15ನೇ ಚುಟುಕು ಕ್ರಿಕೆಟ್ ಐಪಿಎಲ್ಗೆ ಇನ್ನೇನು ಕೆಲವೇ ದಿನಗಳಲ್ಲಿ ಚಾಲನೆ ದೊರೆಯಲಿದ್ದು, ಇದಕ್ಕಾಗಿ ಕಿರಿಯರ ಜೊತೆ ಹಿರಿಯ ಆಟಗಾರರು ಕೂಡ ಪೈಪೋಟಿ ನಡೆಸುತ್ತಿದ್ದಾರೆ. ಹಿರಿಯರ ಪಟ್ಟಿಯಲ್ಲಿ ಸಾಕಷ್ಟು ಅನುಭವಿಗಳಿದ್ದು ಅವರ ವಿವರಗಳು ಹೀಗಿವೆ. ಇಮ್ರಾನ್ ತಾಹಿರ್ 43 ವರ್ಷ ಪ್ರಸ್ತುತ ಪಾಕಿಸ್ತಾನ ಸೂಪರ್ ಲೀಗ್ನಲ್ಲಿ ಮುಲ್ತಾನ್ ಸುಲ್ತಾನ್ ತಂಡದ ಪರ ಆಡುತ್ತಿರುವ ದಕ್ಷಿಣ ಆಫ್ರಿಕಾ ಲೆಜೆಂಡರಿ ಸ್ಪಿನ್ನರ್ ಇಮ್ರಾನ್ ತಾಹಿರ್, ತಮ್ಮ 43ನೇ ವಯಸ್ಸಿನಲ್ಲೂ ಐಪಿಎಲ್ ಆಡುವ ಬಯಕೆ ಹೊಂದಿದ್ದು, ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಹೆಸರು ನೋಂದಾಯಿಸಿದ್ದಾರೆ.
ತಾಹಿರ್ 2018 ರಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿದ್ದು, ಇದೇ ಮೊದಲ ಬಾರಿಗೆ ತಂಡದಿಂದ ಬಿಡುಗಡೆಯಾದರು. ತನ್ನ ಚಮಾತ್ಕಾರ ಸ್ಪಿನ್ ದಾಳಿಯಿಂದ ಎದುರಾಳಿ ವಿಕೆಟ್ ಬೇಟೆಯಾಡುವ ಇಮ್ರಾನ್ ತಾಹಿರ್ನನ್ನ ಹೊಂದಲು ಅನೇಕ ತಂಡಗಳು ಬಯಸುತ್ತವೆ. ಇಮ್ರಾನ್ ತಾಹಿರ್ 59 ಐಪಿಎಲ್ ಪಂದ್ಯಗಳಲ್ಲಿ 82 ವಿಕೆಟ್ಗಳನ್ನು ಪಡೆದಿದ್ದಾರೆ. ಸರಾಸರಿ 20.76 ಮತ್ತು 7.76 ರ ಎಕಾನಮಿ ಮತ್ತು 16.0 ನಲ್ಲಿ ಸ್ಟ್ರೈಕ್ ರೇಟ್ನಲ್ಲಿ ಬೌಲಿಂಗ್ ಮಾಡಿದ್ದಾರೆ.
ಅಮಿತ್ ಮಿಶ್ರಾ 39 ವರ್ಷ : ದೆಹಲಿ ಮೂಲದ ಅನುಭವಿ ಸ್ಪಿನ್ನರ್, ಐಪಿಎಲ್ನಲ್ಲಿ ಅತಿ ಹೆಚ್ಚು ಹ್ಯಾಟ್ರಿಕ್ ವಿಕೆಟ್ ಪಡೆದಿರುವ 39 ವರ್ಷ ವಯಸ್ಸಿನ ಅಮಿತ್ ಮಿಶ್ರಾ ಐಪಿಎಲ್ ಮೆಗಾ ಹರಾಜಿನಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ. ಹೀಗಾಗಿ ಮುಂಬರುವ ಹರಾಜಿನಲ್ಲಿ ಅವರನ್ನು ಕಡೆಗಣಿಸಬಹುದು. ಮಿಶ್ರಾ ಅವರು 154 ಐಪಿಎಲ್ ಪಂದ್ಯಗಳಲ್ಲಿ 166 ವಿಕೆಟ್ಗಳನ್ನು ಹೊಂದಿದ್ದಾರೆ. ಸರಾಸರಿ 23.95 ಮತ್ತು 7.35 ರ ಎಕಾನಮಿ ಮತ್ತು 19.5 ರಲ್ಲಿ ಸ್ಟ್ರೈಕ್ರೇಟ್ನಲ್ಲಿ ಬೌಲಿಂಗ್ ಮಾಡಿದ್ದಾರೆ. ಮಿಶ್ರಾ 2021 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಕೇವಲ ನಾಲ್ಕು ಪಂದ್ಯಗಳನ್ನು ಆಡಿದ್ದರು.
