ಮಳೆಗಾಲ ಶುರುವಾಗಿದೆ. ಈ ಸಮಯದಲ್ಲಿ ಮಕ್ಕಳಿಂದ ಹಿಡಿದು ಎಲ್ಲರನ್ನೂ ಜ್ವರದ ಸಮಸ್ಯೆ ಕಾಡುವುದು. ಆದರೆ ಸದ್ಯ ಇರುವ ಕೊರೊನಾ ಸನ್ನಿವೇಶದಿಂದ ಸಾಮಾನ್ಯ ಜ್ವರ ಬಂದರೂ, ಹೆದರುವಂತಹ ಪರಿಸ್ಥಿತಿ ಎದುರಾಗಿದೆ. ಯಾವುದೇ ಜ್ವರವಿರಲಿ ಇದರಿಂದ ದೇಹದಲ್ಲಿ ವೀಕ್ ನೆಸ್ ಉಂಟಾಗುತ್ತದೆ. ಇದಕ್ಕಾಗಿ ಜ್ವರ ಕಡಿಮೆ ಮಾಡುವ ಕೆಲವು ದೇಶೀಯ ವಿಧಾನಗಳನ್ನು ಇಲ್ಲಿ ಹೇಳಿದ್ದೇವೆ. ನೆನಪಿಡಿ, ಇದು ಜ್ವರ ಕಡಿಮೆ ಮಾಡಲು ಸಹಾಯ ಮಾಡಬಹುದು ಆದರೆ ಇದೇ ಮದ್ದಲ್ಲ.
ಜ್ವರ ಕಡಿಮೆ ಮಾಡುವ ಮನೆಮದ್ದುಗಳನ್ನು ಈ ಕೆಳಗೆ ನೀಡಲಾಗಿದೆ:
ಸಾಕಷ್ಟು ದ್ರವಾಹಾರ ಕುಡಿಯಿರಿ:
ಜ್ವರವು ನಿಮ್ಮ ದೇಹದ ಉಷ್ಣತೆಯನ್ನು ಹೆಚ್ಚಿಸುವುದರಿಂದ ದೇಹವು ಹೆಚ್ಚು ಬೆವರುವಿಕೆಗೆ ಕಾರಣವಾಗಬಹುದು. ಇದು ನಿಮ್ಮ ದೇಹ ನಿರ್ಜಲೀಕರಣಕ್ಕೆ ಕಾರಣವಾಗಬಹುದು. ಆದ್ದರಿಂದ ಇದನ್ನು ತಡೆಗಟ್ಟಲು ಮತ್ತು ಚಿಕಿತ್ಸೆ ನೀಡಲು ದಿನವಿಡೀ ಸಾಕಷ್ಟು ದ್ರವಗಳನ್ನು ಕುಡಿಯಿರಿ. ಪ್ರತಿದಿನ ಕನಿಷ್ಠ 9-12 ಲೋಟ ನೀರು ಕುಡಿಯಿರಿ. ನೀರು ಮಾತ್ರವಲ್ಲ, ಮನೆಯಲ್ಲಿ ಆರೋಗ್ಯಕರ ಹಣ್ಣಿನ ರಸ, ತೆಂಗಿನ ನೀರು, ಸೂಪ್ ಇತ್ಯಾದಿಗಳನ್ನು ತೆಗೆದುಕೊಳ್ಳಬಹುದು.
ಅಮೃತಬಳ್ಳಿ:
ಅಮೃತಬಳ್ಳಿ ಪ್ರಸಿದ್ಧ ಆಯುರ್ವೇದ ಮೂಲಿಕೆಯಾಗಿದ್ದು, ಇದನ್ನು ಅನೇಕ ಆರೋಗ್ಯ ಪ್ರಯೋಜನಗಳಿಗೆ ಬಳಸಲಾಗುತ್ತದೆ. ಜ್ವರವು ವೀಕ್ ನೆಸ್ ಗೆ ಕಾರಣವಾಗಬಹುದು ಮತ್ತು ಸೋಂಕಿನ ವಿರುದ್ಧ ಹೋರಾಡುವುದು ಕಷ್ಟವಾಗುತ್ತದೆ. ವ್ಯಕ್ತಿಯ ರೋಗನಿರೋಧಕ ಶಕ್ತಿ ದುರ್ಬಲವಾಗಿದ್ದರೆ, ಅಪಾಯವು ಹೆಚ್ಚಾಗುತ್ತದೆ. ಆದ್ದರಿಂದ, ಅಮೃತಬಳ್ಳಿ ಜ್ವರವನ್ನು ತಡೆಗಟ್ಟಲು ಮತ್ತು ಮನೆಯಲ್ಲಿ ಸುಲಭವಾಗಿ ಚಿಕಿತ್ಸೆ ನೀಡಲು ಅದರ ಕಷಾಯ ಮಾಡಿ ಕುಡಿಯಬಹುದು.
