ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ(National Herald Case) ಇಂದು ಕಾಂಗ್ರೆಸ್(Congress) ಅಧಿನಾಯಕಿ ಸೋನಿಯಾ ಗಾಂಧಿ(Sonia Gandhi) ಅವರನ್ನು ಇ.ಡಿ(ED) ವಿಚಾರಣೆಗೆ ಒಳಪಡಿಸಲಿದೆ. ವಿಚಾರಣೆಗೆ ಅಡ್ಡಿಪಡಿಸಲು ಕಾಂಗ್ರೆಸ್ ಪ್ರತಿಭಟನೆ ನಡೆಸಲಿದ್ದಾರೆ ಎಂಬ ಮುನ್ನೆಚ್ಚೆರಿಕೆಯಿಂದ ದೆಹಲಿ ಪೊಲೀಸರು(Delhi Police) ಹೆಚ್ಚುವರಿಯಾಗಿ ಕಛೇರಿಯ ಸುತ್ತಮುತ್ತ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಗಾಂಧಿ ಅವರನ್ನು ಇ.ಡಿ ಪ್ರಶ್ನಿಸುವ ಮುನ್ನ ಯಾವುದೇ ಪ್ರತಿಭಟನೆ ನಡೆಸಲು ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರಿಗೆ ಅನುಮತಿ ಇಲ್ಲ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಆದ್ರೆ, ಗುರುವಾರ ಕೇಂದ್ರ ಮತ್ತು ಜಾರಿ ನಿರ್ದೇಶನಾಲಯದ ವಿರುದ್ಧ ಕಾಂಗ್ರೆಸ್ ಬೃಹತ್ ಪ್ರತಿಭಟನೆ ನಡೆಸಲು ಈಗಾಗಲೇ ತಯಾರಿ ಮಾಡಿಕೊಂಡಿದೆ ಎನ್ನಲಾಗಿದೆ. ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಜಾರಿ ನಿರ್ದೇಶನಾಲಯದ ಮುಂದೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿಚಾರಣೆಗೆ ಹಾಜರಾಗಿರುವ ಹಿನ್ನೆಲೆಯಲ್ಲಿ,
ಕಾಂಗ್ರೆಸ್ ಕಾರ್ಯಕರ್ತರು ದೆಹಲಿಯಲ್ಲಿ ಬೃಹತ್ ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ. ಆದರೆ, ಯಾವುದೇ ಪ್ರತಿಭಟನೆ ನಡೆಸಲು ಅನುಮತಿ ಪಡೆದಿಲ್ಲ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಪ್ರತಿಭಟನೆ ನಡೆಸಲು ಅನುಮತಿ ಕೋರಿ ಕಾಂಗ್ರೆಸ್ ಅರ್ಜಿ ಸಲ್ಲಿಸಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಸಂಸತ್ತಿನ ಮುಂಗಾರು ಅಧಿವೇಶನದ ಮಧ್ಯೆ ಈ ಬೆಳವಣಿಗೆ ನಡೆದಿದೆ. ಕಾನೂನು-ಸುವ್ಯವಸ್ಥೆಯನ್ನು ನಿರೀಕ್ಷಿಸಿ, ದೆಹಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 13 ರಂದು ರಾಹುಲ್ ಗಾಂಧಿ ಅವರನ್ನು ಇ.ಡಿ ವಿಚಾರಣೆಗೆ ಒಳಪಡಿಸಿದಾಗ ನಡೆಸಿದ ರೀತಿಯಲ್ಲಿಯೇ ಇ.ಡಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆಗಳನ್ನು ಯೋಜಿಸಿದೆ.
ಹಾಲಿ ಮತ್ತು ಮಾಜಿ ಸಿಎಂಗಳು ಸೇರಿದಂತೆ ಪಕ್ಷದ ಹಲವಾರು ಹಿರಿಯ ನಾಯಕರು ಅಂದು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಕಾಂಗ್ರೆಸ್ ದೆಹಲಿಗೆ ಆಗಮಿಸಿತ್ತು. ನವದೆಹಲಿಯಲ್ಲಿ ಈಗಾಗಲೇ ದೆಹಲಿ ಪೊಲೀಸರು ವಿಚಾರಣೆಯ ಹಿನ್ನಲೆ ವಿಶೇಷ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದು, ಬ್ಯಾರಿಕೇಡ್ಗಳನ್ನು ಹಾಕುವ ಮೂಲಕ ನವದೆಹಲಿಗೆ ಹೋಗುವ ಎಲ್ಲಾ ರಸ್ತೆಗಳ ಮೇಲೆ ನಿಗಾ ವಹಿಸಿದ್ದಾರೆ. ಕಾಂಗ್ರೆಸ್ ಪ್ರಧಾನ ಕಚೇರಿ, ಸೋನಿಯಾ ಗಾಂಧಿ ಅವರ ಮನೆ ಮತ್ತು ಇ.ಡಿ ಕಚೇರಿಯ ಹೊರಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ.
ನವದೆಹಲಿಯಲ್ಲಿ ಭಾರೀ ಟ್ರಾಫಿಕ್ ದಟ್ಟಣೆಯನ್ನು ನಿರೀಕ್ಷಿಸಿ, ಪೊಲೀಸರು ಹಲವಾರು ಮಾರ್ಗಗಳನ್ನು ರಚಿಸಿದ್ದಾರೆ. ಇದೇ ವೇಳೆ ದೆಹಲಿಯ ಎಲ್ಲಾ ಗಡಿಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಇರಲಿದೆ. ಸದ್ಯ ದೆಹಲಿಯನ್ನು ಹೊರತುಪಡಿಸಿ ಉಳಿದ ರಾಜ್ಯಗಳಲ್ಲೂ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಲು ಪೂರ್ವಸಿದ್ಧತೆಗಳನ್ನು ಮಾಡಿಕೊಂಡಿದ್ದು, ರಾಜ್ಯದ ರಾಜಧಾನಿ ಬೆಂಗಳೂರಿನ ಫ್ರೀಡಂ ಪಾರ್ಕ್(Freedom Park) ಮುಂದೆ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್(DK Shivkumar) ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.