Bengaluru: ಕೆಲ ದಿನಗಳ ಹಿಂದಷ್ಟೇ ರಾಜಧಾನಿ ಬೆಂಗಳೂರಿನಲ್ಲಿ ಆಸ್ತಿ ಮಾರಾಟ, ಖರೀದಿ ಸೇರಿದಂತೆ ಇತರೆ ಕೆಲಸಗಳಿಗೆ ಇ-ಖಾತಾ (E-account) ಕಡ್ಡಾಯಗೊಳಿಸಲಾಗಿದೆ. ಇತ್ತ ಇ-ಖಾತಾ ಪಡೆಯಲು ಪ್ರತಿ ವಾರ್ಡ್ನ ಬಿಬಿಎಂಪಿಯ (BBMP) ಕಚೇರಿಗಳಲ್ಲಿ ಅವಕಾಶ ಕಲ್ಪಿಸಿದರೂ, ಬೆಂಗಳೂರು ಒನ್ ಕೇಂದ್ರಗಳಲ್ಲಿ (Bangalore One Centres) ಇ-ಖಾತಾ ಪಡೆಯಲು ಅವಕಾಶ ನೀಡಿದ್ದರೂ ನಗರವಾಸಿಗಳಿಗೆ ಮಾತ್ರ ಸಮಸ್ಯೆ ತಪ್ಪದಂತಾಗಿದೆ. ದಾಖಲೆಗಳು ಸರಿಯಿದ್ದರೆ ಸರ್ವರ್ ಸರಿ ಇರೋದಿಲ್ಲ, ಸರ್ವರ್ ಸರಿಯಿದ್ದರೆ ದಾಖಲೆ ಇಲ್ಲ ಎಂಬಂಥ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿರುವ ಜನ ಇ-ಖಾತಾ ಪಡೆಯಲು ಪರದಾಡುತ್ತಿದ್ದಾರೆ.

ಇನ್ನು ಕೃಷಿಭೂಮಿಯಿಂದ ಪರಿವರ್ತನೆಯಾದ ಜಾಗಗಳು, ಬಿಡಿಎ (BDA) ಸ್ವಾಧೀನದ ಬಳಿಕ ಕೈಬಿಟ್ಟ ಜಾಗಗಳು, ಎ ಖಾತಾ (A account), ಬಿ ಖಾತಾ (B account) ಪಡೆಯುವಾಗ ಮ್ಯಾನುವಲ್ ಇದ್ದಿದ್ದರಿಂದ ಕೆಲ ದಾಖಲೆಗಳು ಇಲ್ಲದಿದ್ರೂ ಖಾತಾ ಲಭ್ಯವಾಗಿದೆ. ಆದರೆ, ಇದೀಗ ಇ-ಖಾತಾ (E-account) ಮಾಡಿಸಲು ಕೆಲವು ದಾಖಲೆಗಳು ಸೂಕ್ತ ರೀತಿಯಲ್ಲಿ ಒದಗಿಸಲು ಆಗದೇ ಇರುವುದು ಜನರಿಗೆ ತಲೆನೋವು ತಂದಿಟ್ಟಿದೆ.ಮತ್ತೊಂದೆಡೆ, ಇ-ಖಾತಾ ಇಲ್ಲದ ಸುಮಾರು 5 ಲಕ್ಷ ಆಸ್ತಿಗಳನ್ನು ಗುರುತಿಸಿರುವ ಪಾಲಿಕೆ (Corporation), ಇತ್ತೀಚೆಗಷ್ಟೇ ಇ-ಖಾತಾ ಪಡೆಯಲು ಹೊಸ ವೆಬ್ಸೈಟ್ ಕೂಡ ಬಿಡುಗಡೆ ಮಾಡಿತ್ತು. ಆದರೆ, ಎಷ್ಟೇ ಸರ್ಕಸ್ ಮಾಡಿದರೂ ಕೂಡ ನೀರಿಕ್ಷಿತಮಟ್ಟದಲ್ಲಿ ಜನರಿಗೆ ಇ-ಖಾತಾ ತಲುಪಿಸುವುದರಲ್ಲಿ ಪಾಲಿಕೆ ಯಶಸ್ವಿ ಆಗಿಲ್ಲ.
ಅಷ್ಟೇ ಅಲ್ಲದೆ ಇತ್ತೀಚೆಗೆಷ್ಟೇ ಇ-ಖಾತಾ ತೆರೆಯಲು ಪಾಸ್ಪೋರ್ಟ್ ಕಚೇರಿ ಮಾದರಿಯಲ್ಲಿ ತಾತ್ಕಾಲಿಕ ಕೇಂದ್ರಗಳನ್ನು (Temporary centers) ತೆರೆಯುತ್ತೇವೆ ಎಂದಿದ್ದ ಪಾಲಿಕೆಯ ಮಾತು ಬರೀ ಮಾತಾಗಿಯೇ ಉಳಿದಿದೆ. ಇತ್ತ ಇ-ಖಾತಾ ಪಡೆಯುವ ಸರ್ಕಸ್ನಲ್ಲಿ ಬೇಸತ್ತ ಜನರು ಇ-ಖಾತಾ ಇಲ್ಲದೇ ಇರುವುದರಿಂದ ಆಸ್ತಿಗಳನ್ನು ಮಾರಾಟ ಮಾಡಲೂ ಪರದಾಡುತ್ತಿದ್ದಾರೆ. ಸದ್ಯ ಇ-ಖಾತಾ ಸಮಸ್ಯೆಗಳ ಮಧ್ಯೆ ಬರೀ ಮಾತಿನ ಭರವಸೆಗಳ ಕತೆ ಹೇಳುತ್ತಿರುವ ಪಾಲಿಕೆ ನಡೆಗೆ ಜನ ಸಾಮಾನ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.