ಪಂಚರಾಜ್ಯಗಳ ಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಆದರೆ ಇದೀಗ ಉತ್ತರಪ್ರದೇಶದಲ್ಲಿ ಇವಿಎಂ ಅಕ್ರಮ ವಿವಾದ ಸದ್ದು ಮಾಡುತ್ತಿದೆ.
ಆಡಳಿತ ಪಕ್ಷ ಬಿಜೆಪಿ ಅಧಿಕಾರ ಬಳಸಿಕೊಂಡು ಮತಯಂತ್ರಗಳನ್ನೇ ಟ್ಯಾಪರಿಂಗ್ ಮಾಡುತ್ತಿದೆ. ಅದೇ ರೀತಿ ಕೆಲವೆಡೆ ಮತಯಂತ್ರಗಳನ್ನು ಅಭ್ಯರ್ಥಿಗಳಿಗೆ ಯಾವುದೇ ಮಾಹಿತಿ ನೀಡದೇ ಸಾಗಿಸಲಾಗುತ್ತಿದೆ.
ಕಳೆದ 2017ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸುಮಾರು 50 ಕ್ಷೇತ್ರಗಳಲ್ಲಿ 5000 ಮತಗಳ ಅಂತರದಿಂದ ಗೆಲುವು ಸಾಧಿಸಿತ್ತು.

ಹೀಗಾಗಿಯೇ ಕಡಿಮೆ ಅಂತರದಲ್ಲಿ ಸೋಲುವ ಸಾಧ್ಯತೆ ಇರುವ ಕ್ಷೇತ್ರಗಳನ್ನು ಗುರುತಿಸಿ, ಅಲ್ಲಿ ಇವಿಎಂ ಯಂತ್ರಗಳನ್ನು ಬದಲಾವಣೆ ಮಾಡಲಾಗುತ್ತಿದೆ. ವಾರಣಾಸಿಯಲ್ಲಿ ಮತಯಂತ್ರಗಳನ್ನು ಟ್ರಕ್‍ನಲ್ಲಿ ಸಾಗಿಸುತ್ತಿರುವ ವಿಡಿಯೋಗಳನ್ನು ಹಂಚಿಕೊಂಡಿರುವ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಸರ್ಕಾರದ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ.
ಇನ್ನು ಅಖಿಲೇಶ್ ಯಾದವ್ ಮಾಡಿದ ಈ ಗಂಭೀರ ಆರೋಪಕ್ಕೆ ಸ್ಪಷ್ಟನೆ ನೀಡಿರುವ ವಾರಣಾಸಿ ಜಿಲ್ಲಾ ಮ್ಯಾಜಿಸ್ಟ್ರೇಟ್, ವಿಡಿಯೋದಲ್ಲಿರುವ ಇವಿಎಂಗಳನ್ನು ಮತದಾನಕ್ಕೆ ಬಳಸಿಲ್ಲ. ಅವುಗಳು ‘ಹ್ಯಾಂಡ್-ಆನ್’ ತರಬೇತಿಗಾಗಿ ಬಳಸಲಾಗುತ್ತಿರುವ ಮತಯಂತ್ರಗಳಾಗಿವೆ. ಕೆಲ ರಾಜಕೀಯ ಪಕ್ಷಗಳು ಸತ್ಯಾಸತ್ಯತೆಯನ್ನು ಅರಿಯದೇ ಕೇವಲ ವದಂತಿ ಹರಡುತ್ತಿವೆ ಎಂದಿದ್ದಾರೆ.
ಪ್ರತಿಬಾರಿ ಚುನಾವಣೆ ನಡೆದಾಗಲೂ ಇವಿಎಂ ವಿವಾದ ಸದ್ದು ಮಾಡುತ್ತದೆ. ಆದರೆ ಮತದಾನ ಪೂರ್ವದಲ್ಲಿ ಯಾವುದೇ ವಿವಾದ ಇರುವುದಿಲ್ಲ. ಮತದಾನವಾದ ನಂತರ ಅದರಲ್ಲೂ ಸಮೀಕ್ಷೆಗಳ ಫಲಿತಾಂಶ ಹೊರಬಿದ್ದ ನಂತರ ಇವಿಎಂ ಗಲಾಟೆ ಜೋರಾಗುತ್ತದೆ. ಇನ್ನು ಇವಿಎಂ ಕುರಿತು ಗಂಭೀರವಾಗಿ ಯೋಚಿಸಬೇಕಾದ ಕೆಲ ಮೂಲಭೂತ ಸಂಗತಿಗಳ ಬಗ್ಗೆ ಮಾತ್ರ ಯಾವುದೇ ರಾಜಕೀಯ ಪಕ್ಷದ ನಾಯಕರು ಮಾತನಾಡುವುದಿಲ್ಲ. ಆರೋಪ ಮಾಡುವಾಗ ತೋರುವ ಬದ್ದತೆಯನ್ನು ಅದಕ್ಕೆ ಉತ್ತರ ಕಂಡುಕೊಳ್ಳುವಾಗ ಮಾತ್ರ ಇರುವುದಿಲ್ಲ.

