ದಲಿತರಿಗೆ ರಾಜಕೀಯ(Politics) ಅಧಿಕಾರ ಸಿಕ್ಕಾಗ ಮಾತ್ರ ಅವರ ಅಭಿವೃದ್ದಿ ಸಾಧ್ಯ ಎಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್(Dr B.R Ambedkar) ಅವರು ಬಲವಾಗಿ ನಂಬಿದ್ದರು. ಹೀಗಾಗಿಯೇ ಅವರು ಮೀಸಲು ಕ್ಷೇತ್ರಗಳನ್ನು ಸೃಷ್ಟಿ ಮಾಡಿದರು. ಈ ಮೀಸಲು ಕ್ಷೇತ್ರಗಳ ಮೂಲಕ ದಲಿತ ವರ್ಗ ಸದಾ ಅಧಿಕಾರದ ಭಾಗವಾಗಿರಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬ ದಲಿತನಿಗೂ ರಾಜಕೀಯ ಅಧಿಕಾರ ದೊರೆಯುವ ಸಾಧ್ಯತೆ ಹೆಚ್ಚುತ್ತದೆ. ಆದರೆ ದಲಿತ ನಾಯಕರ ಕುಟುಂಬ ರಾಜಕೀಯ ಅಂಬೇಡ್ಕರ್ ಅವರ ಆಶಯವನ್ನು ನಾಶ ಮಾಡುತ್ತಿದೆ.
ಪ್ರಸ್ತುತ ಅಂಬೇಡ್ಕರ್ ಅವರ ಆಶಯಗಳಿಗೆ ವಿರುದ್ದವಾಗಿ ಮೀಸಲು ಕ್ಷೇತ್ರಗಳು ಕುಟುಂಬ ರಾಜಕೀಯಕ್ಕೆ ಮೀಸಲಾಗುತ್ತಿವೆ. ದಲಿತ ನಾಯಕರು ತಮ್ಮ ಸಮುದಾಯಕ್ಕೆ ಮೀಸಲಿರಬೇಕಿದ್ದ ಕ್ಷೇತ್ರಗಳನ್ನು, ತಮ್ಮ ಕುಟುಂಬ ರಾಜಕೀಯ ಶಕ್ತಿ ಕೇಂದ್ರಗಳಾಗಿ ಬಳಸಿಕೊಳ್ಳುತ್ತಿದ್ದಾರೆ. ಮೀಸಲು ಕ್ಷೇತ್ರಗಳಲ್ಲಿ ಇಂದು ಹಿರಿಯ ದಲಿತ ನಾಯಕರ ಮಕ್ಕಳೇ ಶಾಸಕರಾಗಿ, ಸಂಸದರಾಗಿ ಆಯ್ಕೆಯಾಗುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ.
ಕರ್ನಾಟಕದಲ್ಲಿ ಗೋವಿಂದ ಕಾರಜೋಳ ಮಗ ಗೋಪಾಲ ಕಾರಜೋಳ, ಶ್ರೀನಿವಾಸ್ಪ್ರಸಾದ್ಅಳಿಯ ಹರ್ಷವರ್ಧನ್, ಚಿಕ್ಕಮಾದು ಮಗ ಅನಿಲ್ಚಿಕ್ಕಮಾದು, ಸಂಸದ ಉಮೇಶ್ಜಾದವ್ಮಗ ಅವಿನಾಶ್ಜಾದವ್, ಶ್ರೀರಾಮುಲು ಸಹೋದರಿ ಶಾಂತಾ, ಮುನಿಯಪ್ಪ ಪುತ್ರಿ ರೂಪಾ ಶಶಿಧರ್, ಜಾರಕಿಹೊಳಿ ಸಹೋದರರು, ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ ಖರ್ಗೆ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಈ ಎಲ್ಲ ದಲಿತ ನಾಯಕರ ಮಕ್ಕಳು ಮೀಸಲು ಕ್ಷೇತ್ರಗಳಿಂದಲೇ ಗೆದ್ದು ಅಧಿಕಾರ ಹಿಡಿಯುತ್ತಿದ್ದಾರೆ. ಸಾಮಾನ್ಯ ಕ್ಷೇತ್ರಗಳಿಂದ ಗೆದ್ದು ಅಧಿಕಾರ ಹಿಡಿದರೆ ಅದನ್ನು ಸಮರ್ಥಿಸಿಕೊಳ್ಳಬಹುದು.
ಆದರೆ ದಲಿತ ಸಮುದಾಯಕ್ಕೆ ಮಾತ್ರ ಸೀಮಿತವಾಗಿರುವ ಕ್ಷೇತ್ರಗಳನ್ನು ತಮ್ಮ ಕುಟುಂಬಗಳಿಗೆ ಮೀಸಲುಗೊಳಿಸುತ್ತಿರುವ ಈ ನಾಯಕರ ನಡೆಯನ್ನು ದಲಿತ ಸಮುದಾಯವೇ ಪ್ರಶ್ನಿಸಬೇಕಿದೆ. ಕುಟುಂಬ ರಾಜಕೀಯ ವ್ಯವಸ್ಥೆಯೂ ಪ್ರಜಾಪ್ರಭುತ್ವವನ್ನು(Democracy) ದುರ್ಬಲಗೊಳಿಸುತ್ತದೆ. ಅದೇ ರೀತಿ ಮೀಸಲು ಕ್ಷೇತ್ರಗಳಲ್ಲಿನ ದಲಿತ ನಾಯಕರ ಕುಟುಂಬ ರಾಜಕೀಯ ದಲಿತ ಸಮುದಾಯದ ಶಕ್ತಿಯನ್ನು ಕುಗ್ಗಿಸುತ್ತದೆ. ಇಡೀ ದಲಿತ ಸಮುದಾಯವನ್ನು ಪ್ರತಿನಿಧಿಸಬೇಕಾದವರು, ಕೇವಲ ಕುಟುಂಬವನ್ನು ಪ್ರತಿನಿಧಿಸುವ ದುರ್ಬಲ ನಾಯಕರಾಗುತ್ತಾರೆ.
ಹೀಗಾಗಿ ದಲಿತ ನಾಯಕರು ತಮ್ಮ ಮಕ್ಕಳಿಗೆ ಮೀಸಲು ಕ್ಷೇತ್ರಗಳಿಂದ ಟಿಕೆಟ್ ನೀಡಬಾರದು. ಸಾಮಾನ್ಯ ಕ್ಷೇತ್ರಗಳಿಂದಲೇ ಅವರನ್ನು ಕಣಕ್ಕಿಳಿಸಬೇಕು. ಮೀಸಲು ಕ್ಷೇತ್ರಗಳು ಸಾಮಾನ್ಯ ದಲಿತನಿಗೆ ಮೀಸಲಿರಬೇಕು. ಸದಾ ಹರಿಯುವ ನೀರಿನಂತೆ ಮೀಸಲು ಕ್ಷೇತ್ರಳಿಂದ ಹೊಸಹೊಸ ದಲಿತ ನಾಯಕರು ಉದಯವಾಗಬೇಕು. ದಲಿತ ಸಮುದಾಯಕ್ಕೆ ರಾಜಕೀಯ ಶಕ್ತಿ ನೀಡಬೇಕು.