ಬೆಂಗಳೂರು, ಮಾ. 11: ತಡವಾಗಿ ಫುಡ್ ಡೆಲಿವರಿ ಮಾಡಿದ್ದನ್ನು ಪ್ರಶ್ನಿಸಿದ ಗ್ರಾಹಕಿಯೊಬ್ಬರ ಮೇಲೆ ಹಲ್ಲೆ ಮಾಡಿದ್ದ ಜೊಮ್ಯಾಟೋ ಡೆಲಿವರಿ ಬಾಯ್ ಪೊಲೀಸರ ಅತಿಥಿಯಾಗಿದ್ದಾನೆ.
ಜೊಮ್ಯಾಟೋದಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಕಾಮರಾಜ ಬಂಧಿತ ಆರೋಪಿ. ಮಾ.10ರಂದು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದಕ್ಕೆ ಫುಡ್ ಡೆಲಿವರಿ ಮಾಡಲು ಕಾಮರಾಜ್ ತೆರಳಿದ್ದ. ಈ ವೇಳೆ ಫುಡ್ ಆರ್ಡರ್ ಮಾಡಿದ್ದ ಹಿತೇಶ್ ಚಂದ್ರಾಣಿ ಎಂಬಾಕೆ 1 ಗಂಟೆ ತಡವಾಗಿ ಫುಡ್ ಡೆಲಿವರಿ ಮಾಡಿದ್ದ ಹಿನ್ನೆಲೆಯಲ್ಲಿ ಆರ್ಡರ್ ಕ್ಯಾನ್ಸಲ್ ಮಾಡಿದ್ದರು.
ಈ ನಡುವೆ ಚಂದ್ರಾಣಿ ಅವರ ಮನೆಯೊಳಗೆ ನುಗ್ಗಿ ಟೇಬಲ್ ಮೇಲೆ ಫುಡ್ ಇರಿಸಿದ್ದಾನೆ ಎನ್ನಲಾಗಿದೆ. ಅಲ್ಲದೇ ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದ್ದು, ಚಂದ್ರಾಣಿ ಕೈಗೆ ಚಪ್ಪಲಿ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಫುಡ್ ಡೆಲಿವರಿ ಬಾಯ್ ಕಾಮರಾಜು, ಚಂದ್ರಾಣಿ ಮೂಗಿಗೆ ಗುದ್ದಿ ಎಸ್ಕೇಪ್ ಆಗಿದ್ದ.
ಈ ಬಗ್ಗೆ ಚಂದ್ರಾಣಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಮಾಡಿ ಅಳಲು ತೋಡಿಕೊಂಡಿದ್ದರು, ಈ ದೃಶ್ಯ ಗಮನಿಸಿದ ಪೊಲೀಸರು ಫುಡ್ ಡೆಲಿವರಿ ಬಾಯ್ ಕಾಮರಾಜನನ್ನು ಬಂಧಿಸಿದ್ದಾರೆ.