ಕೊಲ್ಕತ್ತಾ, ಏ. 09: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಚುನಾವಣಾ ಆಯೋಗ ಎರಡನೇ ನೋಟಿಸ್ ನೀಡಿದೆ. ಪಶ್ಚಿಮ ಬಂಗಾಳದ ವಿಧಾನಸಭಾ ಮತದಾನದ ವೇಳೆ ಸಿಆರ್ಪಿಎಫ್ ಭದ್ರತಾ ಪಡೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೂಚನೆ ಮೇರೆಗೆ ಮತದಾರರನ್ನು ಬೆದರಿಸುತ್ತಿದೆ ಎಂದು ಮಮತಾ ಬ್ಯಾನರ್ಜಿ ಆರೋಪಕ್ಕೆ ಸ್ಪಷ್ಟನೆ ಕೋರಿ ಚುನಾವಣಾ ಆಯೋಗ ಎರಡನೇ ನೋಟಿಸ್ ಹೊರಡಿಸಿದೆ. ಎರಡು ದಿನಗಳಲ್ಲಿ ಈ ನೋಟಿಸ್ಗೆ ಉತ್ತರಿಸುವಂತೆ ಚುನಾವಣಾ ಆಯೋಗ ಸಿಎಂ ಮಮತಾ ಬ್ಯಾರ್ಜಿ ಅವರಿಗೆ ತಿಳಿಸಿದೆ.
ಭದ್ರತಾ ಪಡೆಗಳ ಮೇಲಿನ ಆರೋಪ ಒಂದೇ ಅಲ್ಲದೇ ಮತದಾನಕ್ಕೆ ಅಡ್ಡಿ ಆರೋಪವನ್ನು ಸಿಎಂ ಮಮತಾ ಬ್ಯಾನರ್ಜಿ ಮಾಡಿದ್ದರು. ‘ನೀವು ಚುನಾವಣಾ ಆಯೋಗದ ಮೇಲೆ ಮಾಡಿದ ಆರೋಪಗಳು ವಾಸ್ತವಿಕವಾಗಿ ದೋಷಪೂರಿತವಾಗಿವೆ. ಪ್ರಾಯೋಗಿಕವಾಗಿ ಯಾವುದೇ ಪುರಾವೆ ಇಲ್ಲದೇ ಆರೋಪ ಮಾಡಿದ್ದೀರಿ’ ಎಂದು ಚುನಾವಣಾ ಆಯೋಗ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಈ ಮೊದಲೇ ಖಾರ ಉತ್ತರ ನೀಡಿತ್ತು. ಅಲ್ಲದೇ, ಇಂತಹ ಆರೋಪ ಮಾಡಿದ್ದಕ್ಕಾಗಿ ಕಠಿಣ ಕ್ರಮ ಕೈಗೊಳ್ಳುವುದಾಗಿಯೂ ಚುನಾವಣಾ ಆಯೋಗ ಎಚ್ಚರಿಕೆ ನೀಡಿದೆ. ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ವೇಳೆ ನಂದಿಗ್ರಾಮ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ಮತದಾನ ಮಾಡಲು ಅಡ್ಡಿಪಡಿಸಲಾಗಿದೆ ಎಂದು ಸಿಎಂ ಮಮತಾ ಬ್ಯಾನರ್ಜಿ ಚುನಾವಣಾ ಆಯೋಗವನ್ನು ಆರೋಪಿಸಿ ಕೈಬರಹದ ಪತ್ರ ಬರೆದಿದ್ದರು.