ಜುಲೈ 23 (ಯು.ಎನ್.ಐ.) ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿ ಹಗರಣಕ್ಕೆ(SSC Scam) ಸಂಬಂಧಿಸಿದಂತೆ ಪಶ್ಚಿಮ ಬಂಗಾಳ(West Bengal) ಸಚಿವ ಮತ್ತು ತೃಣಮೂಲ ಕಾಂಗ್ರೆಸ್(TMC) ಪ್ರಧಾನ ಕಾರ್ಯದರ್ಶಿ ಪಾರ್ಥ ಚಟರ್ಜಿ ಅವರನ್ನು ಜಾರಿ ನಿರ್ದೇಶನಾಲಯ(ED) ಬಂಧಿಸಿದೆ. ಹಗರಣ ನಡೆದಾಗ ರಾಜ್ಯ ಶಿಕ್ಷಣ ಸಚಿವರಾಗಿದ್ದ ಚಟರ್ಜಿ ಅವರನ್ನು ಸುಮಾರು 26 ಗಂಟೆಗಳ ಕಾಲ ತೀವ್ರ ತನಿಖೆಯ ನಂತರ ಇಂದು ಬಂಧಿಸಲಾಗಿದೆ.
ಪ್ರಸ್ತುತ ಪಶ್ಚಿಮ ಬಂಗಾಳ ಸರ್ಕಾರದಲ್ಲಿ ಕೈಗಾರಿಕೆ ಸಚಿವರಾಗಿರುವ ಚಟರ್ಜಿ ಅವರನ್ನು ಸಾಲ್ಟ್ ಲೇಕ್ ಪ್ರದೇಶದ ಸಿಜಿಒ ಕಾಂಪ್ಲೆಕ್ಸ್‌ನಲ್ಲಿರುವ ಇ.ಡಿ ಕಚೇರಿಗೆ ಬಂಧಿಸಿ ಕರೆದೊಯ್ಯಲಾಯಿತು. ಜಾರಿ ನಿರ್ದೇಶನಾಲಯವು ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿ ಅವರ ಮನೆಯಲ್ಲಿ ಶನಿವಾರ ದಾಳಿ ನಡೆಸಿದ್ದು, ಒಂದು ದಿನದ ನಂತರ ಅವರ ಸಹಾಯಕರ ಮನೆಯಿಂದ 20 ಕೋಟಿ ರೂ. ವಶಪಡಿಸಿಕೊಂಡಿದೆ.
ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ಹಗರಣದ ತನಿಖೆಗೆ ಸಂಬಂಧಿಸಿದಂತೆ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ಗೆ ಸೇರಿದ ಇಬ್ಬರು ಸಚಿವರು ಸೇರಿದಂತೆ, ಸುಮಾರು ಹನ್ನೆರಡು ಜನರ ಮನೆಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಶುಕ್ರವಾರ ಏಕಕಾಲದಲ್ಲಿ ದಾಳಿ ನಡೆಸಿತು.
ಸಚಿವ ಪಾರ್ಥ ಚಟರ್ಜಿ ಅವರ ನಿಕಟವರ್ತಿ ಅರ್ಪಿತಾ ಮುಖರ್ಜಿ ಅವರ ಮನೆಯಲ್ಲಿ ಸಂಜೆ ದಾಳಿ ನಡೆಸಿ ಸುಮಾರು 20 ಕೋಟಿ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ.