Bengaluru : ಕರ್ನಾಟಕ ವಿಧಾನಸಭಾ ಚುನಾವಣೆ ಮುಗಿದ ನಂತರ ಹೊಸದಾಗಿ ಆಯ್ಕೆಯಾದ ಶಾಸಕರು ತಮ್ಮ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಹಿಂದಿನ ಚುನಾವಣೆಗಳಿಗೆ ವ್ಯತಿರಿಕ್ತವಾಗಿ, ಕ್ರಿಮಿನಲ್ (Criminal) ಇತಿಹಾಸ ಹೊಂದಿರುವ ಶಾಸಕರ ಸಂಖ್ಯೆ ಗಣನೀಯವಾಗಿ ಏರಿದೆ. ಕರ್ನಾಟಕ ಎಲೆಕ್ಷನ್ ವಾಚ್ ಮತ್ತು ಅಸೊಸಿಯೇಷನ್ ಡೆಮಾಕ್ರೆಟಿಕ್ ರಿಫಾರ್ಮ್ಸ್ (ADR) ಪ್ರಕಟಿಸಿದ ಅಧ್ಯಯನದ ಪ್ರಕಾರ, ಕರ್ನಾಟಕದ ಪ್ರಸ್ತುತ ಶಾಸಕರಲ್ಲಿ 55% ರಷ್ಟು ಕ್ರಿಮಿನಲ್ ದಾಖಲೆಯನ್ನು ಹೊಂದಿದ್ದಾರೆ.

223 ಕ್ಷೇತ್ರಗಳನ್ನು ವಿಶ್ಲೇಷಿಸಿದಾಗ ಸರ್ವಜ್ಞನಗರ ಶಾಸಕ ಕೆ.ಜೆ.ಜಾರ್ಜ್ (K.J.George) ಹೊರತುಪಡಿಸಿ 122 ಶಾಸಕರ ಮೇಲೆ ಕ್ರಿಮಿನಲ್ ದಾಖಲೆ ಇರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಆಘಾತಕಾರಿ ಸಂಗತಿಯೆಂದರೆ, ಈ ಪೈಕಿ ಶೇಕಡಾ 32 ರಷ್ಟು ಶಾಸಕರು ಗಂಭೀರ ಕ್ರಿಮಿನಲ್ ಅಪರಾಧಗಳ ಆರೋಪ ಹೊತ್ತಿದ್ದಾರೆ. ಇದು ಹಿಂದಿನ ಅವಧಿಗೆ ಹೋಲಿಸಿದರೆ ಕ್ರಿಮಿನಲ್ ಹಿನ್ನೆಲೆಯುಳ್ಳ ಶಾಸಕರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ. 2018 ರಲ್ಲಿ, ಶೇಕಡಾ 35 ರಷ್ಟು ಶಾಸಕರು ಕ್ರಿಮಿನಲ್ ದಾಖಲೆಗಳನ್ನು ಹೊಂದಿದ್ದರು, ಅವರಲ್ಲಿ ಶೇಕಡಾ 24 ರಷ್ಟು ಮಂದಿ ಗಂಭೀರ ಕ್ರಿಮಿನಲ್ (Criminal) ಮೊಕದ್ದಮೆಗಳನ್ನು ಹೊಂದಿದ್ದಾರೆ. ಇದು ರಾಜಕೀಯ ವ್ಯವಸ್ಥೆಗೆ ಸಮಂಜಸವಲ್ಲ ಎಂಬುದು ಸ್ಪಷ್ಟವಾಗಿದೆ.
ಕಾಂಗ್ರೆಸ್‌ನ (Congress) ಎಲ್ಲಾ ಶಾಸಕರಲ್ಲಿ 58% ಕ್ರಿಮಿನಲ್ ದಾಖಲೆಯನ್ನು ಹೊಂದಿದ್ದರೆ, 52% ಬಿಜೆಪಿ (BJP) ಶಾಸಕರು ಇದೇ ರೀತಿಯ ಇತಿಹಾಸವನ್ನು ಹೊಂದಿದ್ದಾರೆ. ಶೇ.47ರಷ್ಟು ಜೆಡಿಎಸ್ ಶಾಸಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲಾಗಿದೆ.
ಕಾಂಗ್ರೆಸ್‌ನ ಒಟ್ಟು 40 ಮಂದಿ, ಬಿಜೆಪಿಯ 23, ಜೆಡಿಎಸ್‌ನ 7 ಜನರ ವಿರುದ್ಧ ಗಂಭೀರ ಅಪರಾಧ ಪ್ರಕರಣಗಳು ಈಗಾಗಲೇ ದಾಖಲಾಗಿವೆ. ಅಷ್ಟೇ ಅಲ್ಲದೆ ಒಬ್ಬ ಶಾಸಕರ ಮೇಲೆ ಕೊಲೆ ಪ್ರಕರಣ ಇದ್ದು, ಇನ್ನೊಬ್ಬರ ಮೇಲೆ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಒಟ್ಟು 7 ಶಾಸಕರ ಮೇಲೆ ದಾಖಲಾಗಿದೆ.

ಪಕ್ಷವಾರು ಅಪರಾಧ ಹಿನ್ನೆಲೆ ಇರುವ ಶಾಸಕರು!
ಕಾಂಗ್ರೆಸ್ (Congress) 78/134 (ಶೇ.58)
ಬಿಜೆಪಿ(BJP): 34/66 (ಶೇ.52)
ಜೆಡಿಎಸ್(JDS): 9/19 (ಶೇ.47)
ಕೆಆರ್‌ಪಿಪಿ(KRSS): 1/1 (ಶೇ.100)
ಒಟ್ಟು: 122/223 (ಶೇ.55)
ಪಕ್ಷವಾರು ಗಂಭೀರ ಅಪರಾಧ ಹಿನ್ನೆಲೆ ಇರುವ ಶಾಸಕರು!
ಕಾಂಗ್ರೆಸ್: 40/134 (ಶೇ.30)
ಜೆಡಿಎಸ್: 7/19 (ಶೇ.37)
ಕೆಆರ್‌ಪಿಪಿ: 1/1 (ಶೇ.100)
ಒಟ್ಟು 122/223 (ಶೇ .55)
ರಶ್ಮಿತಾ ಅನೀಶ್