- ಜೈಪುರದ ಎಸ್‌ಎಂಎಸ್ ಆಸ್ಪತ್ರೆಯಲ್ಲಿ ಬೆಂಕಿ ಅವಘಡ
- ಆಸ್ಪತ್ರೆ ಆಡಳಿತದ ನಿರ್ಲಕ್ಷ್ಯ ವಿರುದ್ಧ ಸಾರ್ವಜನಿಕ ಆಕ್ರೋಶ
- ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆದೇಶ
Jaipur: ರಾಜಸ್ಥಾನದ ಅತಿದೊಡ್ಡ ಸರ್ಕಾರಿ ಆಸ್ಪತ್ರೆ ಸವಾಯಿ ಮಾನ್ ಸಿಂಗ್ (SMS) ಆಸ್ಪತ್ರೆಯ ಟ್ರಾಮಾ ಸೆಂಟರ್‌ನಲ್ಲಿ ಭಾನುವಾರ ತಡರಾತ್ರಿ ಸಂಭವಿಸಿದ ಭೀಕರ ಬೆಂಕಿ ದುರಂತದಲ್ಲಿ
ಎಂಟು ಜನ ರೋಗಿಗಳು ಸಾ*ನ್ನಪ್ಪಿದ್ದಾರೆ. ರಾತ್ರಿ ಸುಮಾರು 11.20ರ ಸಮಯದಲ್ಲಿ ಐಸಿಯು ವಿಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮೂವರು ಮಹಿಳೆಯರನ್ನು ಒಳಗೊಂಡಂತೆ ಎಂಟು ಮಂದಿ
ರೋಗಿಗಳು ಜೀವಂತವಾಗಿ ದಹನಗೊಂಡಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಆಸ್ಪತ್ರೆ ಮೂಲಗಳ ಪ್ರಕಾರ, ಶಾರ್ಟ್ ಸರ್ಕ್ಯೂಟ್‌ನಿಂದ(Short circuit) ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇನ್ನು ಅಲ್ಲಿಯ ಐಸಿಯು(ICU) ವಾರ್ಡ್‌ನ ಹತ್ತಿರದ ಸ್ಟೋರ್ ರೂಮ್‌ನಲ್ಲಿ ವೈದ್ಯಕೀಯ ಉಪಕರಣಗಳು, ಕಾಗದದ ದಾಖಲೆಗಳು ಹಾಗೂ ರಕ್ತದ ಮಾದರಿಗಳನ್ನು ಸಂಗ್ರಹಿಸಿದ್ದರಿಂದ ಬೆಂಕಿ ತೀವ್ರವಾಗಿ ಹರಡಿದೆ.

ಕೆಲವೇ ನಿಮಿಷಗಳಲ್ಲಿ ದಟ್ಟ ಹೊಗೆ ಇಡೀ ವಾರ್ಡ್ ಆವರಿಸಿ, ರೋಗಿಗಳನ್ನು ರಕ್ಷಿಸಲು ಸಿಬ್ಬಂದಿ ತೀವ್ರ ಹೋರಾಟ ನಡೆಸಿದ್ದಾರೆ. ಈ ಸಮಯದಲ್ಲಿ ಒಟ್ಟು 18 ರೋಗಿಗಳು ಐಸಿಯು ಮತ್ತು ಸೆಮಿ-ಐಸಿಯು ವಿಭಾಗಗಳಲ್ಲಿ
ದಾಖಲಾಗಿದ್ದರು. ಅವರಲ್ಲಿ 11 ಮಂದಿ ಬೆಂಕಿ ಕಾಣಿಸಿಕೊಂಡ ಭಾಗದಲ್ಲಿದ್ದರು. ಅಗ್ನಿಶಾಮಕ ಸಿಬ್ಬಂದಿ ಎರಡು ಗಂಟೆಗಳ ಶ್ರಮದ ನಂತರ ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಯಶಸ್ವಿಯಾದರೂ,
ಆ ವೇಳೆಗೆ ಎಂಟು ಮಂದಿ ಜೀವ ಕಳೆದುಕೊಂಡಿದ್ದರು. ಮೂವರು ರೋಗಿಗಳ ಸ್ಥಿತಿ ಇನ್ನೂ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಇನ್ನು ಬೆಂಕಿ ಅವಘಡದ ಬಳಿಕ ಆಸ್ಪತ್ರೆಯ ಭದ್ರತಾ ವ್ಯವಸ್ಥೆ ಕುರಿತ ಗಂಭೀರ ಆರೋಪಗಳು ಕೇಳಿಬಂದಿವೆ. ಪ್ರಾಥಮಿಕ ಎಚ್ಚರಿಕೆ ವ್ಯವಸ್ಥೆ ಸಮಯಕ್ಕೆ ಕಾರ್ಯನಿರ್ವಹಿಸದಿರುವುದು,
ಆಮ್ಲಜನಕ ಮಾರ್ಗವನ್ನು ನಿಲ್ಲಿಸಲು ವಿಳಂಬವಾಗಿರುವುದು ಹಾಗೂ ಅಗ್ನಿಶಾಮಕ ಉಪಕರಣಗಳ ಕೊರತೆಯು ದುರ್ಘಟನೆಯನ್ನು ಮತ್ತಷ್ಟು ಗಂಭೀರಗೊಳಿಸಿದೆ ಎಂದು ಸಿಬ್ಬಂದಿ ದೂರಿದ್ದಾರೆ.
ಸಂತ್ರಸ್ತರ ಕುಟುಂಬಗಳು ಆಸ್ಪತ್ರೆಯ ಎದುರು ಧರಣಿ ನಡೆಸಿ, ಆಡಳಿತ ಮಂಡಳಿಯ ನಿರ್ಲಕ್ಷ್ಯವನ್ನು ಖಂಡಿಸಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ರಾಜಸ್ಥಾನ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ(Bhajan Lal Sharma)
ತಡರಾತ್ರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಗಾಯಾಳುಗಳಿಗೆ ಅಗತ್ಯ ವೈದ್ಯಕೀಯ ನೆರವು ಒದಗಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.
ಇದು ಅತ್ಯಂತ ದುಃಖಕರ ಮತ್ತು ಅಸಹನೀಯ ಘಟನೆ. ನಿರ್ಲಕ್ಷ್ಯ ತೋರಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ, ಎಂದು ಅವರು ತಿಳಿಸಿದ್ದಾರೆ.
ಇದನ್ನು ಓದಿ : ಹಲವೆಡೆ ಮಕ್ಕಳ ಸರಣಿ ಸಾವು: ಕರ್ನಾಟಕದಲ್ಲೂ ಕೆಮ್ಮಿನ ಸಿರಪ್ ನಿಷೇಧಿಸಿದ ಆರೋಗ್ಯ ಇಲಾಖೆ
ಈ ಕುರಿತಾಗಿ ಕೂಲಂಕುಷವಾಗಿ ಪರಿಶೀಲಿಸಿ ಉನ್ನತ ಮಟ್ಟದ ತನಿಖಾ ಸಮಿತಿ ರಚಿಸಲು ಆದೇಶಿಸಿದ್ದಾರೆ.