ಈಗೀಗ ನಗರಗಳಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮೀರಿದೆ. ಜೊತೆಗೆ ಮನೆಯಲ್ಲಿ ನಾಯಿಯನ್ನು ಮುದ್ದು ಮಗುವಿನಂತೆ ಸಾಕಿ ಜೋಪಾನ ಮಾಡುವ ಶ್ವಾನ ಪ್ರಿಯರಿಗೂ ಕೊರತೆಯಿಲ್ಲ.

ಆದರೆ ಅಹಮಬಾದ್ನಲ್ಲಿ(Ahemadabad) ಇತ್ತೀಚಿಗೆ ಮನುಷ್ಯನಿಗೆ ನಾಯಿ ಕಚ್ಚಿರುವುದೇ ದೊಡ್ಡ ಮಟ್ಟದ ಸುದ್ದಿಯಾಗಿದೆ. ಹಾಗಂತ ಕಚ್ಚಿಸಿಕೊಂಡ ವ್ಯಕ್ತಿಗೆ ಏನೂ ತೊಂದರೆಯಾಗಿಲ್ಲ. ಅವನು ಆರಾಮಾಗಿ ಇಂಜೆಕ್ಷನ್ ತೆಗೆದುಕೊಂಡು ಹುಷಾರಾಗಿದ್ದಾನೆ. ಆದರೆ ನಾಯಿಯ ಮಾಲೀಕ ಮಾತ್ರ ಜೈಲು ಕಂಬಿ ಎಣಿಸುತ್ತಿದ್ದಾನೆ! ಭರೇಶ್(Bharesh) ಎನ್ನುವವರು ಡಾಬರ್ ಮನ್ ನಾಯಿಯನ್ನು ಮುದ್ದಿನಿಂದ ಸಾಕಿದ್ದರು. ನಾಯಿಯ ಮೇಲಿನ ಪ್ರೀತಿಯೇ ಅವರಿಗೆ ಮುಳುವಾಗಿ ಪರಿಣಮಿಸಿದೆ.
ವಿಷಯ ಏನೆಂದರೆ, ಈ ನಾಯಿ ಅವಿನಾಶ್ ಎನ್ನುವವರಿಗೆ ಕಚ್ಚಿ ಗಾಯಗೊಳಿಸಿತ್ತು. ಇದು ನಾಯಿಯ ತಪ್ಪಾದರೆ, ಇದನ್ನು ನೋಡುತ್ತಿದ್ದ ಮಹಿಳೆಯೊಬ್ಬರು ಗಾಬರಿಯಿಂದ ಓಡಿ ಹೋಗುವಾಗ ಬಿದ್ದು ಮೂಳೆ ಮುರಿದುಕೊಂಡಿದ್ದರು. ನಂತರ ಅವಿನಾಶ್ ಹಾಗೂ ಕಾಲು ಮುರಿದುಕೊಂಡ ಮಹಿಳೆ ಪೊಲೀಸರಿಗೆ ದೂರು ನೀಡಿದ್ದರು. ವಿಷಯ ಕೋರ್ಟ್ವರೆಗೂ ಹೋಯಿತು. ಇವರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಕಾಲು ಮುರಿದುಕೊಂಡ ಮಹಿಳೆಯ ಕುಟುಂಬದವರು ಮಾಡಿಕೊಂಡ ಮನವಿಯನ್ನು ಪುರಸ್ಕರಿಸಿರುವ ಕೋರ್ಟ್ ಐಪಿಸಿ ಸೆಕ್ಷನ್ 289ರ ಪ್ರಕಾರ ಭರೇಶ್ಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ!

ಯಾರೋ ಮಾಡಿದ ತಪ್ಪಿಗೆ ಇನ್ನ್ಯಾರಿಗೋ ಶಿಕ್ಷೆ ಎನ್ನುವುದಕ್ಕೆ ಇದಕ್ಕಿಂತ ಒಳ್ಳೆಯ ಉದಾಹರಣೆ ಇನ್ನೊಂದಿಲ್ಲ.