ಸದ್ಯ ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿರುವ ನಟ(Actor) ಡಾಲಿ ಧನಂಜಯ್(Dolly Dhananjay) ಅವರು ರಾಜಕೀಯ(Politics) ಪ್ರವೇಶ ಮಾಡುತ್ತಾರೆ ಎಂಬ ಸುದ್ದಿ ಎಲ್ಲೆಡೇ ಹರಿದಾಡುತ್ತಿದೆ.

ನಟ ಡಾಲಿ ಧನಂಜಯ್ ಜೆಡಿಎಸ್(JDS) ಅಭ್ಯರ್ಥಿಯಾಗಿ ಅರಸೀಕೆರೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ. ಹಾಲಿ ಶಾಸಕ ಶಿವಲಿಂಗೇಗೌಡರು ಕಾಂಗ್ರೆಸ್ ಸೇರುತ್ತಾರೆ. ಹೀಗಾಗಿ ಶಿವಲಿಂಗೇಗೌಡರ ವಿರುದ್ದ ಡಾಲಿ ಧನಂಜಯ್ ಅವರಿಗೆ ಟಿಕೆಟ್ ನೀಡಲು ದಳಪತಿಗಳು ಪ್ಲ್ಯಾನ್ ಮಾಡಿದ್ದಾರೆ ಎಂಬ ಸುದ್ದಿ ರಾಜಕೀಯ ವಲಯದಲ್ಲೂ ಹಬ್ಬಿದೆ.
ಇನ್ನು ಸದ್ಯ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿರುವ ಡಾಲಿ ಧನಂಜಯ್‍ಗೆ ರಾಜಕೀಯ ಎಲ್ಲಾ ಬೇಕಿತ್ತಾ ಎಂದು ಅವರ ಅಭಿಮಾನಿಗಳು ಸಾಮಾಜಿಕ ಮಾದ್ಯಮಗಳಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ. ಅಭಿಮಾನಿಗಳ ಪ್ರಶ್ನೆಗಳಿಗೆ ಡಾಲಿ ಧನಂಜಯ್ ತಮ್ಮದೇ ಶೈಲಿಯಲ್ಲಿ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿ ಉತ್ತರ ನೀಡಿದ್ದಾರೆ. “ಸುಮ್ನೇ ಏನೇನೋ ಸುದ್ದಿ ಬರೆಯೋದು, ತೋರಿಸೋದು, ಕೇಳೋದು, ನೋಡೋದು, ನಂಬೋದು ಇದೆಲ್ಲಾ ಬಿಟ್ಟು, ನಡೀರಿ ಏನಾರಾ ಒಂದಷ್ಟು ಒಳ್ಳೆ ಕೆಲಸ ಮಾಡೋಣ” ಎಂದು ಬರೆದುಕೊಂಡಿದ್ದಾರೆ.