ಬೆಂಗಳೂರು ಸೆ 21 : ಅಪಾರ್ಟ್ ಮೆಂಟ್‌ವೊಂದರಲ್ಲಿ ಮಧ್ಯಾಹ್ನ 3.30ರ ವೇಳೆಗೆ ಸಿಲಿಂಡರ್ ಸೋರಿಕೆಯಾಗಿ ನೋಡನೋಡುತ್ತಿದ್ದಂತೆ ಬೆಂಕಿ ಹೊತ್ತುಕೊಂಡಿದ್ದು, ಮೂವರು ಸಜೀವ ದಹನವಾಗಿರಯವ ಘಟನೆ ದೇವರಚಿಕ್ಕನಹಳ್ಳಿಯಲ್ಲಿ ಇರುವ ಆಶ್ರಿತ್ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ. ಸಿಲಿಂಡರ್ ಸೋರಿಕೆಯಿಂದ ಬೆಂಕಿ ಅವಘಡ ಸಂಭವಿಸಿದ್ದು, ಒಂದು ಫ್ಲೋರ್ ನಿಂದ ಮೂರು ಫ್ಲೋರ್ ಗೆ ಬೆಂಕಿ ವ್ಯಾಪಿಸಿದೆ. ಫ್ಲ್ಯಾಟ್ ನಲ್ಲಿದ್ದ ಮೂವರು ಮೃತಪಟ್ಟಿದ್ದು, ತಮ್ಮ ಪ್ರಾಣ ಉಳಿಸುವಂತೆ ಮಹಿಳೆ ಅಂಗಲಾಚುತ್ತಿದ್ದರೂ ಕೂಡ ಕೆಲಕ್ಷಣದಲ್ಲೇ ಬೆಂಕಿಯ ಕೆನ್ನಾಲಿಗೆಗೆ ಮಹಿಳೆಯು ಸಜೀವ ದಹನವಾಗಿದ್ದಾರೆ. ಜೊತೆಗೆ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹಾಗೆ ಮೂವರು ಹೊರಗೆ ಓಡಿ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ.
ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿದ್ದು, ಬೆಂಕಿ ನಂದಿಸುವುದಕ್ಕೆ ಹರಸಾಹಸ ಪಡುತ್ತಿದ್ದಾರೆ. ಸದ್ಯ ಮೊದಲಿಗೆ ಬೆಂಕಿ ಕಾಣಿಸಿಕೊಂಡ ಮೂರನೇ ಮಹಡಿಯಲ್ಲಿ ಬೆಂಕಿ ನಿಯಂತ್ರಣಕ್ಕೆ ಬಂದಿದೆ. ಆದರೆ ಮೇಲಿನ ಎರಡು ಮಹಡಿಗಳಿಗೆ ಬೆಂಕಿ ವ್ಯಾಪಿಸಿದೆ. ಸ್ಥಳಕ್ಕೆ ಬೇಗೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.