ಸೂರತ್, ಡಿ. 17: ಗುಜರಾತ್ನ ಸೂರತ್ನಲ್ಲಿ ಎರಡೂವರೆ ವರ್ಷದ ಮಗುವೊಂದು ತಾನು ಉಸಿರು ನಿಲ್ಲುಸುವುದಕ್ಕೂ ಮೊದಲು ಏಳು ಮಕ್ಕಳಿಗೆ ಜೀವ ನೀಡಿರುವ ಘಟನೆ ನಡೆದಿದೆ. ಮಗುವಿನ ಅಂಗಾಂಗಳನ್ನು ಏಳು ಮಕ್ಕಳಿಗೆ ದಾನ ಮಾಡಲಾಗಿದ್ದು, ಅತ್ಯಂತ ಕಿರಿಯ ಅಂಗಾಂಗ ದಾನಿಯಾಗಿ ಹೊರಹೊಮ್ಮಿದ್ದಾರೆ.
ಸೂರತ್ನ ಸಂಜೀವ್ ಓಜಾ ಮತ್ತು ಅರ್ಚನಾ ಅವರ 2.5 ವರ್ಷ ವಯಸ್ಸಿನ ಮಗ ಜಾಶ್ ಓಜಾ ಡಿಸೆಂಬರ್ 9ರಂದು ಸಂಬಂಧಿಕರ ಮನೆಯ ಎರಡನೇ ಮಹಡಿಯ ಬಾಲ್ಕನಿಯಿಂದ ಕೆಳಗೆ ಬಿದ್ದಿದ್ದನು. ಆತನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೆದುಳಿನಲ್ಲಿ ರಕ್ತಸ್ರಾವವಾದ ಹಿನ್ನೆಲೆ ಬಾಲಕನ ಮೆದುಳು ಡಿಸೆಂಬರ್ 14ರಂದು ಕೆಲಸ ನಿಲ್ಲಿಸಿದೆ. ಬಾಲಕನಲ್ಲಿ ಉಸಿರಾಟವಿತ್ತಾದರೂ ಆತನ ಮೆದುಳು ಸಂಪೂರ್ಣ ಸ್ತಬ್ಧವಾಗಿದೆ.
ಮಗ ಇನ್ನು ಬದುಕುವುದಿಲ್ಲ ಎನ್ನುವುದು ತಿಳಿದ ನಂತರ ಸಂಜೀವ್ ದಂಪತಿ ಆತನ ದೇಹದ ಅಂಗಾಂಗಗಳನ್ನು ದಾನ ಮಾಡುವ ನಿರ್ಧಾರ ಮಾಡಿದ್ದಾರೆ. ಅದರಂತೆ ಮಗುವಿನ ಹೃದಯ, ಶ್ವಾಸಕೋಶ, ಮೂತ್ರಪಿಂಡ, ಯಕೃತ್, ಕಣ್ಣನ್ನು ದಾನ ಮಾಡಲಾಗಿದೆ.
ಶ್ವಾಸಕೋಶ ಮತ್ತು ಹೃದಯವನ್ನು ಸೂರತ್ನಿಂದ 160 ಕಿ.ಮೀ ದೂರದ ಚೆನ್ನೈಗೆ ಹೆಲಿಕಾಫ್ಟರ್ ಮೂಲಕ ಸಾಗಿಸಲಾಗಿದೆ. ರಷ್ಯಾದ ನಾಲ್ಕು ವರ್ಷದ ಮಗುವಿಗೆ ಜಾಶ್ನ ಹೃದಯವನ್ನು ಅಳವಡಿಸಲಾಗಿದೆ. ಉಕ್ರೇನ್ನ ನಾಲ್ಕು ವರ್ಷದ ಮಗುವಿಗೆ ಜಾಶ್ನ ಶ್ವಾಸಕೋಶಗಳನ್ನು ಕಸಿ ಮಾಡಲಾಗಿದೆ. ಮೂತ್ರಪಿಂಡಗಳನ್ನು 265 ಕಿ.ಮೀ ದೂರದ ಅಹಮದಾಬಾದ್ಗೆ ರವಾನಿಸಲಾಗಿದ್ದು, ಅಲ್ಲಿ 13 ವರ್ಷ ಮತ್ತು 17 ವರ್ಷದ ಇಬ್ಬರು ಬಾಲಕಿಯರಿಗೆ ಕಸಿ ಮಾಡಲಾಗಿದೆ. ಎರಡು ವರ್ಷದ ಬಾಲಕಿಗೆ ಜಾಶ್ನ ಯಕೃತ್ನ್ನು ಅಳವಡಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.