ಎಬೋಲಾ ಎಚ್ಚರಿಕೆ: ಕರ್ನಾಟಕದಲ್ಲಿ (ebola fear in karnataka) ಕಟ್ಟೆಚ್ಚರ ಘೋಷಣೆ
ಎಬೋಲಾ ಹರಡುವಿಕೆ ತಡೆಯಲು ಆಸ್ಪತ್ರೆಗಳು ಮತ್ತು ಕ್ವಾರಂಟೈನ್ ಕೇಂದ್ರ ಸಜ್ಜು
ಪೀಡಿತ ರಾಷ್ಟ್ರಗಳಿಂದ ಬರುವ ಪ್ರಯಾಣಿಕರ ಮೇಲೆ ಕಣ್ಣಿಟ್ಟ ಆರೋಗ್ಯ ಇಲಾಖೆ
ಆಫ್ರಿಕಾ ಖಂಡದ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ ಹಾಗೂ ಉಗಾಂಡಾದಲ್ಲಿ ಎಬೋಲಾ (Ebola) ಸೋಂಕು ತೀವ್ರವಾಗಿ (ebola fear in karnataka) ಹರಡುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಜ್ಯದಾದ್ಯಂತ ಮುನ್ನೆಚ್ಚರಿಕಾ ಕ್ರಮಗಳನ್ನು ಬಿಗಿಗೊಳಿಸಿದೆ.
ವಿಶ್ವ ಆರೋಗ್ಯ ಸಂಸ್ಥೆ (WHO) ಮೇ 17ರಂದು ಈ ಸೋಂಕನ್ನು ‘ಅಂತರರಾಷ್ಟ್ರೀಯ ಕಳಕಳಿಯ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ’ ಎಂದು ಘೋಷಿಸಿದ
ಬಳಿಕ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದ್ದು, ವಿಮಾನ ನಿಲ್ದಾಣಗಳು ಸೇರಿದಂತೆ ವಿವಿಧ ಪ್ರವೇಶ ದ್ವಾರಗಳಲ್ಲಿ ತೀವ್ರ ನಿಗಾ ವ್ಯವಸ್ಥೆ ಜಾರಿಗೊಳಿಸಲಾಗಿದೆ.

ಸದ್ಯಕ್ಕೆ ಭಾರತದಲ್ಲಿ ಯಾವುದೇ ಎಬೋಲಾ ಪ್ರಕರಣಗಳು ವರದಿಯಾಗಿಲ್ಲವಾದರೂ, ಮುನ್ನೆಚ್ಚರಿಕೆ ಕ್ರಮವಾಗಿ ಆರೋಗ್ಯ ಇಲಾಖೆ ಎಲ್ಲ ಜಿಲ್ಲೆಗಳಿಗೂ ಅಗತ್ಯ ಸೂಚನೆಗಳನ್ನು ರವಾನಿಸಿದೆ.
ಅಂತರರಾಷ್ಟ್ರೀಯ ಪ್ರಯಾಣಿಕರ ಸಂಚಾರ ಹಾಗೂ ವ್ಯಾಪಾರ ಚಟುವಟಿಕೆಗಳನ್ನು ಗಮನದಲ್ಲಿಟ್ಟುಕೊಂಡು ಸೋಂಕು ಹರಡುವ ಸಾಧ್ಯತೆಯನ್ನು ತಡೆಯಲು ರಾಜ್ಯ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ.
ಸಮಗ್ರ ರೋಗ ಕಣ್ಗಾವಲು ಕಾರ್ಯಕ್ರಮದಡಿ (IDSP) ಶಂಕಿತ ಪ್ರಕರಣಗಳ ಮೇಲೆ ನಿಗಾವನ್ನು ಹೆಚ್ಚಿಸಲಾಗಿದ್ದು, ವಿಶೇಷವಾಗಿ ಎಬೋಲಾ ಪೀಡಿತ ರಾಷ್ಟ್ರಗಳಿಂದ ಬರುವ ಪ್ರಯಾಣಿಕರ ಆರೋಗ್ಯದ ಮೇಲ್ವಿಚಾರಣೆ ಕಡ್ಡಾಯಗೊಳಿಸಲಾಗಿದೆ.