ಬೆಳ್ಳುಳ್ಳಿ:
ಬೆಳ್ಳುಳ್ಳಿ ಬಿಸಿ ಗುಣ ಹೊಂದಿರುವ ಆಯುರ್ವೇದ ಸಸ್ಯವಾಗಿದ್ದು, ಇದು ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬೆಳ್ಳುಳ್ಳಿ ಬ್ಯಾಕ್ಟೀರಿಯಾ ವಿರೋಧಿ ಗುಣವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ನಿಮಗೆ ಸಹಾಯ ಮಾಡುತ್ತದೆ. ಕೆಲವು ಅಧ್ಯಯನಗಳ ಪ್ರಕಾರ, ಬೆಳ್ಳುಳ್ಳಿಯಲ್ಲಿ ಆಂಟಿಬ್ಯಾಕ್ಟೀರಿಯಲ್, ಆಂಟಿಫಂಗಲ್ ಮತ್ತು ಆಂಟಿವೈರಲ್ ಗುಣಗಳಿವೆ, ಇದು ಜ್ವರ ಸೇರಿದಂತೆ ಅನೇಕ ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ತುಳಸಿ:
ಜ್ವರ ಬಂದಾಗ ತುಳಸಿ ರಸವನ್ನು ಕುಡಿಯಲು ಪ್ರಯತ್ನಿಸಿ ಅಥವಾ ಅದನ್ನು ನಿಮ್ಮ ಸಾಮಾನ್ಯ ಚಹಾದಲ್ಲಿ ಸೇರಿಸಿ. ಇದು ನಿಮ್ಮ ದೇಹದ ಉಷ್ಣತೆಯನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ ಮತ್ತು ಸೋಂಕಿನ ವಿರುದ್ಧ ಹೋರಾಡಲು ಸಹ ಸಹಾಯ ಮಾಡುತ್ತದೆ. ತುಳಸಿ ಚಹಾ ನೀವು ಬೆಳಿಗ್ಗೆ ಸೇವಿಸಬಹುದಾದ ಅತ್ಯುತ್ತಮ ಪಾನೀಯಗಳಲ್ಲಿ ಒಂದಾಗಿದೆ. ತುಳಸಿಯಲ್ಲಿ ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿವೈರಲ್ ಗುಣಗಳಿವೆ, ಇದು ನೈಸರ್ಗಿಕವಾಗಿ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಶುಂಠಿ ರಸವನ್ನು ಹೊರತೆಗೆದು ಅದಕ್ಕೆ ಪುಡಿಮಾಡಿದ ತುಳಸಿ ಮತ್ತು ಸ್ವಲ್ಪ ಜೇನುತುಪ್ಪ ಸೇರಿಸಿ ಸೇವಿಸಿ.
ಶುಂಠಿ:
ಶುಂಠಿ ಚಹಾವು ಅದ್ಭುತ ರೋಗನಿರೋಧಕ ವರ್ಧಕವಾಗಿದ್ದು, ಜ್ವರವನ್ನು ಎದುರಿಸಲು ಸಹಾಯ ಮಾಡುತ್ತದೆ. ಜೊತೆಗೆ ಕೆಮ್ಮು ಮತ್ತು ಶೀತಗಳಿಂದ ಉಂಟಾಗುವ ಯಾವುದೇ ಅಡಚಣೆಯಿಂದ ನಿಮ್ಮ ಉಸಿರಾಟದ ವ್ಯವಸ್ಥೆಯನ್ನು ಸರಿಪಡಿಸುತ್ತದೆ. ಇದು ಆಯುರ್ವೇದ ಮೂಲಿಕೆಯಾಗಿದ್ದು, ನೆಗಡಿ ಮತ್ತು ಜ್ವರ ರೋಗಲಕ್ಷಣಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ.
ಸೂಚನೆ: ಸಾಮಾನ್ಯ ಮಾಹಿತಿಯನ್ನು ನೀಡುವ ಉದ್ದೇಶದಿಂದ ಈ ಲೇಖನವನ್ನು ಬರೆಯಲಾಗಿದೆ, ಒಬ್ಬ ವ್ಯಕ್ತಿಗೆ ಆರೋಗ್ಯ ಸಂಬಂಧಿತ ಸಮಸ್ಯೆಗಳಿದ್ದರೆ, ದಯವಿಟ್ಟು ವೈದ್ಯರನ್ನು ಸಂಪರ್ಕಿಸಿ ಮತ್ತು ಸರಿಯಾದ ಚಿಕಿತ್ಸೆ ಪಡೆದುಕೊಳ್ಳಿ.