ಎಸ್. ಶ್ರೀಶಾಂತ್ 39 ವರ್ಷ : ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಆರೋಪಿಯಾಗಿ ಏಳು ವರ್ಷಗಳ ಕಾಲ ಕ್ರಿಕೆಟ್ ನಿಂದ ದೂರ ಉಳಿದಿರುವ ಕೇರಳದ ವೇಗಿ ಶ್ರೀಶಾಂತ್ ಬಹುತೇಕ ಕೊನೆಯ ಬಾರಿಗೆ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ. ಆದ್ರೆ ವಿಶ್ಲೇಷಕರ ಪ್ರಕಾರ ಅವರನ್ನು ಖರೀದಿಸಲು ಯಾವ ತಂಡವೂ ಮುಂದಾಗುವುದಿಲ್ಲ ಎಂದು ಅಂದಾಜಿಸಲಾಗಿದೆ. ಏಕೆಂದರೆ ಅವರ ವಯಸ್ಸು ಕೂಡ ಒಂದು ಅಂಶವಾಗಿದ್ದು, ಬಹುತೇಕ ಫಾರ್ಮ್ನಲ್ಲಿಲ್ಲ. 2007ರ ಟಿ20 ವಿಶ್ವಕಪ್ ಹಾಗೂ 2011 ಐಸಿಸಿ ಏಕದಿನ ವಿಶ್ವಕಪ್ ಗೆಲುವಿನ ಸದಸ್ಯರಾದ ಶ್ರೀಶಾಂತ್ ಅವರು 40 ಐಪಿಎಲ್ ಪಂದ್ಯಗಳಲ್ಲಿ 44 ವಿಕೆಟ್ ಪಡೆದಿದ್ದಾರೆ.
ಡ್ವೇನ್ ಬ್ರಾವೋ 38 ವರ್ಷ : ಐಪಿಎಲ್ 2022ರ ಹರಾಜಿನಲ್ಲಿ ಭಾಗಿಯಾಗುತ್ತಿರುವ ಹಿರಿಯ ವಯಸ್ಸಿನ ಆಟಗಾರರಲ್ಲಿ ವೆಸ್ಟ್ ಇಂಡೀಸ್ನ ಡ್ವೇನ್ ಬ್ರಾವೋ ಕೂಡ ಒಬ್ಬರು. ಚೆನ್ನೈ ಸೂಪರ್ ಕಿಂಗ್ಸ್ನ ತಂಡದಲ್ಲಿ ಹಲವು ವರ್ಷಗಳ ಕಾಲ ಆಟವಾಡಿದ್ದ ಬ್ರಾವೋರನ್ನ ಈ ಬಾರಿ ಸಿಎಸ್ಕೆ ರೀಟೈನ್ ಮಾಡಿಕೊಂಡಿಲ್ಲ. ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ ಭಾಗವಹಿಸಲು ಬ್ರಾವೋ ಹೆಸರನ್ನು ನೋಂದಾಯಿಸಿದ್ದಾರೆ. ಅವರನ್ನು ಸಿಎಸ್ಕೆ ಬಿಡುಗಡೆ ಮಾಡಿದ ಬಳಿಕ ದೊಡ್ಡ ಮೊತ್ತಕ್ಕೆ ಹರಾಜಾದ್ರೂ ಆಶ್ಚರ್ಯವಿಲ್ಲ. ಏಕೆಂದರೆ CSK ನಾಲ್ಕು ಐಪಿಎಲ್ ಪ್ರಶಸ್ತಿಗಳನ್ನು ಗೆಲುವಿನಲ್ಲಿ ಭಾಗಿಯಾಗಿದ್ದ ಬ್ರಾವೋ ಎರಡು ಪರ್ಪಲ್ ಕ್ಯಾಪ್ಗಳನ್ನು (2013, 2015) ಗೆದ್ದಿದ್ದಾರೆ. ಈ ವಿಂಡೀಸ್ ಆಲ್ ರೌಂಡರ್ 151 ಐಪಿಎಲ್ ಪಂದ್ಯಗಳಲ್ಲಿ 1,537 ರನ್ ಮತ್ತು 167 ವಿಕೆಟ್ಗಳನ್ನು ತಮ್ಮ ಹೆಸರಿಗೆ ದಾಖಲಿಸಿದ್ದಾರೆ.
ಫಿಡೆಲ್ ಎಡ್ವರ್ಡ್ಸ್ 40 ವರ್ಷ : ವಿಂಡೀಸ್ ವೇಗಿ ಫಿಡೆಲ್ ಎಡ್ವರ್ಡ್ಸ್ 40 ವರ್ಷ ವಯಸ್ಸಿನವರಾಗಿದ್ದು, ಐಪಿಎಲ್ 2022 ರ ಮೆಗಾ ಹರಾಜಿಗೆ ನೋಂದಾಯಿಸಿರುವ ಹಿರಿಯ ಆಟಗಾರರಲ್ಲಿ ಒಬ್ಬರು. 2009 ರಲ್ಲಿ ಡೆಕ್ಕನ್ ಚಾರ್ಜರ್ಸ್ಗಾಗಿ ಕೊನೆಯ ಬಾರಿ ಐಪಿಎಲ್ನಲ್ಲಿ ಆಡಿದ್ದ ಈತ, ಕೊನೆಯ ಬಾರಿಗೆ ಐಪಿಎಲ್ ಆಡಿದ ಬಳಿಕ ಬಹುತೇಕ ಆಟಗಾರರು ನಿವೃತ್ತರಾಗಿದ್ದಾರೆ. ಐಪಿಎಲ್ನಲ್ಲಿ ಕೇವಲ ಐದು ಪಂದ್ಯಗಳಲ್ಲಿ ಆರು ವಿಕೆಟ್ಗಳನ್ನು ಪಡೆದಿದ್ದಾರೆ.