- ಬೀದಿ ನಾಯಿಗಳಿಂದ ರೇಬಿಸ್ ಭೀತಿ ಹೆಚ್ಚುತ್ತಿದೆ ಎಂದು ಸುಪ್ರೀಂ ಕೋರ್ಟ್ ಗಂಭೀರ ಎಚ್ಚರಿಕೆ
- ರಾಜ್ಯದಲ್ಲಿ ನಾಯಿ ದಾಳಿಗಳ ಆತಂಕ: ಸುಪ್ರೀಂ ಕೋರ್ಟ್ ಕಠಿಣ ಆದೇಶ (Fear of dog attacks in the state)
- ನಾಯಿಗಳ ಸ್ಥಳಾಂತರ ಕ್ರಮ ಮಾನವೀಯತೆಯ ವಿರುದ್ಧ ಎಂದ ರಾಹುಲ್ ಗಾಂಧಿ
Bengaluru: ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿದ ಇತ್ತೀಚಿನ ಅಂಕಿಅಂಶಗಳು ಬೀದಿ ನಾಯಿಗಳ ಸಮಸ್ಯೆಯ ಗಂಭೀರತೆಯನ್ನು ಮತ್ತೊಮ್ಮೆ ಬೆಳಕಿಗೆ ತಂದಿವೆ.
ಈ ವರ್ಷ ಜನವರಿ 1ರಿಂದ ಆಗಸ್ಟ್ 10ರವರೆಗೆ ರಾಜ್ಯದಲ್ಲಿ 2,86,649 ಜನರಿಗೆ ನಾಯಿಗಳು ಕಚ್ಚಿರುವುದು ದಾಖಲಾಗಿದೆ. ಇದರಲ್ಲೇ 26 ಮಂದಿ ರೇಬಿಸ್‌ಗೆ ಬ*ಯಾಗಿರುವುದೂ ಆತಂಕಕಾರಿಯ ಸಂಗತಿ.
ಕೇವಲ ಕಳೆದೊಂದು ವಾರದಲ್ಲಿ ಮಾತ್ರ 5,562 ಜನರು ನಾಯಿಗಳ ಕಚ್ಚುವಿಕೆಗೆ ಒಳಗಾಗಿದ್ದಾರೆ ಎಂದು ಇಲಾಖೆಯ ವರದಿ ಹೇಳಿದೆ.
ಬೆಂಗಳೂರು ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಬೀದಿ ನಾಯಿಗಳ ಹಾವಳಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಕರ್ನಾಟಕದಲ್ಲಿಯೂ ಇತ್ತೀಚಿನ ದಿನಗಳಲ್ಲಿ ದಾಳಿ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ.

ಇದೇ ಸಂದರ್ಭದಲ್ಲಿ, ದೆಹಲಿ ಮತ್ತು ಎನ್‌ಸಿಆರ್ ಪ್ರದೇಶಗಳಲ್ಲಿ ನಾಯಿಗಳ ದಾಳಿಗಳನ್ನು ತಡೆಯಲು ಸುಪ್ರೀಂ ಕೋರ್ಟ್ ಮಹತ್ವದ ನಿರ್ದೇಶನ ಹೊರಡಿಸಿದೆ.
ನ್ಯಾಯಾಲಯವು ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೀದಿ ನಾಯಿಗಳನ್ನು ಹಿಡಿದು ಅವುಗಳನ್ನು ಆಶ್ರಯ ಕೇಂದ್ರಗಳಿಗೆ ಸ್ಥಳಾಂತರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದೆ.
ಮನುಷ್ಯರ ಮೇಲೆ ದಾಳಿ ಮಾಡಿದ ನಾಯಿಗಳನ್ನು ಮತ್ತೆ ಬೀದಿಯಲ್ಲಿ ಬಿಟ್ಟರೆ ಆಗಬಹುದಾದ ಅಪಾಯವನ್ನು ಮನನಮಾಡಿ, ಅವುಗಳನ್ನು ಶಾಶ್ವತವಾಗಿ ಬೀದಿಯಿಂದ ದೂರವಿರಿಸಲು ಕೋರ್ಟ್ ಆದೇಶಿಸಿದೆ.
ಅಲ್ಲದೆ, ಈ ಕಾರ್ಯಾಚರಣೆಗೆ ಯಾರಾದರೂ ಅಡ್ಡಿಪಡಿಸಿದರೆ, ಆ ವ್ಯಕ್ತಿ ಅಥವಾ ಸಂಸ್ಥೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸ್ಪಷ್ಟಪಡಿಸಿದೆ.
