ಬೆಂಗಳೂರು ಡಿ 28 : ಪೆಟ್ರೋಲ್ ಮತ್ತು ಡಿಸೇಲ್ ದರದ ಹೊರೆ ತಗ್ಗಿಸಲು ರಾಜ್ಯಸರ್ಕಾರ ವಿದ್ಯುತ್ ಚಾಲಿತ ಬಸ್‌ಗಳ ಮೊರೆ ಹೋಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ 40 ವಿದ್ಯುತ್ ಚಾಲಿತ ಬಸ್ ಮತ್ತು 150 ಬಿಎಸ್-6 ಡೀಸೆಲ್ ಬಸ್‌ಗಳಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು
ಈ ಬಗ್ಗೆ ಮಾತನಾಡಿದ ಬೊಮ್ಮಾಯಿ ರಾಜ್ಯ ಸರ್ಕಾರಿ ಸ್ವಾಮ್ಯದ ಸಾರಿಗೆ ಸಂಸ್ಥೆಗಳಲ್ಲಿ ಆದಾಯ ಸೋರಿಕೆಯನ್ನು ತಡೆಯಬೇಕು. ಸಂಸ್ಥೆಗಳನ್ನು ಆರ್ಥಿಕವಾಗಿ ಸ್ವಾವಲಂಬಿಯಾಗಿ ಮಾಡಲು ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಾರ್ಯನಿರ್ವಹಿಸಬೇಕು ಎಂದರು.
ಬಿಎಸ್ 6 ದರ್ಜೆಯ ವಾಹನಗಳು ಕಡಿಮೆ ಪರಿಸರ ಮಾಲಿನ್ಯ ಉಂಟು ಮಾಡುತ್ತವೆ. ಅವುಗಳನ್ನು ಬಿಎಂಟಿಸಿ ಅಳವಡಿಸಿಕೊಳ್ಳುತ್ತಿರುವುದು ಸ್ವಾಗತಾರ್ಹ. ಇದರ ಜೊತೆಗೆ ಮಾಲಿನ್ಯ ಮುಕ್ತವಾದ ಎಲೆಕ್ಟ್ರಿಕ್ ಬಸ್ಸುಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಿದೆ ಎಂದರು.
ಸರಕಾರಿ ಸಾರಿಗೆ ಸಂಸ್ಥೆ ಗಳು ನಷ್ಟದಲ್ಲಿವೆ. ಖಾಸಗಿ ಸಾರಿಗೆ ಸಂಸ್ಥೆಗಳ ಲಾಭದಲ್ಲಿವೆ. ಆದಾಯ ಸೋರಿಕೆ ಇದಕ್ಕೆ ಮುಖ್ಯ ಕಾರಣ. ಎಲ್ಲಾ ಹಂತದಲ್ಲೂ ಸೋರಿಕೆ ತಡೆಯಬೇಕು, ಬಿಗಿಯಾದ ಕ್ರಮಗಳನ್ನು ಕೈಗೊಳ್ಳಬೇಕು. ಸರಕಾರಿ ಸ್ವಾಮ್ಯದ ಸಾರಿಗೆ ಸಂಸ್ಥೆಗಳನ್ನು ಮತ್ತೆ ಲಾಭದ ಸ್ಥಿತಿಗೆ ತರಬೇಕು ಎಂದು ಅವರು ಕರೆ ನೀಡಿದರು.