- ಚಲಿಸುತ್ತಿದ್ದ ಲಾರಿಯಿಂದಲೇ ಫ್ಲಿಪ್‌ಕಾರ್ಟ್‌ನ 24 ಲಕ್ಷ ರೂ (Flipkart mobile phones stolen ) ಮೌಲ್ಯದ ಮೊಬೈಲ್‌ಗಳು ಮಂಗಮಾಯ
- ಬೆಂಗಳೂರಿನಿಂದ ಧಾರವಾಡಕ್ಕೆ ಸಾಗುತ್ತಿದ್ದ ಗೂಡ್ಸ್ ವಾಹನ ಟಾರ್ಗೆಟ್ ಮಾಡಿದ ಖದೀಮರು
- ಹಾವೇರಿಯಲ್ಲಿ ಲಾರಿ ಡಿಜಿಟಲ್ ಲಾಕ್ ಮುರಿದು ಲಕ್ಷಾಂತರ ಮೌಲ್ಯದ ವಸ್ತುಗಳ ಕಳ್ಳತನ
Haveri: ಕರ್ನಾಟಕದಲ್ಲಿ ಇತ್ತೀಚಿನ ದಿನಗಳಲ್ಲಿ ಹೆದ್ದಾರಿಗಳಲ್ಲಿ ನಡೆಯುತ್ತಿರುವ (Flipkart mobile phones stolen) ದರೋಡೆ ಹಾಗೂ ಕಳ್ಳತನ ಪ್ರಕರಣಗಳು ಆತಂಕಕ್ಕೆ ಕಾರಣವಾಗುತ್ತಿವೆ.
ಇಂತಹುದೇ ಮತ್ತೊಂದು ಗಂಭೀರ ಘಟನೆ ಹಾವೇರಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಫ್ಲಿಪ್‌ಕಾರ್ಟ್ (Flipkart) ಕಂಪನಿಗೆ ಸೇರಿದ ಸುಮಾರು 24 ಲಕ್ಷ ರೂಪಾಯಿ ಮೌಲ್ಯದ ಮೊಬೈಲ್‌ಗಳು ಮತ್ತು ಇತರೆ ವಸ್ತುಗಳನ್ನು ಖದೀಮರು ಚಲಿಸುತ್ತಿದ್ದ ಗೂಡ್ಸ್ ಲಾರಿಯಿಂದಲೇ ಕಳ್ಳತನ ಮಾಡಿದ್ದಾರೆ.

ಈ ಘಟನೆ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದ್ದು, ಸಾವಿರಾರು ವಾಹನಗಳು ಸಂಚರಿಸುವ ಬ್ಯುಸಿ ರಸ್ತೆಯಲ್ಲೇ ಕಳ್ಳರು ತಮ್ಮ ಕೈಚಳಕ ತೋರಿಸಿರುವುದು ಸಾರ್ವಜನಿಕರಲ್ಲಿ ಭಯ ಮೂಡಿಸಿದೆ.
ಬೆಂಗಳೂರು ನಗರದಿಂದ ಧಾರವಾಡ ಜಿಲ್ಲೆಯ ಕೊಟೂರು ಗ್ರಾಮದ ಬಳಿ ಇರುವ ಫ್ಲಿಪ್‌ಕಾರ್ಟ್ ವೇರ್‌ಹೌಸ್‌ಗೆ (Warehouse) ವಸ್ತುಗಳನ್ನು ಸಾಗಿಸಲಾಗುತ್ತಿತ್ತು.
KA-22 D-0666 ಸಂಖ್ಯೆಯ ಗೂಡ್ಸ್ ಲಾರಿಯಲ್ಲಿ ಮೊಬೈಲ್‌ಗಳು ಸೇರಿದಂತೆ ವಿವಿಧ ಉತ್ಪನ್ನಗಳನ್ನು ತುಂಬಲಾಗಿತ್ತು. ಲಾರಿಯು ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲ್ಲೂಕಿನ ಕಾಕೋಳ ಮತ್ತು ಮೊಟೇಬೆನ್ನೂರು ನಡುವಿನ ಪ್ರದೇಶದಲ್ಲಿ ಸಾಗುತ್ತಿದ್ದ ವೇಳೆ, ಖದೀಮರು ಲಾರಿಯನ್ನು ಟಾರ್ಗೆಟ್ ಮಾಡಿದ್ದಾರೆ.