ಇನ್ನು ಇವಿಎಂ ಕುರಿತು ಮತ್ತು ಚುನಾವಣೆ ಅಕ್ರಮಗಳ ಕುರಿತು ಮಾತನಾಡುವವರು ಕೆಳಗಿನ ಈ ಪ್ರಶ್ನೆಗಳಿಗೆ ಉತ್ತರಿಸಬೇಕಾಗಿದೆ. ಇವಿಎಂ ಟ್ಯಾಪರಿಂಗ್ ಮಾಡಬಹುದು ಎಂದು ಆರೋಪ ಮಾಡಲಾಗುತ್ತದೆ. ಆದರೆ ಅದನ್ನು ನಿರೂಪಿಸಲು ಇದುವರೆಗೂ ಸಾಧ್ಯವಾಗಿಲ್ಲ. ಕೇಂದ್ರ ಚುನಾವಣಾ ಆಯೋಗ ಬಹಿರಂಗ ಆಹ್ವಾನ ನೀಡಿದರು, ಯಾವುದೇ ಪಕ್ಷ ಚುನಾವಣಾ ಆಯೋಗದ ಸವಾಲನ್ನು ಯಾಕೆ ಸ್ವೀಕರಿಸಲಿಲ್ಲ? ಇನ್ನು ಭಾರತದಲ್ಲಿ ಬಳಸಲಾಗುತ್ತಿರುವ ಮತಯಂತ್ರಗಳು ಯಾವುದೇ ರೀತಿಯ ಅಂರ್ತಜಾಲ ಸಂಪರ್ಕ ವ್ಯವಸ್ಥೆಯನ್ನು ಹೊಂದಿಲ್ಲ. ಹೀಗಾಗಿ ಅವುಗಳನ್ನು ಹ್ಯಾಕ್ ಮಾಡಲು ಸಾಧ್ಯವೇ?
ಮತಯಂತ್ರಗಳನ್ನು ಎಲ್ಲ ಅಭ್ಯರ್ಥಿಗಳ ಪ್ರತಿನಿಧಿಗಳ ಸಮ್ಮುಖದಲ್ಲೇ ಸೀಲ್ ಮಾಡಲಾಗುತ್ತದೆ. ನಂತರ ಅವುಗಳನ್ನು ಸಿಆರ್‍ಪಿಎಫ್ ಮತ್ತು ಪೋಲಿಸ್ ಭದ್ರತೆಯಲ್ಲಿ ಒಂದು ನಿರ್ಧಿಷ್ಟ ಕಟ್ಟಡದಲ್ಲಿ ಇಡಲಾಗುತ್ತದೆ. ಅಲ್ಲಿ ಪಕ್ಷಗಳ ಪ್ರತಿನಿಧಿಗಳನ್ನು ನೇಮಕ ಮಾಡಲಾಗುತ್ತದೆ. ಹೀಗಿದ್ದರೂ ಇವಿಎಂ ಕಳ್ಳತನ ಸಾದ್ಯವೇ? ಇನ್ನು ಪ್ರತಿಯೊಂದು ಮತಯಂತ್ರ ಇಟ್ಟಿರುವ ಕೋಣೆಯಲ್ಲಿ ಸಿಸಿಟಿವಿ ಅಳವಡಿಸಲಾಗಿರುತ್ತದೆ. ಸಿಸಿಟಿವಿ ಕಣ್ಣು ತಪ್ಪಿಸಿ, ಇವಿಎಂ ಕಳ್ಳತನ ಮಾಡಲು ಸಾಧ್ಯವೇ? ಈ ಹಿಂದೆ ಚುನಾವಣಾ ಅಕ್ರಮಗಳು ನಡೆದಿರಬಹುದು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಚುನಾವಣಾ ಅಕ್ರಮ ಮಾಡುವುದು ಅಷ್ಟು ಸುಲಭವೇ?
