ಇದು ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೂಡಲಗಿ ಗ್ರಾಮದ ರೈತರ ದಾರುಣ ಸ್ಥಿತಿ. ಕಳೆದ ವರ್ಷ ಸುರಿದ ಭಾರೀ ಮಳೆಗೆ ರೈತರ ಹೊಲ ಗದ್ದೆಗಳು ಕೊಚ್ಚಿ ಹೋಗಿದ್ದವು. ಎಕರೆಗಟ್ಟಲೆ ಭೂಮಿಯ ಬೆಳೆ ನಾಶವಾಗಿ ರೈತ ಭಾರೀ ಸಂಕಷ್ಟ ಎದುರಿಸಿದ್ದ.
ರೈತರ ನೋವು ಅರಿತು ಸರ್ಕಾರ ಮಳೆ ಪರಿಹಾರ ಘೋಷಣೆ ಮಾಡಿತ್ತು. ಆದ್ರೆ ಅದೆಷ್ಟೋ ರೈತರಿಗೆ ಆ ಪರಿಹಾರ ಧನ ಕನ್ನಡಿಯೊಳಗಿನ ಗಟ್ಟಿನಂತಾಗಿದೆ. ಸರ್ಕಾರಿ ಕಚೇರಿಗೆ ಅಲೆದ್ರೂ ಅನೇಕ ಫಲಾನುಭವಿಗಳಿಗೆ ಪರಿಹಾರ ಇನ್ನೂ ದಕ್ಕಲಿಲ್ಲ.
ಇದು ಕೂಡಲಗಿ ಗ್ರಾಮದ ಸರ್ವೇ ನಂಬರ್ 32 ಹಾಗೂ 33. ನೆರೆಯಿಂದಾಗಿ ಇಲ್ಲಿನ ಜಮೀನಿನ ರೈತರಿಗೆ ಭಾರೀ ನಷ್ಟವುಂಟಾಗಿತ್ತು. ಆದರೆ ಈವರೆಗೂ ಯಾವುದೇ ಪರಿಹಾರ ಧನ ದೊರಕಲಿಲ್ಲ ಎಂಬುದು ರೈತನ ಅಳಲಾಗಿದೆ.
ಬೆಳೆ ಪರಿಹಾರ ಧನ ದೊರೆಯದೇ ಇರಲು ಅಧಿಕಾರಿಗಳ ನಿರ್ಲಕ್ಷ ಮುಖ್ಯ ಕಾರಣವಾಗಿದೆ. ಇನ್ನು ಕೆಲವು ರೈತರಿಗೆ ಅಧಿಕಾರಿಗಳು ಉದ್ದೇಶ ಪೂರ್ವಕವಾಗಿಯೋ ಪರಿಹಾರ ಕೊಡದೆ ಸತಾಯಿಸುತ್ತಿದ್ದಾರೆ ಅನ್ನೋದು ರೈತರ ಆರೋಪ.
ಯುವ ರೈತ ಸಂದೀಪನ ಕತೆ ಕೇಳಿ. ಸಾಲ ಸೋಲ ಮಾಡಿ ಸಂದೀಪ್ ಮೆಣಸಿನಕಾಯಿ, ದಾಳಿಂಬೆ ಹಾಗೂ ಕಲ್ಲಂಗಡಿ ಬೆಳೆದಿದ್ರು. ಮಳೆ ಅವರ ಕನಸನ್ನೆಲ್ಲಾ ಕೊಚ್ಚಿಕೊಂಡು ಹೋಯ್ತು. ಆದ್ರೆ ಸರ್ಕಾರ ಬೆಳೆ ಪರಿಹಾರ ಘೋಷಣೆ ಮಾಡಿದಾಗ ಈ ಯುವ ರೈತನ ಮುಖದಲ್ಲಿ ಮಂದಹಾಸ ಮೂಡಿತ್ತು.
ಬೆಳೆ ಪರಿಹಾರ ಪಡೆಯಲು ಸಂದೀಪ್ ಎಲ್ಲಾ ನಿಯಮಗಳನ್ನು ಪಾಲಿಸಿದ್ರು. ಆದ್ರೆ ಬೆಳೆ ನಾಶವಾಗಿ ಒಂದು ವರ್ಷವಾದರೂ ಕೂಡ ಇನ್ನೂ ಇವರಿಗೆ ಒಂದು ರೂಪಾಯಿಯೂ ಪಾವತಿಯಾಗಿಲ್ಲ. ಆ ಅಧಿಕಾರಿಗಳು ತನಗೆ ಅನ್ಯಾಯವೆಸಗಿದ್ದಾರೆ ಎಂಬುದು ರೈತ ಸಂದಿಪ್ ಅವರ ದೂರಾಗಿದೆ.
ಅಲ್ಲದೇ ಅನೇಕ ಬಾರಿ ಗ್ರಾಮ ಲೆಕ್ಕಾಧಿಕಾರಿಗಳಿಗೆ ಸಂಬಂಧಪಟ್ಟ ದಾಖಲಾತಿಯನ್ನು ನೀಡಿದರೂ ಕೂಡ ಯಾವುದೇ ಪ್ರಯೋಜನವಾಗಲಿಲ್ಲ. ತಮಾಷೆ ಅಂದ್ರೆ ಬೆಳೆ ನಷ್ಟ ಆಗದ ರೈತರಿಗೆ ಪರಿಹಾರ ಸಿಕ್ಕಿದೆ, ಆದ್ರೆ ನಿಜವಾಗೊಯೂ ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ಕೊಟ್ಟಿಲ್ಲ. ಇಲ್ಲಿಯೂ ಕಮಿಷನ್ ದಂಧೆ ನಡೆದಿದೆ ಅನ್ನೋದು ರೈತರ ನೇರ ಆರೋಪ.
ಆದಷ್ಟು ಬೇಗ ಅಧಿಕಾರಿಗಳು ಎಚ್ಚೆತ್ತುಕೊಂಡು ಪ್ರಾಮಾಣಿಕವಾಗಿ ರೈತರಿಗೆ ಪರಿಹಾರ ನೀಡಬೇಕು, ಇಲ್ಲದೇ ಹೋದರೆ ಜಿಲ್ಲ್ಆಧಿಕಾರಿ ಕಾಯರ್ಯಾಲಯದ ಎದುರು ಪ್ರತಿಭಟನೆ ನಡೆಸುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ.
ಸಿಟಿಜನ್ ಜರ್ನಲಿಸ್ಟ್ ಇಲ್ಯಾಸ್ ಪಟೇಲ್, ವಿಜಯ ಟೈಮ್ಸ್ ಯಾದಗಿರಿ