ಜಿರಳೆಗಳಿಲ್ಲದ(Cockroach) ಮನೆಯೇ ಇಲ್ಲ, ಪ್ರತಿಯೊಬ್ಬರ ಮನೆಯಲ್ಲಿಯೂ ಜಿರಳೆಗಳು ಮನುಷ್ಯರ ಜೊತೆಗೆ ವಾಸಿಸುತ್ತವೆ. ಯಾವ ಕೀಟನಾಶಕ ತಂದು ಹಾಕಿದರೂ ಜಿರಳೆಗಳನ್ನ ಸಂಪೂರ್ಣವಾಗಿ ನಿರ್ಮೂಲನ ಮಾಡಲು ಸಾಧ್ಯವಿಲ್ಲ. ಇಂತಹ ಜಿರಳೆಗಳು ಮಾನವನ ಆರೋಗ್ಯದ ಮೇಲೆ ಕೂಡ ಕೆಟ್ಟ ಪರಿಣಾಮವನ್ನು ಬೀರುತ್ತವೆ. ಇನ್ನು, ಪುಸ್ತಕದ ರಾಶಿ, ಬಟ್ಟೆ ಗಂಟು ಜಿರಳೆಗಳ ನೆಚ್ಚಿನ ವಾಸಸ್ಥಾನ. ಅಸಹ್ಯ ಎಂದೇ ಪರಿಗಣಿಸಲ್ಪಟ್ಟಿರುವ ಜಿರಳೆಯ ಬಗ್ಗೆ ನಿಮಗೆ ಗೊತ್ತಿರದ ಆಶ್ಚರ್ಯಕರ ಸಂಗತಿಗಳು ಹಲವಾರು ಇವೆ. ಮೊದಲನೆಯದಾಗಿ, ಪ್ರಪಂಚದಲ್ಲಿ ಒಟ್ಟು 4 ಸಾವಿರ ಜಾತಿಯ ಜಿರಳೆಗಳಿವೆ.
ಅರಣ್ಯದ ಆರೋಗ್ಯ ಕಾಪಾಡುವುದರಲ್ಲೂ ಜಿರಳೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂಬುದನ್ನು ನಂಬಲೇಬೇಕು. ಇನ್ನು, ವಿಜ್ಞಾನಿಗಳು ಹೇಳುವಂತೆ ಜಿರಳೆಗಳು ಪರಮಾಣು ಸ್ಫೋಟಕ್ಕೆ ತಡೆ ಒಡ್ಡುತ್ತವೆಯಂತೆ! ಹೌದು, ಜಿರಳೆಗಳು ರೆಡಿಯೇಶನ್ಗೆ ತಡೆ ಒಡ್ಡುತ್ತವೆ ಎಂದು ಕೆಲ ಸಂಶೋಧನೆಗಳು ಹೇಳಿವೆ. ಅದೇ ರೀತಿ, ಪ್ರಪಂಚದಲ್ಲಿ ಯಾವುದಾದರೂ ಪುರಾತನ ಜೀವಿ ಇದ್ದರೆ ಅದು ಜಿರಳೆ ಮಾತ್ರ. ಜಿರಳೆಗೆ 360 ಮಿಲಿಯನ್ ವರ್ಷದ ಇತಿಹಾಸವಿದೆ. ಮಾನವನಿಗಿಂತಲೂ ಜಿರಳೆಗಳು ಹಿರಿಯರು! ಜಿರಳೆಗಳು ತಲೆ ಇಲ್ಲದೆಯೇ ಬದುಕಬಲ್ಲವು ಎಂಬುದು ಇನ್ನೊಂದು ಅಚ್ಚರಿ!
ಹೌದು, ತಲೆ ಕಳೆದುಕೊಂಡ ಜಿರಳೆ ಸಹ ಕೆಲ ದಿನಗಳ ಕಾಲ ಆರಾಮವಾಗಿ ಬದುಕುತ್ತದೆ. ಹಾಗೇ, ಚೀನಾದಲ್ಲಿ ಜಿರಳೆ ಸಾಕಣೆ ಒಂದು ಉದ್ಯಮವಾಗಿದೆ, ಔಷಧಗಳ ತಯಾರಿಕೆಯಲ್ಲೂ ಜಿರಳೆಯನ್ನು ಹೇರಳವಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇನ್ನು ವಿಜ್ಞಾನಿಗಳಿಗಂತೂ ಜಿರಳೆ ಎನ್ನುವುದು ಸಂಶೋಧನೆಯ ದೊಡ್ಡ ಭಂಡಾರ. ವಿಜ್ಞಾನಿಗಳ ನಿರಂತರ ಪ್ರಯೋಗ ಮತ್ತು ಸಂಶೋಧನೆಗಳು ಜಿರಳೆಗಳ ಮೇಲೆ ನಡೆಯುತ್ತಲೇ ಇದೆ. ಇಂತಹ ಜಿರಳೆಗಳನ್ನು ಕಂಡರೆ ಕೆಲವರಿಗೆ ಅಸಹ್ಯ, ಇನ್ನೂ ಕೆಲವರಿಗೆ ಅತೀವ ಭಯ.
ಹೀಗೆ ಜಿರಳೆಗಳ ಬಗ್ಗೆ ಇರುವ ಅತಿಯಾದ ಭಯವನ್ನು ‘ಕಟ್ಸರಿಡಾಫೋಬಿಯಾ’ ಎಂದು ಕರೆಯಲಾಗುತ್ತದೆ. ಇದರಿಂದ ಬಳಲುತ್ತಿರುವ ವ್ಯಕ್ತಿಗಳು ಕಾಲ ಕ್ರಮೇಣ ದುರ್ಬಲರಾಗಬಹುದು. ಕಟ್ಸರಿಡಾಫೋಬಿಯ ನಿವಾರಣೆಗೆ, ಅರಿವಿನ ವರ್ತನೆಯ ಚಿಕಿತ್ಸೆಯನ್ನು ಬಳಸಿಕೊಂಡು ಕ್ರಮೇಣ ಡಿಸೆಂಟೈಸೇಶನ್ ವಿಧಾನದ ಮೂಲಕ ಚಿಕಿತ್ಸೆ ನೀಡಲಾಗುತ್ತದೆ.
- ಪವಿತ್ರ