ಪ್ರವಾಸಿಗರ ಮನಸ್ಸಿಗೆ ಮುದ ನೀಡುವ ಈ ಅಬ್ಬಿ ಫಾಲ್ಸ್
ನ ವಿಶೇಷತೆಯ ಬಗ್ಗೆ ಕೇಳಿದ್ರೆ ನೀವು ಖಂಡಿತವಾಗಿ ಶೀಘ್ರವೇ ಭೇಟಿ ನೀಡುವುದರ ಬಗ್ಗೆ ಯೋಚಿಸುತ್ತೀರಾ ಎಂಬುದರಲ್ಲಿ ಅನುಮಾನವೇ ಇಲ್ಲ.
ಅಷ್ಟು ಸುಂದರವಾಗಿದೆ ಇಲ್ಲಿನ ಪ್ರಕೃತಿ ಸೌಂದರ್ಯ. ಅಬ್ಬಿ ಫಾಲ್ಸ್ ಕೊಡಗು ಜಿಲ್ಲೆಯ ಮಡಿಕೇರಿ ಸಮೀಪದಲ್ಲಿದೆ. ಕೊಡಗಿನಲ್ಲಿ ಅತಿ ಹೆಚ್ಚಾಗಿ ಕಾಫಿ ಬೆಳೆಯುತ್ತಾರೆ. ಕಾಫಿ ಮಾತ್ರವಲ್ಲದೇ ಟೀ ಕೂಡ ಬೆಳೆಯುತ್ತಾರೆ. ಆ ಕಾಫಿ ತೋಟಗಳ ಮಧ್ಯೆಯೇ ನಾವು ಈ ಜಲಪಾತಕ್ಕೆ ಹೋಗಬೇಕಿದೆ. ಅಲ್ಲಿ ಹೋಗಬೇಕಾದರೆ ಇನ್ನೊಂದು ಸುಂದರವಾದ ನೋಟವೆಂದರೆ ಅದು ತೂಗು ಸೇತುವೆ, ತೂಗು ಸೇತುವೆಯಲ್ಲಿ ನಡೆದಾಡಲು ಅನೇಕ ಪ್ರವಾಸಿಗರಿಗೆ ಸಂತಸವೆನ್ನಿಸುತ್ತದೆ.

ಅಬ್ಬಿ ಜಲಪಾತವನ್ನು ಮುಂಗಾರಿನಲ್ಲಿ ನೋಡಲು ಇನ್ನು ಆಕರ್ಷಣಿಯವಾಗಿರುತ್ತದೆ. ಆ ಜಲಪಾತದ ನೀರಿನ ಜೊತೆಗೆ ಮಳೆ ನೀರು ಸೇರಿ ಈ ಅಬ್ಬಿ ಜಲಪಾತ ರಮಣಿಯವಾಗಿ ಕಾಣುತ್ತದೆ. ಜಲಪಾತದ ಸುತ್ತಲೂ ಹಚ್ಚ ಹಸಿರನ್ನು ಹೊದ್ದು ಮಲಗಿದಂತೆ ಕಾಣುವ ಪ್ರಕೃತಿ. ಇಲ್ಲಿ ನೀರು ದೊಡ್ಡ ದಂಡೆಯ ಮೇಲೆ ದುಮುಕುತ್ತ ಬರುತ್ತದೆ. ಆ ದೃಶ್ಯ ವೀಕ್ಷಣೆ ಮಾಡಲು ಎರಡು ಕಣ್ಣು ಸಾಲದು. ಅಬ್ಬಿ ಜಲಪಾತವು ನೋಡುಗರಿಗೆ ಮತ್ತು ಪ್ರವಾಸಿಗರಿಗೆ ಅದ್ಭುತವಾದ ತಾಣವಾಗಿದೆ. ಈ ಜಲಪಾತವು ಮಡಿಕೇರಿಯಿಂದ 6 ಕಿ.ಮೀ ದೂರದಲ್ಲಿದೆ.

ಈ ಭೋರ್ಗರೆಯುವ ಜಲಪಾತದ ಸುಂದರ ದೃಶ್ಯವೇ ಪ್ರವಾಸಿಗರನ್ನು ತನ್ನತ್ತಾ ಸೆಳೆಯುತ್ತಿರುವುದು. ಈ ಜಲಪಾತದಲ್ಲಿ ಹರಿಯುವ ನೀರು ಹಾಲಿನ ನೊರೆಯಂತೆ ಕಾಣುತ್ತಿರುತ್ತದೆ. ಬೇಸಿಗೆಯಲ್ಲಿ ತುಸು ಒಣಗುವ ಈ ಅಬ್ಬಿ ಫಾಲ್ಸ್, ಮಳೆಗಾಲದಲ್ಲಿ ತನ್ನ ಸೌಂದರ್ಯವನ್ನು ಹರಿಬಿಡುತ್ತದೆ. ಈ ಅಬ್ಬಿ ಫಾಲ್ಸ್ ಅನ್ನು “ಮಳೆಗಾಲದ ಮದುಮಗಳು” ಎಂದೇ ಕರೆಯುತ್ತಾರೆ. ಈ ನೀರಿನ ಭೋರ್ಗರೆತದ ದನಿಯನ್ನು ಕೇಳಲು ಇಂಪು ಅನಿಸುತ್ತದೆ. ಈ ಜಲಪಾತ ನೋಡಿದರೆ ನೀವು ಮೂಕವಿಸ್ಮಿತರಾಗುವುದಂತು ಖಂಡಿತ. ಈ ಅಬ್ಬಿ ಫಾಲ್ಸ್ ನ ರಮಣೀಯ ಚಿತ್ರಣ ನೋಡಲು ಮಳೆಗಾಲವೇ ಸೂಕ್ತ. ಮಳೆಗಾಲದಲ್ಲೇ ಈ ಜಲಪಾತ ತನ್ನ ಸೌಂದರ್ಯದ ಮೆರಗನ್ನು ಹೆಚ್ಚಾಗಿ ಪ್ರವಾಸಿಗರಿಗೆ ಪರಿಚಯಿಸುವುದು.
- Sowjanya