ಕಠ್ಮಂಡು, ಮಾ. 01: ವಾಯುಮಾಲಿನ್ಯ ಅಪಾಯಕಾರಿ ಮಟ್ಟವನ್ನು ತಲುಪಿದ ಕಾರಣ ನೇಪಾಳದಲ್ಲಿ ನಾಲ್ಕು ದಿನಗಳ ಕಾಲ ಶಾಲೆಯನ್ನು ಮುಚ್ಚಲಾಗಿದೆ. ಇದರಿಂದಾಗಿ ಲಕ್ಷಾಂತರ ವಿದ್ಯಾರ್ಥಿಗಳು ಮನೆಯಲ್ಲೇ ಉಳಿಯುವಂತಾಗಿದೆ. ಸುಮಾರು 30 ಲಕ್ಷ ಜನಸಂಖ್ಯೆ ಇರುವ ನೇಪಾಳವು ಹಿಮಾಲಯ ಪರ್ವತ ಶ್ರೇಣಿ, ಚೀನಾ ಹಾಗೂ ಭಾರತದ ನಡುವೆ ಇದೆ.
ಶೀಘ್ರವಾಗಿ ಬೆಳವಣಿಗೆ ಹೊಂದುತ್ತಿರುವ ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ವಾಯುಮಾಲಿನ್ಯ ಕೂಡ ದೀರ್ಘಕಾಲದ ಸಮಸ್ಯೆಯಾಗಿದೆ. 2016ರಿಂದಲೂ ವಾಯು ಗುಣಮಟ್ಟ ಕಳಪೆಯಾಗುತ್ತಿತ್ತು. ವಾರಾಂತ್ಯದ ಬಳಿಕ ವಾಯುಮಾಲಿನ್ಯ ಅತ್ಯಂತ ಗರಿಷ್ಠ ಮಟ್ಟವನ್ನು ತಲುಪಿದೆ ಎಂದು ಸರ್ಕಾರಿ ಅಧಿಕಾರಿ ಶಂಕರ್ ಪೌಡೆಲ್ ಮಾಹಿತಿ ನೀಡಿದ್ದಾರೆ. ಈ ಪರಿಸ್ಥಿತಿಯಿಂದ ಸುಮಾರು 8 ಲಕ್ಷ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ ಎಂದು ಶಿಕ್ಷಣ ಇಲಾಖೆ ವಕ್ತಾರ ದೀಪಕ್ ಶರ್ಮಾ ಹೇಳಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಪಿಎಂ2.5 ಮಟ್ಟ ಹೆಚ್ಚಾಗಿದೆ. ಗಾಳಿಯಲ್ಲಿ ತೇಲುವ ಅತಿಸೂಕ್ಷ್ಮ ಘನ ಮತ್ತು ದ್ರವಕಣಗಳನ್ನು ಪರ್ಟಿಕ್ಯುಲೇಟ್ ಮ್ಯಾಟರ್ (ಪಿಎಂ) ಎಂದು ಕರೆಯುತ್ತಾರೆ. ಶ್ವಾಸಕೋಶದ ಆಳಕ್ಕೆ ತಲುಪಬಲ್ಲ ಈ ಕಣಗಳು ವ್ಯಾಪಕ ಹಾನಿಯುಂಟು ಮಾಡಬಲ್ಲವು. ಕಠ್ಮಂಡು ನಗರದ ಭೈಸೆಪತಿ ಪ್ರದೇಶದಲ್ಲಿ ಪ್ರತಿ ಕ್ಯೂಬಿಕ್ ಮೀಟರ್ ಪ್ರದೇಶದಲ್ಲಿ 214 ಮೈಕ್ರೊಗ್ರಾಂಗಳಷ್ಟು ಇತ್ತು. ಸರ್ಕಾರದ ನಿಯಮಗಳ ಪ್ರಕಾರ ಪ್ರತಿ ಕ್ಯೂಬಿಕ್ ಮೀಟರ್ಗೆ 40 ಮೈಕ್ರೊಗ್ರಾಂಗಳಷ್ಟಿರಬೇಕು.
ಕಠ್ಮಂಡುವಿನಲ್ಲಿ ದಿನಸಿ ಅಂಗಡಿ ಇಟ್ಟುಕೊಂಡಿರುವ 65 ವರ್ಷ ವಯಸ್ಸಿನ ಅರ್ಜುನ್ ಖಾಡ್ಕ, ತಮಗೆ ಕಣ್ಣು ಹಾಗೂ ಮೂಗಿನಲ್ಲಿ ಸುಡುವ ಅನುಭವ ಆಗಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಈ ಮಟ್ಟದ ವಾಯು ಮಾಲಿನ್ಯವನ್ನು ನಾನು ಕಠ್ಮಂಡುವಿನಲ್ಲಿ ಕಂಡಿರಲಿಲ್ಲ ಎಂದೂ ಅವರು ತಿಳಿಸಿದ್ದಾರೆ. ಜನರು ಸಾಧ್ಯವಾದಷ್ಟು ಮನೆಯೊಳಗೆ ಉಳಿದುಕೊಳ್ಳಬೇಕು. ಅಗತ್ಯ ಕೆಲಸಕಾರ್ಯಗಳಿಗೆ ಮಾತ್ರ ಮನೆಯಿಂದ ಹೊರಬರಬೇಕು ಎಂದು ಆರೋಗ್ಯ ಸಚಿವಾಲಯ ಸೂಚಿಸಿದೆ.