ಸ್ವಲ್ಪ ತಿಂದರೂ ಹೊಟ್ಟೆ ತುಂಬಿಸುವ ಅಂದ್ರೆ ಅದು ಪರೋಟ. ಬೆಳಗಿನ ಉಪಹಾರದಲ್ಲಿ ಬಿಸಿಬಿಸಿ ಮೃದುವಾದ, ಎರಡೆರಡು ಲೇಯರ್ ನಿಂದ ಕೂಡಿರುವ ಪರೋಟ ಇದ್ದುಬಿಟ್ರೆ ಮಧ್ಯಾಹ್ನದವರೆಗೂ ಯಾವುದೇ ಹಸಿವಿರುವುದಿಲ್ಲ. ಆದ್ರೆ ಅದು ತಣ್ಣಗಾಗಿ ಗಟ್ಟಿಯಾದ್ರೆ ಯಾರೂ ಅದರ ಹತ್ತಿರನೂ ಸುಳಿಯುವುದಿಲ್ಲ, ಹಾಗಾದರೆ ಪರೋಟ ತಣ್ಣಗಾದ ಮೇಲೆಯೂ ಮೃದುವಾಗಿರಬೇಕಾದ್ರೆ ಏನ್ ಮಾಡ್ಬೇಕು ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ಮೃದುವಾದ ಪರೋಟ ಮಾಡಲು ಸುಲಭವಾದ ಸಲಹೆಗಳನ್ನು ಈ ಕೆಳಗೆ ನೀಡಲಾಗಿದೆ:
ಪರೋಟ ಹಿಟ್ಟನ್ನು ಬೆರೆಸುವಾಗ ತುಪ್ಪ ಸೇರಿಸಿ:
ಪರೋಟಾಗೆ ಹಿಟ್ಟನ್ನು ಬೆರೆಸುವಾಗ ತುಪ್ಪವನ್ನು ಬಳಸಿ. ನೀವು ಒಂದು ಕಪ್ ಹಿಟ್ಟನ್ನು ತೆಗೆದುಕೊಂಡಿದ್ದರೆ, ಅದಕ್ಕೆ ಸ್ವಲ್ಪ ಕರಗಿದ ತುಪ್ಪವನ್ನು ಸೇರಿಸಬೇಕು. ನೆನಪಿನಲ್ಲಿಡಿ, ತುಪ್ಪ ತುಂಬಾ ಬಿಸಿಯಾಗಿರಬಾರದು. ಈಗ 1/4 ಚಮಚ ಉಪ್ಪು ಸೇರಿಸಿ, ನೀರು ಹಾಕಿ ಹಿಟ್ಟನ್ನು ಬೆರೆಸಿ. ನೀರು ಹಾಕುವಾಗ ಎಚ್ಚರಿಕೆಯಿಂದಿರಿ, ನೀರು ಹೆಚ್ಚಾಯಿತು ಎಂದು ಮತ್ತೆ ಮತ್ತೆ ಹಿಟ್ಟು ಬರೆಸಲು ಹೋಗಬಾರದು. ಹಿಟ್ಟನ್ನು ಬೆರೆಸಿದ ನಂತರ, ಎರಡು ಮೂರು ಚಮಚ ನೀರನ್ನು ಚಿಮುಕಿಸಿ, ತಟ್ಟೆಯಿಂದ ಮುಚ್ಚಿ. ಸ್ವಲ್ಪ ಸಮಯದ ನಂತರ ಮತ್ತೆ ಹಿಟ್ಟನ್ನು ಎರಡು ಮೂರು ನಿಮಿಷಗಳ ಕಾಲ ನಾದಿಕೊಂಡು, ಪರೋಟ ತಯಾರಿಸಿ.
ಮೊಸರು ಸಹ ಬಳಸಬಹುದು:
ಉಪ್ಪು ಮತ್ತು ತುಪ್ಪದ ಜೊತೆಗೆ ನೀವು ಹಿಟ್ಟು ತಯಾರಿಸಲು ಮೊಸರು ಬಳಸಲು ಸಹ ಆಯ್ಕೆ ಮಾಡಬಹುದು. ಇದಕ್ಕಾಗಿ ಯಾವಾಗಲೂ ತಾಜಾ ಮೊಸರು ಬಳಸಿ. ಹಿಟ್ಟನ್ನು ಬೆರೆಸುವಾಗ, ಅದಕ್ಕೆ ಮೊಸರು ಸೇರಿಸಿ. ಹಿಟ್ಟು ಸರಿಯಾಗಿ ಮಿಕ್ಸ್ ಆಗದಿದ್ದರೆ ಅದಕ್ಕೆ ನೀರನ್ನು ಬಳಸಿ, ಚೆನ್ನಾಗಿ ಮಿಶ್ರಣ ಮಾಡಿ ಅದನ್ನು ಮುಚ್ಚಿ ಮತ್ತು ಕೊನೆಯದಾಗಿ ನೀರನ್ನು ಬಳಸಬೇಡಿ. 5 ರಿಂದ 6 ನಿಮಿಷಗಳ ಕಾಲ ಬಿಡಿ. ನಂತರ ಹಿಟ್ಟು ಲಟ್ಟಿಸುವಾಗ ನಿಮ್ಮ ಕೈಗೆ ಸ್ವಲ್ಪ ನೀರು ತಾಗಿಸಿಕೊಂಡು, ಪರೋಟ ತಯಾರಿಸಿ.
ಅಡುಗೆ ಸೋಡಾ ಸಹ ಉಪಕಾರಿ:
ಮೊಸರಿನಂತೆ ನೀವು ಅಡುಗೆ ಸೋಡಾ ಬಳಸಿ ಸಹ ಮೃದುವಾದ ಪರೋಟ ತಯಾರಿಸಬಹುದು. ಇದಕ್ಕಾಗಿ ಎರಡು ಕಪ್ ಹಿಟ್ಟಿಗೆ 1/4 ಚಮಚ ಅಡಿಗೆ ಸೋಡಾ ಮಿಶ್ರಣ ಮಾಡಿ. ಜೊತೆಗೆ ಸ್ವಲ್ಪ ಉಪ್ಪು ಸೇರಿಸಿ, ನೀರಿನ ಸಹಾಯದಿಂದ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು 6 ರಿಂದ 7 ನಿಮಿಷಗಳ ಕಾಲ ಮುಚ್ಚಿ. ತದನಂತರ ಸ್ವಲ್ಪ ನೀರನ್ನು ಹಾಕಿ ಮತ್ತೆ ಬೆರೆಸಿಕೊಳ್ಳಿ. . ನೀವು ಇದನ್ನು ಮಾಡಿದರೆ, ಹಿಟ್ಟು ಸಂಪೂರ್ಣವಾಗಿ ಪರಿಪೂರ್ಣವಾಗಿರುತ್ತದೆ ಮತ್ತು ಪರೋಟ ಸಹ ಮೃದುವಾಗುತ್ತದೆ.