸಗಳಿಂದ ಬಿಳಿಗೂದಲು ಹುಟ್ಟಬಹುದು. ಹಾಗಾದರೆ ಕೂದಲು ಬಿಳಯಾಗುವುದಕ್ಕೆ ಕಾರಣವಾಗುವ ಕೆಲವೊಂದು ಅಭ್ಯಾಸಗಳಾವುವು ಎಂಬುದನ್ನು ಇಲ್ಲಿ ನೋಡೋಣ.
ಅಕಾಲಿಕ ವಯಸ್ಸಿನಲ್ಲಿ ಕೂದಲು ಬಿಳಯಾಗುವುದಕ್ಕೆ ಕಾರಣವಾಗುವ ಅಂಶಗಳಾವುವು ಎಂಬುದನ್ನು ಈ ಕೆಳಗೆ ನೀಡಲಾಗಿದೆ:
ಒತ್ತಡ:
ಪ್ರತಿಯೊಬ್ಬ ವ್ಯಕ್ತಿಯು ಒಂದಲ್ಲ ಒಂದು ಸಮಯದಲ್ಲಿ ಒತ್ತಡವನ್ನು ಅನುಭವಿಸುತ್ತಾನೆ. ಆದರೆ ದೀರ್ಘಕಾಲದ ಒತ್ತಡವು ನಿದ್ರಾಹೀನತೆ, ಆತಂಕ ಮತ್ತು ಹಸಿವಿನ ಬದಲಾವಣೆಯಂತಹ ಸಮಸ್ಯೆಗಳಿಗೆ ಕಾರಣವಾಗಬಹುದು ಜೊತೆಗೆ ಇದು ಕೂದಲಿನ ಸಮಸ್ಯೆಗೂ ಕಾರಣವಾಗಬಹುದು. ಇವೆಲ್ಲವೂ ನಮ್ಮ ಕೂದಲಿನ ಮೇಲೆ ತೀವ್ರವಾಗಿ ಪರಿಣಾಮ ಬೀರಿ, ಅಕಾಲಿಕ ಬೂದುಬಣ್ಣಕ್ಕೆ ಕಾರಣವಾಗಬಹುದು. ನಿಮ್ಮ ಕೂದಲು ಉದುರುವುದು ಒತ್ತಡ-ಪ್ರೇರಿತವಾಗಿದ್ದರೆ, ವಿಶ್ರಾಂತಿ ಪಡೆಯಲು ಸಹಾಯ ಮಾಡುವ ಚಟುವಟಿಕೆಗಳಾದ ಧ್ಯಾನ ಮೊದಲಾದವುಗಳನ್ನು ಪ್ರಯತ್ನಿಸಿ.
ಕೂದಲಿಗೆ ಎಣ್ಣೆ ಹಾಕದಿರುವುದು:
ನಮ್ಮ ಕೂದಲಿಗೆ ಎಣ್ಣೆ ಹಾಕುವುದರಿಂದ ಮೇದೋಗ್ರಂಥಿಗಳ ಸ್ರಾವ ಉತ್ಪಾದನೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ನಮ್ಮ ನೆತ್ತಿಯು ಒಣಗಲು ಮತ್ತು ತುರಿಕೆ ಬರದಂತೆ ತಡೆಯುತ್ತದೆ. ನಮ್ಮ ನೆತ್ತಿಯ ಮೇಲೆ ಬೆಚ್ಚಗಿನ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ಆರೋಗ್ಯಕರ ಕೂದಲನ್ನು ಕಾಪಾಡಿಕೊಳ್ಳಲು ಸಹಾಯವಾಗುವುದು. ಹೇರ್ ಆಯಿಲಿಂಗ್ ಅನ್ನು ನಿಯಮಿತವಾಗಿ ಮಾಡಿದಾಗ, ಕೂದಲಿನ ಅಕಾಲಿಕ ಬಿಳಿಬಣ್ಣ ಕಡಿಮೆಯಾಗುವುದು.
