ಮೈಸೂರು,ಏ,04: ಬಹು ನಿರೀಕ್ಷಿತ ಅಂತಾರಾಷ್ಟ್ರೀಯ ಗುಣ ಮಟ್ಟದ ಚಿತ್ರನಗರಿಯನ್ನು ಮೈಸೂರಿನಲ್ಲಿ ನಿರ್ಮಿಸಲು ಸರ್ಕಾರ ಆದೇಶಿಸಿರುವ ಹಿನ್ನೆಲೆಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಡಾ.ಪಿ.ಎಸ್. ಹರ್ಷ ಅವರು ಇಮ್ಮಾವು ಸಮೀಪ ಗುರುತಿಸಲಾಗಿರುವ ಉದ್ದೇಶಿತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಚಿತ್ರನಗರಿ ನಿರ್ಮಾಣಕ್ಕೆ ಜಾಗ ಅತ್ಯಂತ ಸೂಕ್ತವಾಗಿದೆ. ನೀರು ಹಾಗೂ ಇತರ ಮೂಲ ಸೌಕರ್ಯ ಒದಗಿಸಲು ಕ್ರಿಯಾ ಯೋಜನೆ ಸಿದ್ದಪಡಿಸಿಕೊಳ್ಳು ವಂತೆ ಕೆಐಎಡಿಬಿ ಅಧಿಕಾರಿಗಳಿಗೆ ವಾರ್ತಾ ಇಲಾಖೆ ಆಯುಕ್ತರು ತಿಳಿಸಿದರು.
ಉದ್ದೇಶಿತ ಯೋಜನೆಗೆ ಗುರುತಿಸಿ, ಮಿಸಲಿರಿಸಲಾಗಿ ರುವ 110 ಎಕರೆ ಸರ್ಕಾರಿ ಜಾಗವನ್ನು ಚಿತ್ರನಗರಿ ನಿರ್ಮಾಣ ಉದ್ದೇಶಕ್ಕಾಗಿ ಕೆಐಎಡಿಬಿ ಮೂಲಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಅಧಿಕೃತ ವಾಗಿ ಹಸ್ತಾಂತರ ಮಾಡಿಕೊಳ್ಳ ಬೇಕಿದೆ ಎಂದು ನಂಜನಗೂಡು ತಹಶೀಲ್ದಾರ್ ಮೋಹನ್ ಕುಮಾರಿ ಅವರು ಮಾಹಿತಿ ನೀಡಿದರು.
ಚಿತ್ರನಗರಿ ನಿರ್ಮಾಣದ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ ಏಪ್ರಿಲ್ 7 ರಂದು ಬೆಂಗಳೂರಿನಲ್ಲಿ ಸಭೆ ನಡೆಸಲಿದ್ದು, ಸದರಿ ಸಭೆಯಲ್ಲಿ ಪಾಲ್ಗೊಂಡು ಸ್ಥಳ ಹಸ್ತಾಂತರ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ಒದಗಿಸುವಂತೆ ಆಯುಕ್ತರು ತಹಶಿಲ್ದಾರ್ ಅವರಿಗೆ ತಿಳಿಸಿದರು.
ಇದೊಂದು ಬೃಹತ್ ಯೋಜನೆ ಯಾಗಿದ್ದು, ಚಿತ್ರನಗರಿ ಸ್ಥಾಪನೆಯಾದರೆ ಪ್ರತಿದಿನ ಕಲಾವಿದರು, ತಂತ್ರಜ್ಞರು, ಕಾರ್ಮಿಕರು ಸೇರಿದಂತೆ ಸುಮಾರು 5000 ಮಂದಿ ಕೆಲಸ ಮಾಡಬಹುದು. ಇದೊಂದು ಆಕರ್ಷಕ ಪ್ರವಾಸಿ ತಾಣವಾಗಲಿದೆ. ಈ ನಿಟ್ಟಿನಲ್ಲಿ ಎಲ್ಲಾ ಅಂಶಗಳನ್ನು ಗಮನದಲ್ಲಿರಿಸಿಕೊಂಡು ವಿಸ್ತೃತ ಯೋಜನೆ ರೂಪಿಸಿ ವಿವಿಧ ಇಲಾಖೆಗಳ ಸಹಕಾರವನ್ನು ಪಡೆದು ಕಾಮಗಾರಿ ಹಾಗೂ ಕಾರ್ಯಕ್ರಮಗಳನ್ನುಅನುಷ್ಠಾನ ಮಾಡಬೇಕಾಗುತ್ತದೆ ಎಂದು ಡಾ.ಪಿ.ಎಸ್ ಹರ್ಷ ತಿಳಿಸಿದರು.