ಕಳೆದ ದಿನಗಳಿಂದ ದಕ್ಷ IPS ಅಧಿಕಾರಿ ರವಿ ಡಿ. ಚನ್ನಣ್ಣನವರ್ ಮೇಲೆ ಕೇಳಿ ಬಂದಿರುವ ಭ್ರಷ್ಟಾಚಾರದ ಆರೋಪ ಪ್ರಕರಣಗಳು ದೊಡ್ಡ ಸುದ್ದಿ ಮಾಡಿತ್ತು. ರವಿ ಡಿ. ಚನ್ನಣ್ಣನವರ್ ಕುರಿತು ಹಲವಾರು ರೀತಿಯಲ್ಲಿ ತನಿಖೆಗಳು ನಡೆಯಬೇಕು ಎಂದು ಕೆಲವರು ಆರೋಪ ವ್ಯಕ್ತಪಡಿಸಿದರೆ, ಮತ್ತೊಂದೆಡೆ ಇದೆಲ್ಲಾ ರವಿ ಡಿ. ಚನ್ನಣ್ನವರ ಮೇಲೆ ನಡೆಸುತ್ತಿರುವ ಪಿತೂರಿಗಳು, ಇದಕ್ಕೆ ತಲೆಕೊಡಬೇಡಿ ಎಂಬ ಮಾತುಗಳು ಕೇಳಿಬರುತ್ತಿವೆ. ಸದ್ಯ ಈ ಪ್ರಕರಣಕ್ಕೆ ಈಗ ಮತ್ತೊಂದು ಟ್ವಿಸ್ಟ್ ದೊರೆತಿದೆ.
ಪೊಲೀಸ್ ಇಲಾಖೆಯು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಮೂವರು ಪೊಲೀಸ್ ಅಧಿಕಾರಿಗಳು ಭ್ರಷ್ಟಾಚಾರ ಎಸಗಿದ್ದಾರೆ ಎನ್ನುವುದು ಪ್ರಾಥಮಿಕ ಸಾಕ್ಷ್ಯಾಧಾರಗಳ ಸಮೇತ ಸಾಬೀತಾಗಿ, ಇಲಾಖೆಯು ಈಗ ಆ ಮೂವರನ್ನು ಅಮಾನತು ಮಾಡಿದೆ. ಆ ಮೂವರ ಮೇಲೆಯೂ ಇಂದು ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಮತ್ತು KRS ಪಕ್ಷವು ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ ಅಡಿಯಲ್ಲಿ ರಾಜ್ಯ ಭ್ರಷ್ಟಾಚಾರ ನಿಗ್ರಹ ದಳದಲ್ಲಿ (ACB) ದೂರನ್ನು ದಾಖಲಿಸಿದೆ. ದಾಖಲಿಸಿರುವ ಪತ್ರದಲ್ಲಿ ಏನು ತಿಳಿಸಲಾಗಿದೆ ಎಂದು ತಿಳಿಯೋಣ ಕೆಳಗಿನ ಮಾಹಿತಿಯ ಅನುಸಾರ.
ಸಂಬಂಧಿಸಿದ ದಾಖಲೆಗಳನ್ನು ಕೂಡ ಸಲ್ಲಿಕೆಯಲ್ಲಿ ಲಗತ್ತಿಸಲಾಗಿದ್ದು, ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಅಧ್ಯಕ್ಷರಾದ ಮಲ್ಲಿಕಾರ್ಜುನಯ್ಯ ಬಿ.ಎಸ್ ಅವರು, ಸೋಮವಾರ ಫೆಬ್ರವರಿ 14 ರಂದು ದೂರು ಅರ್ಜಿಯನ್ನು ಸಲ್ಲಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿ ರವಿ ಡಿ. ಚೆನ್ನಣ್ಣನವರ್ ಲಂಚ ಪ್ರಕರಣದಲ್ಲಿ ಭಾಗಿಯಾದ ಅಧಿಕಾರಿಗಳ ಮೇಲೆ ಪ್ರಥಮ ವರ್ತಮಾನ ವರದಿಯನ್ನು ದಾಖಲಿಸುವ ಕುರಿತಾಗಿ ಎಂದು ಶುರುವಾದ ವಿಷಯದಲ್ಲಿ, ಮಾನ್ಯರೇ ಮೇಲ್ಕಂಡ ವಿಷಯ ಮತ್ತು ಉಲ್ಲೇಖವೆಂದರೆ, ಅನ್ವಯ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯು 24-01-2022 ರಂದು ನಿಮಗೆ ದೂರನ್ನು ನೀಡಿದ್ದು ಇಲ್ಲಿಯವರೆಗೂ ಪ್ರಥಮ ವರ್ತಮಾನ ವರದಿಯನ್ನು ದಾಖಲಿಸಿರುವುದಿಲ್ಲ.
