ಮದುವೆ(Marriage) ಅನ್ನುವುದು ಸ್ವರ್ಗದಲ್ಲಿ ನಡೆಯುತ್ತದೆ ಎನ್ನುವ ಮಾತೊಂದಿದೆ. ‘ಋಣಾನುಬಂಧ ರೂಪೇಣ ಪಶು ಪತ್ನಿ ಸುತಾಲಯ’ ಎನ್ನುವ ಲೋಕೋಕ್ತಿಯಂತೆ, ಗಂಡು ಹೆಣ್ಣಿನ ವೈವಾಹಿಕ ಸಂಬಂಧವು ಪೂರ್ವಜನ್ಮದ ಋಣಾನುಬಂಧದ ಕಾರಣ ಸಂಭವಿಸುತ್ತದೆ ಅನ್ನುವ ಮಾತು ಕೂಡಾ ರೂಢಿಯಲ್ಲಿದೆ. ಆದರೆ ಇದಕ್ಕೆ ವಿರುದ್ಧ ಎನ್ನುವಂತೆ, ನೀವು ಹಿಂದೆಂದೂ ಕಂಡು ಕೇಳರಿಯದ ವಿಚಿತ್ರ ವಿವಾಹವೊಂದು ಜರುಗಿದೆ. ಹೌದು, ಇದು ಅಚ್ಚರಿಯಾದರೂ ನಿಜವಾದ ಸಂಗತಿ. ಇಂಗ್ಲೆಂಡ್ನಲ್ಲಿ(England) ಮಹಿಳೆಯೊಬ್ಬಳು ತನ್ನ ಸಾಕುನಾಯಿಯನ್ನು ಮದುವೆಯಾದ ವಿಲಕ್ಷಣ ಘಟನೆಯೊಂದು ನಡೆದಿದೆ.
ಟಿವಿಯಲ್ಲಿ ನೇರ ಪ್ರಸಾರವಾಗುತ್ತಿದ್ದ ‘ದಿಸ್ ಮಾರ್ನಿಂಗ್’ ಎಂಬ ಕಾರ್ಯಕ್ರಮದಲ್ಲಿ ಎಲಿಜಬೆತ್ ಹೋಡ್(Elizebeth Hode) ಎಂಬಾಕೆ ತನ್ನ ಸಾಕುನಾಯಿಯನ್ನೇ ವರಿಸಿದ್ದಾಳೆ. ಈಕೆಯ ಈ ನಿರ್ಧಾರಕ್ಕೆ ಅಚ್ಚರಿ ಪಡುವ ಕಾರಣವೂ ಇದೆ. 221 ಡೇಟಿಂಗ್ ಫೇಲ್ ಆದ ಬಳಿಕ, 4 ಎಂಗೇಜ್ ಮೆಂಟ್ ಮುರಿದು ಬಿದ್ದ ಬಳಿಕ ಪುರುಷರೊಂದಿಗಿನ ಸಂಬಂಧಗಳಿಂದ ಬೇಸತ್ತಿದ್ದ ಹೋಡ್, ಈ ಎಲ್ಲಾ ಸಂದರ್ಭಗಳಲ್ಲೂ ತನ್ನ ಜತೆಯೇ ಇದ್ದ ಪ್ರೀತಿಯ ನಾಯಿ ಲೋಗನ್ ಅನ್ನು ಮದುವೆಯಾಗಿದ್ದಾಳೆ.
ಈ ಕುರಿತು 49 ವರ್ಷದ ಎಲಿಜಬೆತ್ ಹೋಡ್ ಹೇಳುವುದು ಹೀಗೆ. “ಎಲ್ಲಾ ಎಂಗೇಜ್ ಮೆಂಟ್ ಗಳು ಬ್ರೇಕಪ್ ಆಗಿ, ಪುರುಷರೊಂದಿಗಿನ ಸಂಬಂಧವೇ ಬೇಡ ಎನಿಸಿಬಿಟ್ಟಿತ್ತು. ಪುರುಷರನ್ನೇ ಏಕೆ ಮದುವೆಯಾಗಬೇಕು ಎಂದು ಆಲೋಚಿಸಿ, ನನ್ನ ಸಾಕುನಾಯಿಯನ್ನೇ ವಿವಾಹವಾಗಲು ನಿರ್ಧರಿಸಿ, ಮದುವೆಯಾಗಿದ್ದೇನೆ. ಈಗ ನನಗೆ ನಿಜವಾದ ಪ್ರೀತಿ ನನ್ನ ನಾಯಿ ಲೋಗನ್ ನಿಂದ ಸಿಕ್ಕಿದೆ” ಎಂದು ತಿಳಿಸಿದ್ದಾಳೆ. ಎಲಿಜಬೆತ್ ಹೋಡ್ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈ ವಿಚಿತ್ರ ವಿವಾಹದ ವಿಡಿಯೋ ಭಾರೀ ವೈರಲ್ ಆಗಿದೆ.
- ಪವಿತ್ರ