ಗಡ್ಡವಿರುವ(Beard) ಪುರುಷರನ್ನು ಅಪಹಾಸ್ಯ ಮಾಡಿದ ಹಳೆಯ ವೀಡಿಯೊ ಕುರಿತು ಹಾಸ್ಯ ನಟಿ(Comedian) ಭಾರತಿ ಸಿಂಗ್(Bharathi Singh) ವಿರುದ್ಧ ಎಫ್‌ಐಆರ್(FIR) ದಾಖಲಿಸಲಾಗಿದೆ.
ಸೋಮವಾರ ರಾತ್ರಿ ಪಂಜಾಬ್‌ನ(Punjab) ಅಮೃತಸರದಲ್ಲಿ(Amritsar) ಶಿರೋಮಣಿ ಗುರುದ್ವಾರ ಪರ್ಬಂಧಕ್ ಸಮಿತಿಯ ದೂರಿನ ಮೇರೆಗೆ ಎಫ್‌ಐಆರ್ ದಾಖಲಾಗಿದ್ದು, ಆಕೆ ಸಿಖ್ಖರ(Sikh) ಭಾವನೆಗಳಿಗೆ ಧಕ್ಕೆ ತಂದಿದ್ದಾಳೆ ಎಂದು ಆರೋಪಿಸಿದ್ದಾರೆ. ಭಾರತಿ ಸಿಂಗ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 295-ಎ (ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು, ಧಾರ್ಮಿಕ ಭಾವನೆಗಳನ್ನು ಆಕ್ರೋಶಗೊಳಿಸುವ ಉದ್ದೇಶ) ಅಡಿಯಲ್ಲಿ ಆರೋಪ ಹೊರಿಸಲಾಗಿದೆ.
ವೈರಲ್ ಆದ ಹಳೆಯ ವೀಡಿಯೊದಲ್ಲಿ, ಭಾರತಿ ಸಿಂಗ್, “ಗಡ್ಡ-ಮೀಸೆಯಿಂದ ಅನೇಕ ಪ್ರಯೋಜನಗಳಿವೆ. ಹಾಲು ಕುಡಿಯಿರಿ ಮತ್ತು ನಿಮ್ಮ ಗಡ್ಡವನ್ನು ನಿಮ್ಮ ಬಾಯಿಗೆ ಹಾಕಿಕೊಳ್ಳಿ, ಅದು ಸೇವಿಯಾನ(ಖಾದ್ಯ) ಸವಿದಷ್ಟೇ ರುಚಿಕರವಾಗಿರುತ್ತದೆ ಎಂದು ಹಾಸ್ಯ ಮಾಡಿದ್ದರು. ಪುರುಷರ ಗಡ್ಡದಲ್ಲಿ ಪರೋಪಜೀವಿಗಳಿರುವ ಬಗ್ಗೆಯೂ ಹಾಸ್ಯಮಯವಾಗಿ ಮಾತನಾಡಿದ್ದರು, ಕ್ಲಿಪ್ ವೈರಲ್ ಆದ ಬೆನ್ನಲ್ಲೇ, ಸಿಖ್ ಪುರುಷರು ತಮ್ಮ ಧಾರ್ಮಿಕ ನಂಬಿಕೆಯ ಭಾಗವಾಗಿ ಬೆಳೆಸುವ ಗಡ್ಡವನ್ನು ಭಾರತಿ ಸಿಂಗ್ ಅಗೌರವಿಸಿದ್ದಾರೆ ಎಂದು ಆರೋಪದಲ್ಲಿ ಉಲ್ಲೇಖಿಸಿದ್ದಾರೆ.
ಸೋಮವಾರ ಅಮೃತಸರದಲ್ಲಿ ಭಾರತಿ ಸಿಂಗ್ ವಿರುದ್ಧ ಸಿಖ್ ಗುಂಪುಗಳು ಪ್ರತಿಭಟನೆ ನಡೆಸಿದ್ದವು. ಸೋಮವಾರ ಮಧ್ಯಾಹ್ನ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ಭಾರತಿ ಸಿಂಗ್ ಅವರು ಕೂಡಲೇ ವೀಡಿಯೋ ಮೂಲಕ ಕ್ಷಮೆಯಾಚಿಸಿದರು ಮತ್ತು ಯಾವುದೇ ಸಮುದಾಯವನ್ನು ನೋಯಿಸುವುದು ಅವರ ಉದ್ದೇಶವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕಳೆದ 3 ರಿಂದ 4 ದಿನಗಳಿಂದ ನಾನು ‘ದಾಡಿ ಮೂಚ್’ ಅನ್ನು ಗೇಲಿ ಮಾಡಿದ್ದೇನೆ ಎಂದು ಹೇಳುವ ವೀಡಿಯೊವೊಂದು ವೈರಲ್ ಆಗುತ್ತಿದೆ. ನಾನು ವೀಡಿಯೊವನ್ನು ಪದೇ ಪದೇ ನೋಡಿದ್ದೇನೆ ಮತ್ತು ನಾನು ಯಾರ ವಿರುದ್ಧವಾಗಿ ಏನನ್ನೂ ಹೇಳದ ಕಾರಣ ಅದನ್ನು ವೀಕ್ಷಿಸಲು ಜನರಲ್ಲಿ ವಿನಂತಿಸುತ್ತೇನೆ.
ಯಾವುದೇ ಧರ್ಮ ಅಥವಾ ಜಾತಿ ಕುರಿತಾಗಿ ನಾನು ಹೇಳಿಕೆ ಕೊಟ್ಟಿಲ್ಲ, ಹಾಸ್ಯ ಮಾಡಿಲ್ಲ. ನಾನು ಯಾವುದೇ ಪಂಜಾಬಿಯನ್ನು ಅಪಹಾಸ್ಯ ಮಾಡಿಲ್ಲ. ನಾನು ನನ್ನ ಸ್ನೇಹಿತನೊಂದಿಗೆ ಕಾಮಿಡಿ ಮಾಡುತ್ತಿದ್ದೆ ಅಷ್ಟೇ! ಆದರೆ ಯಾವುದೇ ವಿಭಾಗದವರ ಭಾವನೆಗಳಿಗೆ ನೋವುಂಟು ಮಾಡಿದ್ದರೆ, ನಾನು ಕೈ ಜೋಡಿಸಿ ಕ್ಷಮೆಯಾಚಿಸುತ್ತೇನೆ. ನಾನು ಸ್ವತಃ ಪಂಜಾಬಿ, ನಾನು ಅಮೃತಸರದಲ್ಲಿ ಹುಟ್ಟಿದ್ದೇನೆ ಮತ್ತು ನಾನು ಅದನ್ನು ಯಾವಾಗಲೂ ಗೌರವಿಸುತ್ತೇನೆ. ನಾನೊಬ್ಬಳು ಹೆಮ್ಮೆಯ ಪಂಜಾಬಿ ಎಂದು ಹೇಳಿ ಕ್ಷಮೆಯಾಚಿಸಿದ್ದಾರೆ.