Mangalore: ಕರಾವಳಿ ಭಾಗದಲ್ಲಿ ಹಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಮಂಗಳೂರಿಂದ (Mangalore) ಬೇರೆ ಕಡೆ ಸಂಚರಿಸಲು ಬಹಳ ಕಷ್ಟಕರವಾಗಿದ್ದು, ಮತ್ತೊಂದು ಕಡೆ ಗುಡ್ಡ ಕುಸಿತದಿಂದಾಗಿ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿರೋದ್ರಿಂದ ಇಲ್ಲಿಯ ಜನರು ವಿಮಾನ ಹಾಗೂ ರೈಲು ಸಂಚಾರಕ್ಕೆ ಮೊರೆ ಹೋಗುತ್ತಿರುವ ಹಿನ್ನೆಲೆ ವಿಮಾನ ಟಿಕೆಟ್ ದರ ನಾಲ್ಕು ಪಟ್ಟು ಹೆಚ್ಚಳವಾಗಿದ್ದು, ರೈಲು ಪ್ರಯಾಣಕ್ಕೆ ಡಿಮ್ಯಾಂಡ್ ಹೆಚ್ಚಾಗಿದೆ.

ನಿರಂತರ ಸುರಿಯುತ್ತಿರುವ ಮಹಾಮಳೆಯಿಂದಾಗಿ ಶಿರಾಡಿ ಘಾಟ್ (Shiradi Ghat) ಭಾಗದಲ್ಲಿ ಕುಸಿತವುಂಟಾಗಿ ಹೆದ್ದಾರಿ ಪ್ರಯಾಣ ನಿಷೇಧವಾದ ಕಾರಣ ಮಂಗಳೂರು-ಬೆಂಗಳೂರು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಇನ್ನೊಂದೆಡೆ ಶಿರೂರು ಬಳಿ ಗುಡ್ಡ ಕುಸಿತವಾದ ಕಾರಣ ಮುಂಬೈ ಕಡೆ ಸಂಚರಿಸುವುದು ತ್ರಾಸದಾಯಕವಾಗಿದೆ.
ವಿಮಾನ ಮತ್ತಷ್ಟು ದುಬಾರಿ: ಮಂಗಳೂರು – ಬೆಂಗಳೂರು ನಡುವೆ ವಿಮಾನ ದರ ಸಾಮಾನ್ಯವಾಗಿ 3ಸಾವಿರ ರೂ. ಇದ್ದು, ಈ ದರ ಮೂರು ಪಟ್ಟು ಹೆಚ್ಚಾಗಿ 9ಸಾವಿರ ರೂ. ದಾಟಿದೆ. ಭಾನುವಾರ ಈ ದರ 16ಸಾವಿರ ರೂ.ಗೆ ಏರಿಕೆಯಾಗಿದೆ. ಮಂಗಳೂರು- ಮುಂಬಯಿ ದರವೂ 12ಸಾವಿರ ರೂ. ದಾಟಿದೆ.

ವಿಮಾನ ಸಂಖ್ಯೆಯೂ ಕಡಿತ: ಬೆಂಗಳೂರಿಗೆ (Bengaluru) ಪ್ರತಿದಿನ ತೆರಳುತ್ತಿದ್ದ 6 ವಿಮಾನಗಳು (ಏರ್ ಇಂಡಿಯಾ 2 ಮತ್ತು ಇಂಡಿಗೋ 4) ಪ್ರಯಾಣಿಸುತ್ತಿದ್ದು, ಜು.1ರಿಂದ 2 ಏರ್ ಇಂಡಿಯಾ (Air India) ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಈಗ ಪ್ರತಿದಿನ 4 ವಿಮಾನಗಳು ಮಾತ್ರ ಸಂಚರಿಸುತ್ತಿದ್ದು, ಸಾಮಾನ್ಯ ದಿನಗಳಲ್ಲೇ ಫ್ಲೈಟ್ ಸಂಪೂರ್ಣ ಭರ್ತಿಯಾಗುತ್ತಿದೆ. ಇದರಿಂದ ಈ ಸಂದಿಗ್ಧ ಸ್ಥಿತಿಯಲ್ಲಿ ಪ್ರಯಾಣಿಕರು ಟಿಕೆಟ್ ಸಿಗದೆ ಕಂಗಾಲಾಗಿದ್ದಾರೆ. ಮುಂಬಯಿಗೆ (Mumbai) ಕೂಡ 5 ವಿಮಾನಗಳು ಸಂಚರಿಸುತ್ತಿದ್ದು ಭರ್ತಿಯಾಗುತ್ತಿದೆ.
ಮಂಗಳೂರು ಏರ್ ಪೋರ್ಟ್ (Airport) ನಿಂದ ಬೆಂಗಳೂರು, ಮುಂಬಯಿ ಸೇರಿದಂತೆ ಪ್ರಮುಖ ನಗರಗಳಿಗೆ ವಿಮಾನ ಹೆಚ್ಚುವರಿಗೊಳಿಸುತ್ತಿಲ್ಲ, ಒತ್ತಡ ಹೆಚ್ಚದಾಗ ದರ ಏರಿಕೆ ಮಾಡುತ್ತಿರುವುದು ಸರಿಯಲ್ಲ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಪ್ರತಿದಿನ ಬೆಂಗಳೂರಿಗೆ ತೆರಳುವ ರೈಲು (Train) ಭರ್ತಿಯಾಗಿಯೇ ಇರುತ್ತದೆ. ರೈಲು ಬೇಡಿಕೆಯ ಅಗತ್ಯತೆಯನ್ನು ಅರಿತ ಸಂಸದ ಕ್ಯಾ. ಬ್ರಿಜೇಶ್ ಚೌಟ ಮಂಗಳೂರು- ಬೆಂಗಳೂರು ನಡುವೆ ಹೆಚ್ಚುವರಿ ರೈಲು ಓಡಾಟಕ್ಕೆ ನೈರುತ್ಯ ರೈಲ್ವೇ ಅಧಿಕಾರಿಗಳಿಗೆ ಮನವಿ ಮಾಡಿದ್ದರು, ಸಂಸದರ ಮನವಿಗೆ ಸ್ಪಂದಿಸಿದ ಅಧಿಕಾರಿಗಳು ಜು.19 ರಿಂದ 22ರ ತನಕ ವಿಶೇಷ ರೈಲುಗಳನ್ನು ಓಡಿಸಲಿದ್ದಾರೆ. ಪ್ರತಿದಿನ ಕರಾವಳಿ ಭಾಗದಿಂದ ಬೆಂಗಳೂರಿಗೆ 2 ರೈಲುಗಳು ಓಡಾಟ ನಡೆಸುತ್ತಿದ್ದು, ವಿಶೆಷ ರೈಲಿನಿಂದ ಪ್ರಯೋಜನವಾಗಲಿದೆ.