Bengaluru: ಕರ್ನಾಟಕ ರಾಜ್ಯದಲ್ಲಿ ಈಗಾಗಲೇ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆ (Electric Bike Taxi Scheme) ಯನ್ನು 2021ರಿಂದಲೇ ನಿಷೇಧಿಸಲಾಗಿದೆ. ಆದರೂ, ರ‍್ಯಾಪಿಡೋ ಸೇರಿದಂತೆ ಹಲವು ಕಂಪನಿಯ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳನ್ನು ಬಳಸಲಾಗುತ್ತಿದೆ . ಕೆಲವು ವಾಹನಗಳು ಬಾಡಿಗೆಗೆ ಓಡಿದರೆ ಕೆಲವು ಸ್ವಂತಕ್ಕೆಂದು ಸಹ ರಸ್ತೆಯಲ್ಲಿ ಓಡಾಡುತ್ತಿವೆ.ಹಾಗಾಗಿ ರಾಜ್ಯಾದ್ಯಂತ ಜು.5ರಿಂದ ಎಲ್ಲ ಮಾದರಿಯ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳ ಸಂಚಾರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಾರಿಗೆ ಇಲಾಖೆ ಹೊಸ ಆದೇಶ ಹೊರಡಿಸಿದೆ.

ಇನ್ನು ಈ ಎಲೆಕ್ಟ್ರಿಕ್ ಬೈಕ್ ಗಳಿಂದಾಗಿ ರಾಜ್ಯದಲ್ಲಿರುವ ಆಟೋ, ಟ್ಯಾಕ್ಸಿ, ಕ್ಯಾಬ್ (Auto, Taxi, Cab)ಗಳು ಸೇರಿದಂತೆ ಎಲ್ಲ ವಾಹನಗಳಿಗೆ ಪ್ರಯಾಣಿಕರ ಕೊರತೆ ಉಂಟಾಗುತ್ತಿದೆ.ಪ್ರಯಾಣಿಕರಿಂದ ಬಾಡಿಗೆ ಪಡೆದು ಜೀವನ ನಡೆಸುತ್ತಿದ್ದ ಉಳಿದ ವಾಹನಗಳಿಗೆ ಬೈಕ್ ಟ್ಯಾಕ್ಸಿಗಳಿಂದ ಭಾರಿ ಹೊಡೆತ ಬೀಳುತ್ತಿದೆ. ಇವರೆಲ್ಲರ ವಿರೋಧದ ನಡುವೆಯೂ, ರ‍್ಯಾಪಿಡೋ (Rapido) ಸೇರಿದಂತೆ ವಿವಿಧ ಕಂಪನಿಗಳ ಬೈಕ್ ಟ್ಯಾಕ್ಸಿಗಳು ಸಂಚಾರ ಮಾಡುತ್ತಿವೆ.
ಆದರೆ, ಕಳೆದ 2021ರಲ್ಲಿ ಆಟೋ, ಟ್ಯಾಕ್ಸಿ ವಾಹನಗಳ ಚಾಲಕರು ಮತ್ತು ಮಾಲೀಕರ ಸಂಘಟನೆಯ ವತಿಯಿಂದ ಬೈಕ್ ಟ್ಯಾಕ್ಸಿಗಳನ್ನು ನಿಷೇಧಿಸುವಂತೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡಲಾಗಿತ್ತು. ಈ ವೇಳೆ ಸರ್ಕಾರದಿಂದ ಎಲ್ಲ ಮಾದರಿಯ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳ ಸಂಚಾರವನ್ನು ನಿಷೇಧಿ (Ban) ಸಲಾಗಿತ್ತು. ಆದರೂ, ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳು ಎಗ್ಗಿಲ್ಲದೆ ಸಾಗುತ್ತಿತ್ತು.ಇದೀಗ ಹೊಸದಾಗಿ ಕಾರ್ಯಾಚರಣೆ ಮಾಡಲಾಗುತ್ತಿದ್ದು ಕಂಡಲ್ಲಿ ಸೀಜ್ ಮಾಡಲು ಸರ್ಕಾರ ಆದೇಶ ಹೊರಡಿಸಿದೆ.
ಈಗಾಗಲೇ ಬೆಂಗಳೂರಿನ (Bengaluru)10 ಪ್ರಾದೇಶಿಕ ಸಾರಿಗೆ ಕಚೇರಿಗಳ ವ್ಯಾಪ್ತಿಯಲ್ಲಿ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳ ವಿಶೇಷ ತಂಡಗಳನ್ನು ರಚಿಸುವಂತೆಯೂ ಆದೇಶಿಸಲಾಗಿದೆ. ಅಷ್ಟೇ ಅಲ್ಲದೆ ಬೆಂಗಳೂರಿನಲ್ಲಿ ನೋಂದಾಯಿತ ಕಂಪನಿಗಳಾದ ರ‍್ಯಾಪಿಡೋ, ಓಲಾ ಹಾಗೂ ಉಬರ್ (Ola And Uber) ಬೈಕ್ ಟ್ಯಾಕ್ಸಿಗಳು ಹೊರತಾಗಿ ಅನಧಿಕೃತವಾಗಿ ನೋಂದಣಿ ಮಾಡಿಕೊಳ್ಳದೇ ಪಿಕಪ್, ಡ್ರಾಪ್ (Pickup-Drop) ಮಾಡುವ ಬೈಕ್ ಟ್ಯಾಕ್ಸಿಗಳ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ. ಈ ಮೂಲಕ ಬೆಂಗಳೂರಿನಲ್ಲಿ ನಾಳೆಯಿಂದ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳ ಸಂಚಾರಕ್ಕೆ ಸಂಪೂರ್ಣ ಫುಲ್‌ಸ್ಟಾಪ್ ಬೀಳುವ ಮುನ್ಸೂಚನೆ ಕಂಡಿದೆ.