ಶಿವಮೊಗ್ಗ, ಮಾ. 13: ರಾಮ ಕೇವಲ ಬಿಜೆಪಿಗೆ ಮಾತ್ರ ಸೇರಿದವನಾ? ಎಂದು ಪ್ರಶ್ನಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ನಾವೆಲ್ಲಾ ಶ್ರೀರಾಮನ ಮಕ್ಕಳು ಎಂದಿದ್ದಾರೆ.
ಶಿವಮೊಗ್ಗ ಚಲೋ ಸಮಾವೇಶಕ್ಕೂ ಮುನ್ನ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ನಾವು ಕೂಡ ಹಿಂದುಗಳೆ. ರಾಮನ ಭಕ್ತರೆ. ನನ್ನ ಹೆಸರಲ್ಲಿ ‘ಶಿವ’ನಿದ್ದರೆ, ಸಿದ್ದರಾಮಯ್ಯ ಹೆಸರಲ್ಲಿ ‘ರಾಮ’ನಿದ್ದಾನೆ. ಹಾಗಾಗಿ ನಾವೆಲ್ಲಾ ಶ್ರೀರಾಮನ ಮಕ್ಕಳು ಎಂದರು.
ರಾಜ್ಯದೆಲ್ಲೆಡೆ ಕಾರ್ಯಕರ್ತರ ಮೇಲೆ ಕಿರುಕುಳ ನೀಡಲು ಬಿಜೆಪಿ ಯತ್ನಿಸಿದೆ. ನಾವು ಕೂಡ ಎಲ್ಲೆಡೆ ಕೇಸು ದಾಖಲಿಸುತ್ತೇವೆ. ಬಿಜೆಪಿ ಅಧಿಕಾರ ದುರುಪಯೋಗ ಮಾಡಿಕೊಂಡು ಭದ್ರಾವತಿಯಲ್ಲಿ ನಮ್ಮ ಶಾಸಕ ಬಿ.ಕೆ.ಸಂಗಮೇಶ್ವರರ ಮೇಲೆ ಕೇಸು ಹಾಕಿದೆ. ಕಬಡ್ಡಿ ಪಂದ್ಯಾವಳಿಯಲ್ಲಿ ಮ್ಯಾಟ್ ಅನ್ನು ಸುಟ್ಟುಹಾಕಲು ಯತ್ನಿಸಿದ್ದು, ಇದೀಗ ಅದಕ್ಕೆ ಬೇರೆ ಬಣ್ಣ ಕಟ್ಟಿ ಸಮಸ್ಯೆ ಸೃಷ್ಟಿಸಿದ್ದಾರೆ ಎಂದು ಡಿಕೆಶಿ ಕಿಡಿಕಾರಿದರು.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಡಿಕೆಶಿ, ಎಸ್‌ಐಟಿ ತನಿಖೆ ಸರಿದಾರಿಯಲ್ಲಿ ನಡೆಯಬೇಕು. ಈ ಬಗ್ಗೆ ನಾವು ಕೂಡ ಗಮನ ಹರಿಸುತ್ತೇವೆ ಎಂದು ಹೇಳಿದರು.
ಸಿಎಂ ಬಿಎಸ್‌ವೈ ತವರಲ್ಲಿ ಶಕ್ತಿ ಪ್ರದರ್ಶನಕ್ಕೆ ಸಜ್ಜಾದ ಕಾಂಗ್ರೆಸ್ನ ಜನಾಕ್ರೋಶ ಪ್ರತಿಭಟನೆ-ಶಿವಮೊಗ್ಗ ಚಲೋ ಸಮಾವೇಶ ಇಂದು ಸಂಜೆ 4ಕ್ಕೆ ಆರಂಭವಾಯಿತು. ಮಾಜಿ ಸಿಎಂ ಸಿದ್ದರಾಮಯ್ಯ, ರಾಮಲಿಂಗಾರೆಡ್ಡಿ, ಡಾ.ಜಿ.ಪರಮೇಶ್ವರ, ಎಸ್.ಆರ್.ಪಾಟೀಲ್, ಆರ್.ಧ್ರುವನಾರಾಯಣ ಸೇರಿ ಪ್ರಮುಖ ನಾಯಕರು ಉಪಸ್ಥಿತರಿದ್ದರು.