Food department eye on sweets sold for Dussehra, Diwali: Test of sweets ordered
Bengaluru: ದಸರಾ, ದೀಪಾವಳಿ ಹಬ್ಬ (Dussehra, Diwali Festival) ಬಂತು ಅಂದರೆ ನೆನಪಾಗುವುದು ರುಚಿರುಚಿಯಾದ ಸಿಹಿ ತಿಂಡಿಗಳು. ಈ ಹಬ್ಬಗಳಲ್ಲಿ ಸ್ವೀಟ್ ತಂದು ಸಿಹಿ ತಿಂದು ಸಂಭ್ರಮಿಸುತ್ತಾರೆ. ಬಣ್ಣ ಬಣ್ಣದ ಸ್ವೀಟ್ ಗಳ ಹಂಚಿ ಹಬ್ಬವನ್ನು ಆಚರಿಸುತ್ತಾರೆ. ಆದರೆ ಇದೀಗ ಸ್ವೀಟ್ಗಳಲ್ಲೂ ಕಲಬೆರಕೆ ಇದೆಯಾ ಎಂಬ ಅನುಮಾನ ಕಾಡಲು ಶುರುವಾಗಿದೆ. ಈ ಹಿನ್ನೆಲೆ ಸ್ವೀಟ್ಸ್ಗಳ ಗುಣಮಟ್ಟ ಪರಿಶೀಲನೆಗೆ ಆಹಾರ ಇಲಾಖೆ ಮುಂದಾಗಿದೆ.
ಆಹಾರ ಇಲಾಖೆಯಿಂದ (Food Department) ಈಗಾಗಲೇ ರಾಜ್ಯದಾದ್ಯಂತ ಆಹಾರ ವಸ್ತುಗಳ ಗಣಮಟ್ಟದ ಪರೀಕ್ಷೆ ಮಾಡಿ ಅನೇಕ ಫುಡ್ಗಳಲ್ಲಿ ಕಲಬೆರಕೆ ಪತ್ತೆಯಾಗಿದ್ದರಿಂದ ಅವುಗಳ ಮೇಲೆ ನಿರ್ಬಂಧಗಳನ್ನು ಹೇರಲಾಗಿದೆ. ಇದೀಗ ಸಿಹಿ ತಿಂಡಿಗಳ ಸರದಿ. ಯಾಕೆಂದರೆ, ದಸರಾ ಹಾಗೂ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಜನ ಹೆಚ್ಚು ಸ್ವೀಟ್ಸ್ಗಳನ್ನು ಖರೀದಿ ಮಾಡುತ್ತಾರೆ.
ಆದರೆ ಅನೇಕ ಸ್ವೀಟ್ಸ್ಗಳಲ್ಲಿ (Sweets) ಕಲರ್ ಬಳಕೆ ಹಾಗೂ ಅದಕ್ಕೆ ಸೇರಿಸುವ ಪದಾರ್ಥಗಳ ಗುಣಮಟ್ಟದ ಬಗ್ಗೆ ಅನುಮಾನ ಮೂಡಿದೆ. ಹೀಗಾಗಿ ಆಹಾರ ಸುರಕ್ಷತಾ ಇಲಾಖೆ ಎಲ್ಲಾ ಬ್ರಾಂಡ್ಗಳ ಸ್ವೀಟ್ಸ್ಗಳನ್ನ ಪರೀಕ್ಷೆ ಮಾಡಲು ಮುಂದಾಗಿದೆ. ಇದರಿಂದಾಗಿ ಸಿಹಿಯಾಗಿ, ರುಚಿಯಾಗಿ ಸಿಗುವ ಸ್ವೀಟ್ಸ್ಗಳಲ್ಲಿ ಆರೋಗ್ಯಕ್ಕೆ ಕಹಿ ಎನಿಸುವ ಅಂಶಗಳಿದೆಯಾ ಎಂಬುದನ್ನು ಪತ್ತೆ ಹಚ್ಚಲಿದೆ.
ವನಸ್ಪತಿ ಎಣ್ಣೆ, ಕಳಪೆ ಮತ್ತು ಕಲಬೆರಕೆ ತುಪ್ಪದಿಂದ ತಯಾರಾಗುವ ಸಿಹಿಯ ಮೇಲೂ ನಿರ್ಬಂಧ ಹೇರಲು ಸಿದ್ಧತೆ ಮಾಡಲಾಗುತ್ತಿದೆ. ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂ ರಾವ್ (Dinesh Gundu Rao) ಅವರು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಆಗಿರುವ ಹರ್ಷ ಗುಪ್ತಾ ಗೆ ಆದೇಶ ಹೊರಡಿಸಿ ಗುಣಮಟ್ಟದ ಸಿಹಿ ಉತ್ಪನ್ನ ಮಾತ್ರ ಮಾರಾಟ ಮಾಡಲು ಅವಕಾಶ ಕಲ್ಪಿಸಬೇಕೆಂದು ತಿಳಿಸಿದ್ದಾರೆ.
ಒಟ್ಟಿನಲ್ಲಿ ಆಹಾರ ಇಲಾಖೆ ಜನರ ಆರೋಗ್ಯದ ದೃಷ್ಟಿಯಿಂದ ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಸದ್ಯ ಸ್ವೀಟ್ಸ್ಗಳ ಟೆಸ್ಟ್ (Test) ಮಾಡಲು ಮುಂದಾಗಿದ್ದು, ವರದಿಗಾಗಿ ಅಧಿಕಾರಿಗಳು ಕಾಯಲಿದ್ದಾರೆ. ವರದಿ ಕೈ ಸೇರಿದ ಬಳಿಕ ಇದು ಸುರಕ್ಷಿತವಾ ಅಥವಾ ಅಲ್ಲವೇ ಎಂಬುದು ತಿಳಿಯಲಿದ್ದು, ನಂತರ ಇಲಾಖೆ ಕ್ರಮ ಕೈಗೊಳ್ಳಲಿದೆ.