ಸೂರ್ಯನ ಬಿಸಿಲಿಗೆ ಹೆಚ್ಚು ಹೋಗುವುದು:
ಕೂದಲು ಅಕಾಲಿಕವಾಗಿ ಬಿಳಿಯಾಗುವುದರ ಹಿಂದಿನ ಪ್ರಮುಖ ಕಾರಣವೆಂದರೆ ಸೂರ್ಯ ಬಿಸಿಲಿನಲ್ಲಿ ಹೆಚ್ಚು ಸಮಯ ಕಳೆಯುವುದು. ಸೂರ್ಯನಿಂದ ಉತ್ಪತ್ತಿಯಾಗುವ ಯುವಿ ಕಿರಣಗಳು ಚರ್ಮಕ್ಕೆ ಮಾತ್ರವಲ್ಲ, ಕೂದಲಿಗೆ ಕೆಟ್ಟದ್ದಾಗಿರುತ್ತವೆ, ಆದ್ದರಿಂದ ದೀರ್ಘಾವಧಿಯವರೆಗೆ ಹೊರಗಿರುವುದು ನಮ್ಮ ಕೂದಲು ಮತ್ತು ನೆತ್ತಿಯನ್ನು ಹಾನಿಗೊಳಿಸುತ್ತದೆ. ಇದರ ಪರಿಣಾಮವಾಗಿ ಒಣ ಮತ್ತು ಬಿಳಿ ಕೂದಲು ಉಂಟಾಗುತ್ತದೆ. ಇಂತಹ ಸಮಯದಲ್ಲಿ ನಮ್ಮ ಕೂದಲನ್ನು ರಕ್ಷಿಸಲು ಛತ್ರಿ ಅಥವಾ ಸ್ಕಾರ್ಫ್ ಅನ್ನು ಪ್ರಯತ್ನಿಸಬೇಕು.
ಧೂಮಪಾನ:
ಕೂದಲಿನ ಅಕಾಲಿಕ ಬೂದುಬಣ್ಣಕ್ಕೆ ಧೂಮಪಾನ ಒಂದು ಮುಖ್ಯ ಕಾರಣವಾಗಿದೆ. ಧೂಮಪಾನವು ನಮ್ಮ ಶ್ವಾಸಕೋಶಕ್ಕೆ ಮಾತ್ರವಲ್ಲದೆ ನಮ್ಮ ಒತ್ತಡಕ್ಕೂ ಕಾರಣವಾಗಿದೆ, ಸಿಗರೇಟಿನಲ್ಲಿರುವ ವಿಷವು ನಮ್ಮ ಕೂದಲು ಕಿರುಚೀಲಗಳನ್ನು ಹಾನಿಗೊಳಿಸುತ್ತದೆ ಮತ್ತು ಬಿಳಿ ಕೂದಲಿಗೆ ಕಾರಣವಾಗುತ್ತದೆ.
ಕೂದಲು ಉತ್ಪನ್ನಗಳಲ್ಲಿನ ರಾಸಾಯನಿಕಗಳು:
ನಾವೆಲ್ಲರೂ ನಮ್ಮ ಕೂದಲನ್ನು ಸ್ಟೈಲಿಂಗ್ ಮಾಡುವುದನ್ನು ಇಷ್ಟಪಡುತ್ತೇವೆ, ಆದರೆ ಆ ರಾಸಾಯನಿಕಗಳನ್ನು ಹಚ್ಚುವುದರಿಂದ ನಮ್ಮ ಕೂದಲಿಗೆ ಆಗುವ ಹಾನಿಯ ಬಗ್ಗೆ ಎಂದಿಗೂ ಯೋಚಿಸುವುದಿಲ್ಲ. ಹೇರ್ ಕಲರಿಂಗ್ ಮತ್ತು ಇತರ ಉತ್ಪನ್ನಗಳಂತಹ ರಾಸಾಯನಿಕಗಳು ನಮ್ಮ ಕೂದಲಿಗೆ ದೊಡ್ಡ ಹಾನಿಯನ್ನುಂಟುಮಾಡುತ್ತವೆ . ಅದರ ಅಂತಿಮ ಫಲವೇ ಬಿಳಿ ಕೂದಲು ನೆನಪಿಡಿ.
ಅಸಮರ್ಪಕ ಆಹಾರ ಪದ್ಧತಿ:
ನಾವು ಸೇವಿಸುವ ಆಹಾರವು ನಮ್ಮ ದೇಹದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ನಮ್ಮ ಆಹಾರದಲ್ಲಿನ ವಿಟಮಿನ್ ಮತ್ತು ಪೋಷಕಾಂಶಗಳ ಕೊರತೆಯು ನಮ್ಮ ಕೂದಲಿನ ಆರೋಗ್ಯದ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತದೆ. ಕೂದಲಿನ ಉತ್ತಮ ಆರೋಗ್ಯಕ್ಕಾಗಿ ಸಾಕಷ್ಟು ಪ್ರಮಾಣದ ನೀರು, ವಿಟಮಿನ್ ಭರಿತ ಮತ್ತು ಖನಿಜಗಳು ತುಂಬಿದ ಸಮತೋಲಿತ ಆಹಾರವನ್ನು ಸೇವಿಸುವುದು ಮುಖ್ಯ.