ಶನಿವಾರ ಮಧ್ಯರಾತ್ರಿ ಸುಮಾರು 1 ಗಂಟೆ ಸುಮಾರಿಗೆ ಈ ಕಳ್ಳತನ ನಡೆದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಲಾರಿಯ ಹಿಂಭಾಗದಲ್ಲಿದ್ದ ಡಿಜಿಟಲ್ ಲಾಕರ್ ಮತ್ತು ಸೀಲ್ ಅನ್ನು ಮುರಿದು, ಸುಮಾರು 6 ಬಾಕ್ಸ್‌ಗಳಲ್ಲಿ ಇಡಲಾಗಿದ್ದ ಮೊಬೈಲ್‌ಗಳನ್ನು ಕಳ್ಳರು ತೆಗೆದುಕೊಂಡು ಪರಾರಿಯಾಗಿದ್ದಾರೆ. ಲಾರಿಯನ್ನು ಚಲಾಯಿಸುತ್ತಿದ್ದ ಮಲಿಕಜಾನ್ ಮುಲ್ಲಾ ಅವರಿಗೆ ಲಾಕ್ ಮುರಿದ ತಕ್ಷಣ ಲಿಂಕಿಟ್ ಡಿವೈಸ್ ಮೂಲಕ ಅಲರ್ಟ್ ಮೆಸೇಜ್ ಬಂದಿದೆ.
ಅನುಮಾನಗೊಂಡ ಚಾಲಕರು ತಕ್ಷಣವೇ ವಾಹನವನ್ನು ಪಕ್ಕಕ್ಕೆ ನಿಲ್ಲಿಸಿ ಪರಿಶೀಲನೆ ನಡೆಸಿದಾಗ, ಸುಮಾರು 24 ರಿಂದ 25 ಲಕ್ಷ ರೂಪಾಯಿ ಮೌಲ್ಯದ ಮೊಬೈಲ್‌ಗಳು ಕಳ್ಳತನವಾಗಿರುವುದು ಗೊತ್ತಾಗಿದೆ.
ಈ ಪ್ರಕರಣವು ಇತ್ತೀಚೆಗೆ ಬೆಳಗಾವಿಯ ಚೋರ್ಲಾಘಾಟ್‌ನಲ್ಲಿ ನಡೆದ ಭಾರೀ ದರೋಡೆ ಪ್ರಕರಣವನ್ನು ನೆನಪಿಸುತ್ತದೆ.
ಅಲ್ಲಿ 400 ಕೋಟಿ ರೂಪಾಯಿ ನಗದು ಸಾಗಿಸುತ್ತಿದ್ದ ಕಂಟೇನರ್‌ನ್ನು ಹೈಜಾಕ್ ಮಾಡಲಾಗಿತ್ತು ಎಂಬ ಸುದ್ದಿ ರಾಜ್ಯಾದ್ಯಂತ ಸಂಚಲನ ಮೂಡಿಸಿತ್ತು. ಅದೇ ಮಾದರಿಯಲ್ಲಿ ಈಗ ಹಾವೇರಿಯಲ್ಲೂ ಚಲಿಸುತ್ತಿದ್ದ ಗೂಡ್ಸ್ ವಾಹನದಿಂದಲೇ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿರುವುದು ಭದ್ರತೆ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದೆ.
ಹೆದ್ದಾರಿಗಳಲ್ಲಿ ಸರಕು ಸಾಗಣೆಗೆ ಸೂಕ್ತ ಭದ್ರತಾ ವ್ಯವಸ್ಥೆ ಇಲ್ಲವೇ ಎಂಬ ಅನುಮಾನವೂ ಸಾರ್ವಜನಿಕರಲ್ಲಿ ಮೂಡುತ್ತಿದೆ. ಘಟನೆ ಸಂಬಂಧ ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸರು ಸದ್ಯ ತನಿಖೆಯನ್ನು ಕೈಗೊಂಡಿದ್ದು, ಕಳ್ಳತನ ಹೇಗೆ ನಡೆದಿದೆ, ಖದೀಮರು ಯಾರು, ಒಳಜಾಲದ ಸಹಾಯವಿದೆಯೇ ಎಂಬ ಎಲ್ಲಾ ಕೋನಗಳಿಂದ ಪರಿಶೀಲನೆ ನಡೆಸಲಾಗುತ್ತಿದೆ.
ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ ಮಾತನಾಡಿ, “ಘಟನೆಯ ಬಗ್ಗೆ ಸಂಪೂರ್ಣ ತನಿಖೆ ನಡೆಯುತ್ತಿದೆ. ಸತ್ಯಾಸತ್ಯತೆ ಶೀಘ್ರದಲ್ಲೇ ಹೊರಬರಲಿದೆ” ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ, ವಾಹನಗಳ ನಿರಂತರ ಸಂಚಾರವಿರುವ ಹೆದ್ದಾರಿಯಲ್ಲೇ ಇಷ್ಟು ದೊಡ್ಡ ಮಟ್ಟದ ಕಳ್ಳತನ ನಡೆದಿರುವುದು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುರಿತ ಚರ್ಚೆಗೆ ಕಾರಣವಾಗಿದೆ.