ಕಾಶ್ಮೀರ, ಎ. 02: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಶುಕ್ರವಾರ ಬೆಳಗ್ಗೆ ಭದ್ರತಾ ಪಡೆಗಳು ಮತ್ತು ಉಗ್ರಗಾಮಿಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ಗುಂಡಿನ ಚಕಮಕಿಯಿಂದ ಎರಡರಿಂದ ಮೂವರು ಉಗ್ರರು ಮೃತಪಟ್ಟಿದ್ದಾರೆ ಎಂದು ಮಾಹಿತಿ ಇದೆ. ನಿನ್ನೆ ರಾತ್ರಿ ದೊರಕಿದ ಮಾಹಿತಿಯನ್ನು ಆಧಾರವಾಗಿಟ್ಟುಕೊಂಡು ಇಂದು ಬೆಳ್ಳಂಬೆಳಗ್ಗೆ ಭದ್ರತಾ ಪಡೆಗಳು ಕಾರ್ಯಾಚರಣೆಗೆ ಇಳಿದವು. ಪುಲ್ವಾಮಾ ಜಿಲ್ಲೆಯ ಕಕಾಪೊರಾ ಪ್ರದೇಶದ ಘಾಟ್ ಮೊಹಲ್ಲಾ ಎಂಬ ಸ್ಥಳದ ಬಳಿ ಈ ಗುಂಡಿನ ಚಕಮಕಿ ನಡೆದಿದೆ ಎಂದು ಆಂಗ್ಲ ಸುದ್ದಿ ಜಾಲತಾಣ ಡಿಎನ್ಎ ವರದಿ ಮಾಡಿದೆ.
2019ರ ಪುಲ್ವಾಮಾ ದಾಳಿ ಪಾಕಿಸ್ತಾನದ ಉಗ್ರ 2019ರ ಫೆಬ್ರವರಿ 14ರಂದು ಜಮ್ಮು-ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದ. ಹೆದ್ದಾರಿ ಮೇಲೆ ಸಾಗುತ್ತಿದ್ದ ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ವಾಹನಗಳನ್ನು ಗುರಿಯಾಗಿಸಿ ಉಗ್ರ ದಾಳಿ ಮಾಡಿದ್ದ. ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆಯ ಈ ದಾಳಿಯಲ್ಲಿ 40 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದರು. ಬಳಿಕ, ಉಗ್ರರ ಈ ದುಷ್ಕೃತ್ಯಕ್ಕೆ ತಿರುಗೇಟು ನೀಡಿದ ಭಾರತ, ಫೆ. 26ರಂದು ಪಾಕ್ ಆಕ್ರಮಿತ ಕಾಶ್ಮೀರ ಭಾಗಕ್ಕೆ ತೆರಳಿ ಉಗ್ರರ ಶಿಬಿರಗಳನ್ನು ಹೇಳಹೆಸರಿಲ್ಲದಂತೆ ಮಾಡಿತ್ತು. ಭಾರತೀಯ ವಾಯುಪಡೆ ಮತ್ತು ಭೂಸೇನೆಯ ಜಂಟಿ ಕಾರ್ಯಾಚರಣೆಯಲ್ಲಿ ಉಗ್ರರ ಅಟ್ಟಹಾಸವನ್ನು ಹಿಮ್ಮೆಟ್ಟಿಸುವಂತೆ ಶಿಬಿರಗಳನ್ನು ಧ್ವಂಸಗೊಳಿಸಿತ್ತು. ಇಂದಿಗೆ ಪುಲ್ವಾಮ ಘಟನೆ ನಡೆದು 2 ವರ್ಷಗಳಾಗುತ್ತಿವೆ.