ತನ್ನೊಡೆಯನಿಗೆ ನಿಯತ್ತಾಗಿ ಬದುಕುವ, ಉತ್ತಮ ಸಾಂಗತ್ಯ ನೀಡುವ ಪ್ರಾಣಿ ಎಂದರೆ ಅದು ನಾಯಿ(Dog). ಮನುಷ್ಯನ ಉತ್ತಮ ಸ್ನೇಹಿತನೂ ಹೌದು. ಇಂತಹ ನಾಯಿಗಳಿಗೆ ಧನ್ಯವಾದ ಸಮರ್ಪಿಸಲೆಂದೇ ನೇಪಾಳದಲ್ಲಿ ಒಂದು ಹಬ್ಬವಿದೆ. ಈ ಹಬ್ಬವೇ ‘ಕುಕುರ್ ತಿಹಾರ್’(Kukkur Thihar). ಕುಕುರ್ ತಿಹಾರ್ ವರ್ಷಕೊಮ್ಮೆ ಬರುವ ಹಿಂದೂ ಹಬ್ಬ. ಈ ಹಬ್ಬದ ಎರಡನೇ ದಿನವನ್ನು ನಾಯಿಗಳಿಗೆಂದೇ ಮೀಸಲಿಡಲಾಗುತ್ತದೆ. ನಾಯಿ ನಿಯತ್ತಿನ ಪ್ರಾಣಿ ಜೊತೆಗೆ ಸ್ನೇಹಜೀವಿ, ಇಂತಹ ನಿಯತ್ತು ಮತ್ತು ಸ್ನೇಹಕ್ಕಾಗಿ ನಾಯಿಗೆ ಈ ದಿನ ಧನ್ಯವಾದ ಅರ್ಪಣೆ ಮಾಡಲಾಗುತ್ತದೆ.
ನೇಪಾಳದಲ್ಲಿ(Nepal) ದೀಪಾವಳಿ ಹಬ್ಬವನ್ನು 5 ದಿನಗಳ ಕಾಲ ಆಚರಿಸಲಾಗುತ್ತದೆ. ಹಬ್ಬದ ಎರಡನೇ ದಿನವನ್ನು ಕುಕ್ಕುರ್ ತಿಹಾರ್ ಎಂದು ಆಚರರಿಸಲಾಗುತ್ತದೆ. ಇದರ ಭಾಗವಾಗಿ, ಶ್ವಾನಗಳಿಗೆ ಅಂದು ಪೂಜೆ ಸಲ್ಲಿಸಲಾಗುತ್ತದೆ. ಜೊತೆಗೆ, ಅವುಗಳಿಗೆ ರುಚಿರುಚಿಯಾದ ಭಕ್ಷ್ಯ ಭೋಜನಗಳನ್ನು ನೀಡಲಾಗುತ್ತದೆ. ಕುಕೂರ್ ಎಂದರೆ ನಾಯಿ ಎಂದರ್ಥ. ಇಂತಹ ಹಬ್ಬಗಳಲ್ಲಿ ನಾಯಿಯನ್ನು ಬಹಳ ವಿಶೇಷವಾಗಿ ಕಾಣಲಾಗುತ್ತದೆ ಮತ್ತು ನಾಯಿಯನ್ನು ‘ಮೃತ್ಯು ದೇವ ಯಮಧರ್ಮರಾಜನ’ ಪ್ರತಿರೂಪವೆಂದು ನಂಬಿಕೊಂಡು ಆರಾಧಿಸುತ್ತಾರೆ.
ಮನುಷ್ಯರ ಹಾಗೂ ಶ್ವಾನಗಳ ನಡುವಿನ ಸಹಸ್ರಾರು ವರ್ಷಗಳ ಬಾಂಧವ್ಯದ ಪ್ರತೀಕವಾಗಿ ಈ ಕುಕ್ಕುರ್ ತಿಹಾರ್ ಹಬ್ಬವನ್ನು ಆಚರಿಸಲಾಗುತ್ತದೆ. ಇಂತಹ ನಿಯತ್ತಿನ ನಾಯಿಯನ್ನು ನೇಪಾಳದಲ್ಲಿ ವಿಶೇಷವಾಗಿ ಪರಿಗಣಿಸುತ್ತಿರುವುದು ನಿಜಕ್ಕೂ ಆಶ್ಚರ್ಯದ ಸಂಗತಿಯೇ ಸರಿ.
- ಪವಿತ್ರ