ನವದೆಹಲಿ 19 : ಕೇಂದ್ರ ಸರ್ಕಾರ ಗುರು ನಾನಕ್ ಜಯಂತಿಯಂದೇ ಮಹತ್ವದ ತೀರ್ಮಾನ ಕೈಗೊಂಡಿದ್ದು, 3 ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆದಿದೆ. ಗುರು ಪೂರ್ಣಿಮೆಯ ಹಿನ್ನೆಲೆಯಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕಾಯ್ದೆ ಹಿಂಪಡೆಯಲು ನಿರ್ಧರಿಸಲಾಗಿದೆ ಎಂದು ಘೋಷಿಸಿದ್ದಾರೆ. ಕಳೆದ ಒಂದು ವರ್ಷದಿಂದ ಕಾಯ್ದೆ ಹಿಂಪಡಿಯುವಂತೆ ರೈತರು ದೆಹಲಿ ಗಡಿಯಲ್ಲಿ ಪ್ರತಿಭಟನೆ, ಹೋರಾಟ ನಡೆಸುತ್ತಿದ್ದರು, ಕೊನೆಗೂ ರೈತರ ಹೋರಾಟಕ್ಕೆ ಮೋದಿ ಸರ್ಕಾರ ಮಣಿದಿದೆ.
ಪಂಜಾಬ್ ರಾಜ್ಯಾದ್ಯಂತ ಪ್ರಧಾನಿ ಮೋದಿ ಸರ್ಕಾರ ಜಾರಿಗೆ ತರಲು ಉದ್ದೇಶಿಸಿದ್ದ ನೂತನ ಕೃಷಿ ಕಾಯ್ದೆಗೆ (Farm Bill) ವ್ಯಾಪಕ ಪ್ರತಿಭಟನೆಗಳು ವ್ಯಕ್ತವಾಗಿದ್ದವು. ಕೇಂದ್ರ ಸರ್ಕಾರ ರೈತರ ಮನವೊಲಿಸಲು ಸಾಕಷ್ಟು ಪ್ರಯತ್ನಿಸಿತಾದರೂ ಅದರಲ್ಲಿ ಯಶಸ್ವಿಯಾಗಲಿಲ್ಲ. ಇದರ ಬೆನ್ನಲ್ಲೇ ಗುರು ಪೂರಬ್ ದಿನದಂದು ಪ್ರಧಾನಿ ನರೇಂದ್ರ ಮೋದಿ ಮಹತ್ವದ ಘೋಷಣೆ ಮಾಡಿದ್ದು, ಮೂರು ಕೃಷಿ ಕಾನೂನುಗಳನ್ನು ವಾಪಾಸ್ ಪಡೆಯಲು ತೀರ್ಮಾನಿಸಿದೆ. ಇದರೊಂದಿಗೆ ವರ್ಷಗಳ ರೈತರ ಹೋರಾಟಕ್ಕೆ ಗೆಲುವು ಸಿಕ್ಕಂತೆ ಆಗಿದೆ.
3 ಕೃಷಿ ತಿದ್ದುಪಡಿ ಕಾಯ್ದೆಯನ್ನು ಮರಳಿ ಪಡೆದ ನಂತರ ಪ್ರಧಾನಿ, ಮತ್ತಷ್ಟು ಹೆಚ್ಚಿನ ಶ್ರಮ ವಹಿಸಿ ದುಡಿಯುವುದಾಗಿ ಭರವಸೆ ನೀಡಿದ್ದಾರೆ. ‘‘ನಾನೇನು ಮಾಡಿದ್ದೇನೋ, ಅದೆಲ್ಲವೂ ರೈತರಿಗಾಗಿ. ನಾನು ಮಾಡುತ್ತಿರುವ ಕೆಲಸಗಳು ದೇಶಕ್ಕಾಗಿ. ಇಂದು ಎಲ್ಲರಿಗೂ ನಾನು, ಇನ್ನೂ ದೇಶಕ್ಕಾಗಿ ಮತ್ತಷ್ಟು ಹೆಚ್ಚು ಶ್ರಮವಹಿಸಿ ದುಡಿಯುತ್ತೇನೆ ಎಂದು ಭರವಸೆ ನೀಡುತ್ತೇನೆ. ಇದರಿಂದಾಗಿ ನಿಮ್ಮ ಮತ್ತು ದೇಶದ ಕನಸು ನನಸಾಗಲು ಸಾಧ್ಯವಾಗುತ್ತದೆ’’ ಎಂದು ಹೇಳಿದ್ದಾರೆ.