ಲಂಡನ್, ಜ. 05: ಅತಿಥೇಯ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಶ್ರೀಲಂಕಾ ಪ್ರವಾಸಕ್ಕೆ ತೆರಳಿರುವ ಇಂಗ್ಲೆಂಡ್ ತಂಡಕ್ಕೆ ಕೊರೊನಾ ಕಂಟಕ ಎದುರಾಗಿದ್ದು, ತಂಡದ ಇಬ್ಬರು ಪ್ರಮುಖ ಆಟಗಾರರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಇಂಗ್ಲೆಂಡ್ ಆಟಗಾರರು ಜ.3ರಂದು ಶ್ರೀಲಂಕಾಕ್ಕೆ ಬಂದಿಳಿದ ವೇಳೆ ಪಿಸಿಆರ್ ಟೆಸ್ಟ್ ನಡೆಸಿದ್ದು, ಈ ಪೈಕಿ ಇಂಗ್ಲೆಂಡ್ ತಂಡದ ಬೌಲಿಂಗ್ ಆಲ್ರೌಂಡರ್ ಮೊಯಿನ್ ಅಲಿ ಅವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿರುವುದನ್ನು ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ ಖಚಿತಪಡಿಸಿದೆ.
ಈ ಹಿನ್ನೆಲೆಯಲ್ಲಿ ಶ್ರೀಲಂಕಾ ಸರ್ಕಾರದ ಕ್ವಾರಂಟೈನ್ ಮಾರ್ಗಸೂಚಿ ಅನ್ವಯ, ಮೊಯಿನ್ ಅಲಿ, ಹತ್ತು ದಿನಗಳ ಕಾಲ ಸೆಲ್ಫ್ ಐಸೋಲೇಷನ್ ನಲ್ಲಿ ಇರಲಿದ್ದಾರೆ. ಈ ನಡುವೆ ಮೊಯಿನ್ ಅಲಿ ಅವರೊಂದಿಗೆ ಹತ್ತಿರದ ಸಂಪರ್ಕ ಹೊಂದಿರುವ ಕಾರಣ, ಮತ್ತೋರ್ವ ಆಲ್ರೌಂಡರ್ ಕ್ರಿಸ್ ವೋಕ್ಸ್ ಅವರಿಗೆ ಸೋಂಕು ತಗುಲಿರುವ ಆತಂಕ ಎದುರಾಗಿದೆ. ಹೀಗಾಗಿ, ಮುಂದಿನ ಕೋವಿಡ್-19 ಪರೀಕ್ಷೆ ನಡೆಸುವವರೆಗೂ ಸೆಲ್ಫ್ ಐಸೋಲೇಷನ್ ನಲ್ಲಿ ಇರಲಿದ್ದಾರೆ.
ಉಭಯ ತಂಡಗಳ ನಡುವೆ 2 ಟೆಸ್ಟ್ ಪಂದ್ಯಗಳು ನಡೆಯಲಿದ್ದು, ಗಾಲೆ ಅಂಗಳದಲ್ಲಿ ನಡೆಯಲಿರುವ ಈ ಸರಣಿ ಜನವರಿ 14ರಿಂದ ಆರಂಭಗೊಳ್ಳಲಿದೆ.