ಚೆನ್ನೈ, ಫೆ. 05: ನಾಯಕ ಜೋ ರೂಟ್(ಅಜೇಯ 128) ಭರ್ಜರಿ ಶತಕ ಹಾಗೂ ಡೊಮಿನಿಕ್ ಸಿಬ್ಲಿ(87) ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಭಾರತ ವಿರುದ್ಧದ ಪ್ರಥಮ ಟೆಸ್ಟ್ನಲ್ಲಿ ಪ್ರವಾಸಿ ಇಂಗ್ಲೆಂಡ್ ಮೊದಲ ದಿನದ ಗೌರವ ತನ್ನದಾಗಿಸಿಕೊಂಡಿದೆ.
ಇಲ್ಲಿನ ಎಂ.ಎ.ಚಿದಂಬರಂ ಸ್ಟೇಡಿಯಂನಲ್ಲಿ ಶುಕ್ರವಾರದಿಂದ ಆರಂಭಗೊಂಡ ಪ್ರಥಮ ಟೆಸ್ಟ್ನ ಮೊದಲ ದಿನದಾಟದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್, ಜೋ ರೂಟ್ ಹಾಗೂ ಡೊಮಿನಿಕ್ ಸಿಬ್ಲಿ ಅವರ ಅದ್ಭುತ ದ್ವಿಶತಕದ ಜೊತೆಯಾಟದಿಂದ ಮೊದಲ ದಿನದಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 263 ರನ್ಗಳಿಸಿದೆ. ಆ ಮೂಲಕ ಮೊದಲ ದಿನದಾಟದಲ್ಲಿ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ಪರ ರೋಯ್ ಬರ್ನ್ಸ್(33) ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರೆ. ಮೊದಲ ಕ್ರಮಾಂಕದಲ್ಲಿ ಬಂದ ಡೆನಿಯಲ್ ಲಾರೆನ್ಸ್(0) ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಪರಿಣಾಮ ಇಂಗ್ಲೆಂಡ್ 63 ರನ್ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಬಳಿಕ ಜೊತೆಯಾದ ಜೋ ರೂಟ್(ಅಜೇಯ 128) ಹಾಗೂ ಡೊಮಿನಿಕ್ ಸಿಬ್ಲಿ(87) ಟೀಂ ಇಂಡಿಯಾ ಬೌಲರ್ಗಳ ಬೆವರಿಳಿಸಿದರು. ಆರಂಭದಿಂದಲೂ ನಿಧಾನ ಗತಿಯಲ್ಲಿ ಇನ್ನಿಂಗ್ಸ್ ಕಟ್ಟಿದ ಈ ಜೋಡಿ, ಭಾರತೀಯ ಬೌಲರ್ಗಳ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದರು. ಪರಿಣಾಮ 3ನೇ ವಿಕೆಟ್ಗೆ 200 ರನ್ಗಳ ಜೊತೆಯಾಟವಾಡಿದ ಈ ಜೋಡಿ, ಮೊದಲ ದಿನದಾಟದಲ್ಲಿ ಸಂಪೂರ್ಣ ಹಿಡಿತ ಸಾಧಿಸಲು ಕಾರಣರಾದರು. ಇತ್ತೀಚಿನ ಶ್ರೀಲಂಕಾ ಪ್ರವಾಸದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ರೂಟ್, ಟೀಂ ಇಂಡಿಯಾ ವಿರುದ್ಧವೂ ಅಬ್ಬರಿಸಿದರು. ತಮ್ಮ 100ನೇ ಟೆಸ್ಟ್ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ಇಂಗ್ಲೆಂಡ್ ನಾಯಕ, ಮತ್ತೊಂದು ಶತಕ ಬಾರಿಸುವ ಮೂಲಕ 100ನೇ ಟೆಸ್ಟ್ ಪಂದ್ಯವನ್ನು ಅವಿಸ್ಮರಣೀಯಗೊಳಿಸಿಕೊಂಡರು.
ನಾಯಕನಿಗೆ ಉತ್ತಮ ಸಾಥ್ ನೀಡಿದ ಸಿಬ್ಲಿ, ವೈಯಕ್ತಿಕ 87 ರನ್ಗಳಿಸಿ ಶತಕದತ್ತ ಸಾಗುತ್ತಿದ್ದ ವೇಳೆ ದಿನದಾಟದ ಕೊನೆಯ ಓವರ್ನಲ್ಲಿ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದರು. ಟೀಂ ಇಂಡಿಯಾ ಪರ ಜಸ್ಪ್ರೀತ್ ಬುಮ್ರಾ 2 ವಿಕೆಟ್ ಪಡೆದರೆ, ಅಶ್ವಿನ್ 1 ವಿಕೆಟ್ ಪಡೆಯಲಷ್ಟೇ ಶಕ್ತರಾದರು.