ವಿಮಾನ ನಿಲ್ದಾಣಗಳು ಮತ್ತು ಇತರ ಪ್ರವೇಶ ಕೇಂದ್ರಗಳೊಂದಿಗೆ ಆರೋಗ್ಯ ಇಲಾಖೆ ಸಮನ್ವಯ ಸಾಧಿಸಿದ್ದು, ಜ್ವರ, ವಾಂತಿ, ಭೇದಿ ಹಾಗೂ ಅತಿಯಾದ ದೌರ್ಬಲ್ಯ ಲಕ್ಷಣಗಳಿರುವವರನ್ನು ತಕ್ಷಣ ಗುರುತಿಸಿ ಪರೀಕ್ಷೆಗೆ ಒಳಪಡಿಸುವ ವ್ಯವಸ್ಥೆ ಮಾಡಲಾಗಿದೆ.
ರಾಜ್ಯದ ಆಸ್ಪತ್ರೆಗಳಲ್ಲಿ ಸೋಂಕು ತಡೆ ಹಾಗೂ ನಿಯಂತ್ರಣ ಕ್ರಮಗಳನ್ನು ಇನ್ನಷ್ಟು ಕಟ್ಟುನಿಟ್ಟಾಗಿಸಲಾಗಿದೆ. ತ್ವರಿತ ಪ್ರತಿಕ್ರಿಯೆ ತಂಡಗಳನ್ನು ಹೈ ಅಲರ್ಟ್‌ನಲ್ಲಿರಿಸಲಾಗಿದ್ದು, ಶಂಕಿತ ಪ್ರಕರಣಗಳನ್ನು ಸಮರ್ಥವಾಗಿ ನಿಭಾಯಿಸಲು ವೈದ್ಯಕೀಯ ಸಿಬ್ಬಂದಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ.
ಜೊತೆಗೆ ಅಗತ್ಯ ಪ್ರಮಾಣದ ಪಿಪಿಇ ಕಿಟ್‌ಗಳು, ಔಷಧಗಳು ಹಾಗೂ ಪರೀಕ್ಷಾ ಸಾಮಗ್ರಿಗಳನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ. ಸೋಂಕಿನ ಶಂಕೆ ಕಂಡುಬಂದರೆ
ತಕ್ಷಣ ಚಿಕಿತ್ಸೆ ನೀಡಲು ಪ್ರತ್ಯೇಕ ವಾರ್ಡ್‌ಗಳು ಹಾಗೂ ಕ್ವಾರಂಟೈನ್ ಕೇಂದ್ರಗಳನ್ನು ಸಜ್ಜುಗೊಳಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.
ಆರೋಗ್ಯ ಇಲಾಖೆಯ ಈ ಕ್ರಮಗಳು ಜನರಲ್ಲಿ ಆತಂಕ ಕಡಿಮೆ ಮಾಡುವ ಜೊತೆಗೆ ಮುನ್ನೆಚ್ಚರಿಕೆಗೆ ಹೆಚ್ಚಿನ ಒತ್ತು ನೀಡುತ್ತಿರುವುದನ್ನು ಸ್ಪಷ್ಟಪಡಿಸುತ್ತವೆ.
ಬೆಂಗಳೂರಿನ ರಾಜೀವ್ ಗಾಂಧಿ ಎದೆಯೋಗಗಳ ಸಂಸ್ಥೆಯನ್ನು ಐಸೊಲೇಷನ್ (Isolation) ಕೇಂದ್ರವಾಗಿ ಹಾಗೂ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯನ್ನು ಕ್ವಾರಂಟೈನ್ ಮತ್ತು ಚಿಕಿತ್ಸಾ ಕೇಂದ್ರವಾಗಿ ಗುರುತಿಸಲಾಗಿದೆ.
