ಚೆನ್ನೈ, ಫೆ. 09: ಪ್ರವಾಸಿ ಇಂಗ್ಲೆಂಡ್ ತಂಡದ ಬೌಲಿಂಗ್ ದಾಳಿಗೆ ತತ್ತರಿಸಿದ ಟೀಂ ಇಂಡಿಯಾ, ಪ್ರಥಮ ಟೆಸ್ಟ್‌ನಲ್ಲಿ 227 ರನ್‌ಗಳ ಹೀನಾಯ ಸೋಲು ಕಂಡಿದೆ.
ಇಲ್ಲಿನ ಎಂ.ಎ.ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಇಂಗ್ಲೆಂಡ್ ಪಂದ್ಯದ ಮೇಲೆ ಸಂಪೂರ್ಣ ಪ್ರಾಬಲ್ಯ ಸಾಧಿಸಿತ್ತು. ಅತಿಥೇಯರಿಗೆ 420 ರನ್‌ಗಳ ಬೃಹತ್ ಸವಾಲು ನೀಡಿದ ಇಂಗ್ಲೆಂಡ್, ಅಂತಿಮ ದಿನದಾಟದ ಆರಂಭದಿಂದಲೇ ಭಾರತೀಯ ಬ್ಯಾಟ್ಸ್‌ಮನ್‌ಗಳ ಮೇಲೆ ನಿಯಂತ್ರಣ ಸಾಧಿಸಿತು. ನಾಯಕ ವಿರಾಟ್ ಕೊಹ್ಲಿ(78) ಹಾಗೂ ಆರಂಭಿಕ ಆಟಗಾರ ಶುಭ್ಮನ್ ಗಿಲ್(50) ಬಿಟ್ಟರೆ ಉಳಿದೆಲ್ಲ ಬ್ಯಾಟ್ಸ್‌ಮನ್‌ಗಳು ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಪರಿಣಾಮ 192 ರನ್‌ಗಳಿಗೆ ಟೀಂ ಇಂಡಿಯಾವನ್ನು ಕಟ್ಟಿಹಾಕಿದ ಜೋ ರೂಟ್ ಪಡೆ ಗೆಲುವಿನ ನಗೆಬೀರಿತು. ಆ ಮೂಲಕ ನಾಲ್ಕು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.
ನಾಲ್ಕನೇ ದಿನದಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 39 ರನ್‌ಗಳಿಸಿದ್ದ ಭಾರತದ, ಅಂತಿಮ ದಿನದಂದು ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು. ದಿನದಾಟದ ಆರಂಭದಲ್ಲೇ ಪೂಜಾರ(15) ವಿಕೆಟ್ ಕಳೆದುಕೊಂಡ ಭಾರತ, ಆರಂಭಿಕ ಆಘಾತ ಅನುಭವಿಸಿತು.
ಇದಾದ ನಂತರ ಜೊತೆಯಾದ ಗಿಲ್ ಹಾಗೂ ಕೊಹ್ಲಿ, 4ನೇ ವಿಕೆಟ್‌ಗೆ 34 ರನ್‌ಗಳಿಸಿ ಸ್ವಲ್ಪ ಮಟ್ಟಿಗೆ ಚೇತರಿಕೆ ನೀಡಿದರು. ಈ ಹಂತದಲ್ಲಿ ಬೌಲಿಂಗ್ ದಾಳಿಗಿಳಿದ ಜೇಮ್ಸ್ ಆಂಡರ್ಸನ್ ಒಂದೇ ಓವರ್‌ನಲ್ಲಿ ಉತ್ತಮವಾಗಿ ಆಡುತ್ತಿದ್ದ ಗಿಲ್ ಹಾಗೂ ಅಜಿಂಕ್ಯಾ ರಹಾನೆ(0) ವಿಕೆಟ್ ಪಡೆಯುವ ಮೂಲಕ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಬಳಿಕ ಕಣಕ್ಕಿಳಿದ ರಿಷಭ್ ಪಂತ್(11), ವಾಷಿಂಗ್ಟನ್ ಸುಂದರ್(0), ಆರ್.ಅಶ್ವಿನ್(9) ಕೂಡ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು.
ಒಂದೆಡೆ ವಿಕೆಟ್ ಬೀಳುತ್ತಿದ್ದರು ನೆಲಕಚ್ಚಿ ಆಡಿದ ವಿರಾಟ್ ಕೊಹ್ಲಿ ಅರ್ಧಶತಕದ ಗಡಿದಾಟಿದರು. ಆದರೆ ಕೊನೆಯಲ್ಲಿ ಬ್ಯಾಟಿಂಗ್ ಮಾಡಲು ಬಂದ ಬೌಲರ್‌ಗಳು ನಾಯಕನಿಗೆ ಸಾಥ್ ನೀಡದ ಪರಿಣಾಮ ಭಾರತ, 192 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ಸೋಲೊಪ್ಪಿಕೊಂಡಿತು. ಇಂಗ್ಲೆಂಡ್ ಪರ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ ದ್ವಿಶತಕ ಬಾರಿಸಿ ಮಿಂಚಿದ ನಾಯಕ ಜೋ ರೂಟ್, ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಆ ಮೂಲಕ ತಮ್ಮ ಟೆಸ್ಟ್ ವೃತ್ತಿ ಜೀವನದ 100ನೇ ಪಂದ್ಯವನ್ನು ಅವಿಸ್ಮರಣೀಯವಾಗಿಸಿಕೊಂಡರು.