ಇನ್ನು ಈ ಕುರಿತಾಗಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ದೆಹಲಿ-ಎನ್‌ಸಿಆರ್‌ನಿಂದ ಎಲ್ಲಾ ಬೀದಿ ನಾಯಿಗಳನ್ನು ಸ್ಥಳಾಂತರಿಸುವ ಕ್ರಮವು, ದಶಕಗಳಿಂದ ಅನುಸರಿಸಲಾಗುತ್ತಿರುವ ಮಾನವೀಯ ಹಾಗೂ ವೈಜ್ಞಾನಿಕ ಆಧಾರದ ನೀತಿಯಿಂದ ಹಿಂದೆ ಸರಿದಂತಾಗಿದೆ ಎಂದು ಅವರು ಹೇಳಿದ್ದಾರೆ. ಮಾತನಾಡಲು ಸಾಧ್ಯವಿಲ್ಲದ ಈ ಪ್ರಾಣಿಗಳನ್ನು ‘ಅಳಿಸಬೇಕಾದ ಸಮಸ್ಯೆ’ ಎಂದು ನೋಡುವ ಬದಲು,
ಅವರಿಗೆ ಆಶ್ರಯ, ಸಂತಾನಹರಣ ಶಸ್ತ್ರಚಿಕಿತ್ಸೆ, ವ್ಯಾಕ್ಸಿನೇಷನ್ ಹಾಗೂ ಸಮುದಾಯ ಆರೈಕೆ ನೀಡುವುದು ಸುರಕ್ಷಿತ ಮತ್ತು ಕ್ರೌರ್ಯವಿಲ್ಲದ ಪರಿಹಾರವಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ನಾಯಿಗಳನ್ನು ಬಲವಂತವಾಗಿ ಬೀದಿಯಿಂದ ತೆಗೆದು ಹಾಕುವುದು ಪ್ರಾಣಿಗಳ ಮೇಲಿನ ಕ್ರೌರ್ಯವನ್ನು ಹೆಚ್ಚಿಸಬಹುದು ಮತ್ತು ಸಮಾಜದಲ್ಲಿ ಸಹಾನುಭೂತಿಯನ್ನು ಕಡಿಮೆ ಮಾಡಬಹುದು.
ಸಾರ್ವಜನಿಕರ ಸುರಕ್ಷತೆ ಮತ್ತು ಪ್ರಾಣಿ ಹಿತಾಸಕ್ತಿ ಒಂದೇ ಸಮಯದಲ್ಲಿ ಕಾಪಾಡಿಕೊಳ್ಳುವುದು ಸಾಧ್ಯವಾಗಬೇಕು ಎಂದು ಅವರು ಒತ್ತಿಹೇಳಿದ್ದಾರೆ.
ಬೀದಿ ನಾಯಿಗಳ ಸಮಸ್ಯೆಯ ಮೂಲ ಕಾರಣಗಳಲ್ಲಿ ನಿಯಂತ್ರಣವಿಲ್ಲದ ಸಂತಾನೋತ್ಪತ್ತಿ, ಆಹಾರ ಕೊರತೆ, ತ್ಯಾಜ್ಯ ನಿರ್ವಹಣೆಯ ದೌರ್ಬಲ್ಯ ಪ್ರಮುಖವಾಗಿದೆ.
ತಜ್ಞರ ಅಭಿಪ್ರಾಯದಲ್ಲಿ, ಸಂತಾನಹರಣ ಶಸ್ತ್ರಚಿಕಿತ್ಸೆ, ವ್ಯಾಕ್ಸಿನೇಷನ್, ಹಾಗೂ ನಾಯಿಗಳಿಗೆ ಆಶ್ರಯ ಒದಗಿಸುವ ಕ್ರಮಗಳು ದೀರ್ಘಕಾಲೀನ ಪರಿಹಾರ ನೀಡಬಹುದು.
ಇದನ್ನು ಓದಿ : ಬೆಂಗಳೂರಿನಲ್ಲಿ ಹೆಚ್ಚಾಯ್ತು ಬೀದಿನಾಯಿಗಳ ಕಡಿತ ಪ್ರಕರಣ, ಬೆಂಗಳೂರಿನಲ್ಲಿ 17 ಜನ ರೇಬಿಸ್‌ನಿಂದ ಬ*
ಜೊತೆಗೆ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು, ತ್ಯಾಜ್ಯ ನಿರ್ವಹಣೆಯನ್ನು ಸುಧಾರಿಸುವುದು ಹಾಗೂ ನಾಯಿಗಳಿಗೆ ಆಹಾರ ಮತ್ತು ನೀರಿನ ವ್ಯವಸ್ಥೆ ಮಾಡುವುದೂ ಅಗತ್ಯವಾಗಿದೆ ಎಂದು ಅವರು ಹೇಳಿದ್ದಾರೆ. (Fear of dog attacks in the state)