ಸದರಿ ಪ್ರಕರಣದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಅವರ ಕೆಳಗಿನ ಅಧಿಕಾರಿಗಳು ಲಂಚ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಮೇಲ್ನೋಟಕ್ಕೆ ಸಾಬೀತಾಗಿರುವುದು (ಉಲ್ಲೇಖ 3) ರಂತೆ ಕೇಂದ್ರ ವಲಯದ ಐಜಿಪಿ ಅಮಾನತು ಆದೇಶದಲ್ಲಿ ಮತ್ತು ಅಮಾನತು ಆದೇಶಕ್ಕೆ ಪೂರಕವಾದ ಬೆಂಗಳೂರು ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯವರ ವರದಿಯಲ್ಲಿ ಸ್ಪಷ್ಟವಾಗಿದೆ. ಈ ಸಂಬಂಧ ಎಫ್ ಐಆರ್(FIR) ದಾಖಲಿಸಿ ತನಿಖೆ ಮಾಡಬೇಕೆಂದು ಭ್ರಷ್ಟಾಚಾರ ನಿಗ್ರಹ ದಳದ ಆದ್ಯ ಕರ್ತವ್ಯವಾಗಿದೆ. ಲಂಚ ಪ್ರಕರಣವನ್ನು ಬೇರೆ ಯಾವುದೇ ಸರ್ಕಾರಿ ಅಧಿಕಾರಿಗಳು ಆಗಲಿ ಅಥವಾ ಇನ್ನಿತರ ಸಂಸ್ಥೆಗಳ ವಿರುದ್ಧ ತನಿಖೆ ನಡೆಸಲು ಭ್ರಷ್ಟಾಚಾರ ನಿಗ್ರಹ ದಳವೇ ಸಕ್ಷಮ ಪ್ರಾಧಿಕಾರವಾಗಿದೆ. ಆದುದರಿಂದ ಈ ಹಿಂದೆ ತಾವು ನಮಗೆ ಮೌಖಿಕವಾಗಿ ತಿಳಿಸಿದಂತೆ ದಾಖಲೆಗಳನ್ನೇ ಪತ್ರದೊಂದಿಗೆ ನೀಡುತ್ತಿದ್ದೇವೆ. ತಾವುಗಳು ಹಿರಿಯ ಪೊಲೀಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ ಐ.ಪಿ.ಎಸ್ ಮೇಲಿನ ಲಂಚಾರೋಪ ಪ್ರಕರಣದಲ್ಲಿನ ಉಲ್ಲೇಖ ವರದಿಯಲ್ಲಿ ನಮೂದಿಸಿದ ಕೆಲ ಅಧಿಕಾರಿಗಳ ಮೇಲೆ ಭ್ರಷ್ಟಾಚಾರ ತಡೆ ಕಾಯ್ದೆ ಅಡಿಯಲ್ಲಿ ಎಫ್ಐಆರ್ ಅನ್ನು ದಾಖಲಿಸಿ ತನಿಖೆ ನಡೆಸಬೇಕು.
ಅದಲ್ಲದೆ ಕೇಂದ್ರ ವಲಯದ ಐಜಿಪಿ ಅವರ ಅಮಾನತು ಆದೇಶದಲ್ಲಿ ಕೇವಲ ಕರ್ತವ್ಯಲೋಪವೆಂದು ತಿಳಿಸಿರುತ್ತಾರೆ. ಆದರೆ ಯಾವುದೇ ಸರ್ಕಾರಿ ನೌಕರನು ಅಧಿಕಾರಿಯು ತನ್ನ ಕೆಲಸ ಅಧಿಕಾರಿಗಳು ನಿರ್ವಹಿಸಲು ಹಣ ಪಡೆಯುವುದು ಭ್ರಷ್ಟಾಚಾರವಾಗುತ್ತದೆ. ಅದರಂತೆ ಈ ಪ್ರಕರಣದಲ್ಲಿ ಮೇಲೆ ಹೇಳಿರುವ ಅಧಿಕಾರಿಗಳು ಲಂಚ ಪಡೆದಿರುವುದು ಸ್ಪಷ್ಟವಾಗಿರುತ್ತದೆ. 1. ಶೆಟ್ಟಿ ಶ್ರೀನಿವಾಸ್, ಸಿಪಿಐ, ವಿಜಯಪುರ ವೃತ್ತ, 2. ಶ್ರೀಮತಿ ಶುಭಾ ಎಸ್ಸೈ, ಹೊಸಹಳ್ಳಿ ಪೊಲೀಸ್ ಠಾಣೆ, ಬೆಂಗಳೂರು ಜಿಲ್ಲೆ ಹಾಗೂ ಶ್ರೀಮತಿ ಕೆ.ಜಿ ಅನಿತಾ, ಎ.ಎಸ್.ಐ ಹೆಬ್ಬಗೋಡಿ ಪೊಲೀಸ್ ಠಾಣೆ( ಈ ಹಿಂದೆ ಡಿಸಿಐಬಿ, ಜಿಲ್ಲಾ ಪೊಲೀಸ್ ಕಚೇರಿ, ಬೆಂಗಳೂರು) ಇವರುಗಳ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕೆಂದು ಈ ಮೂಲಕ ಮನವಿ ಮಾಡುತ್ತೇವೆ.
ಈ ಪ್ರಕರಣ ಬಹಳ ಗಂಭೀರ ಪ್ರಕರಣವಾಗಿದ್ದು, ರಾಜ್ಯದ ಪೊಲೀಸ್ ವ್ಯವಸ್ಥೆ ಹದಗೆಟ್ಟಿರುವ ಸೂಚನೆಯಾಗಿದ್ದು, ಇಂತಹ ಪ್ರಕರಣಗಳಲ್ಲಿ ತಪ್ಪಿತಸ್ಥರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳದಿದ್ದರೆ, ಜನರಿಗೆ ಪೊಲೀಸ್ ವ್ಯವಸ್ಥೆ ಬಗ್ಗೆ ಎಳ್ಳಷ್ಟೂ ನಂಬಿಕೆ ಉಳಿಯುವುದಿಲ್ಲ ಆದ್ದರಿಂದ ತಾವು ಈ ವಿಚಾರವಾಗಿ ಸೂಕ್ತ ಕ್ರಮ ಕೈಗೊಳ್ಳುವಿರಿ ಎಂದು ನಂಬಿದ್ದೇವೆ ತಮ್ಮ ವಿಶ್ವಾಸಿ ಮಲ್ಲಿಕಾರ್ಜುನಯ್ಯ ಎಂದು ಬರೆದು ಸಲ್ಲಿಸಿದ್ದಾರೆ.