ಮಂಗಳೂರಿನಲ್ಲಿ ಶ್ರೀನಿವಾಸ್ ಪೋರ್ಟ್ ಆಸ್ಪತ್ರೆಯನ್ನು ಕ್ವಾರಂಟೈನ್ ಕೇಂದ್ರವನ್ನಾಗಿ ಮತ್ತು ವೆನ್ಲಾಕ್ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆ ಹಾಗೂ ಪ್ರತ್ಯೇಕ ಸೌಲಭ್ಯಕ್ಕಾಗಿ ಸಿದ್ಧತೆ ಮಾಡಲಾಗಿದೆ.
ಶಂಕಿತ ರೋಗಿಗಳನ್ನು ಸುರಕ್ಷಿತವಾಗಿ ಸಾಗಿಸಲು ಪ್ರತ್ಯೇಕ ಆಂಬ್ಯುಲೆನ್ಸ್ ಸೇವೆಗಳನ್ನು ನಿಯೋಜಿಸಲಾಗಿದ್ದು, ಸೋಂಕಿತರ ಮಾದರಿಗಳನ್ನು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಅಂತಿಮ ಪರೀಕ್ಷೆಗಾಗಿ ಕಳುಹಿಸುವ ವ್ಯವಸ್ಥೆಯೂ ಮಾಡಲಾಗಿದೆ.
ಈ ಎಲ್ಲಾ ಕ್ರಮಗಳು ಸೋಂಕು ರಾಜ್ಯಕ್ಕೆ ಹರಡದಂತೆ ತಡೆಯುವ ಉದ್ದೇಶದಿಂದ ಕೈಗೊಳ್ಳಲಾಗುತ್ತಿದೆ.
ಎಬೋಲಾ ಪೀಡಿತ ರಾಷ್ಟ್ರಗಳಿಂದ ಹಿಂದಿರುಗುವವರು ಕನಿಷ್ಠ 21 ದಿನಗಳ ಕಾಲ ತಮ್ಮ ಆರೋಗ್ಯದ ಮೇಲೆ ಕಡ್ಡಾಯವಾಗಿ ನಿಗಾ ಇಡಬೇಕು ಎಂದು ಆರೋಗ್ಯ ಇಲಾಖೆ
ಸಲಹೆ ನೀಡಿದೆ. ಜ್ವರ, ವಾಂತಿ, ಭೇದಿ ಅಥವಾ ಅತಿಯಾದ ಸುಸ್ತು ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವಂತೆ ಮನವಿ ಮಾಡಲಾಗಿದೆ.
ಸಾರ್ವಜನಿಕರು ಅನಗತ್ಯ ಆತಂಕಕ್ಕೆ ಒಳಗಾಗದೇ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಬೇಕು ಎಂದು ಇಲಾಖೆ ತಿಳಿಸಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಎಚ್ಚರಿಕೆಯ ಬೆನ್ನಲ್ಲೇ ಕರ್ನಾಟಕ ಸರ್ಕಾರ ಕೈಗೊಂಡಿರುವ ಕ್ರಮಗಳು ರಾಜ್ಯದ ಆರೋಗ್ಯ ಸುರಕ್ಷತೆಯತ್ತ ಹೆಚ್ಚಿನ ಗಮನ
ಹರಿಸಿರುವುದನ್ನು ತೋರಿಸುತ್ತಿದ್ದು, ಸೋಂಕು ಹರಡುವಿಕೆ ತಡೆಯಲು ಸರ್ಕಾರ ಮತ್ತು ಆರೋಗ್ಯ ಇಲಾಖೆ ಪೂರ್ಣ ಪ್ರಮಾಣದಲ್ಲಿ ಸಜ್ಜಾಗಿವೆ.
ಇದನ್ನು ಓದಿ : https://vijayatimes.com/aadhaar-identification-system-for-cattle/