ಮಾತು ಬಲ್ಲವನಿಗೆ ಜಗಳವಿಲ್ಲ ಊಟ ಬಲ್ಲವನಿಗೆ ರೋಗವಿಲ್ಲ ಎಂಬ ನಾಣ್ಣುಡಿಯಂತೆ ಉತ್ತಮ ಜೀವನ ಶೈಲಿ(Lifestyle), ಉತ್ತಮ ಆರೋಗ್ಯವನ್ನು ಮತ್ತು ಸಮಾಜವನ್ನು ನಿರ್ಮಾಣ ಮಾಡುತ್ತದೆ.
ಆರೋಗ್ಯ(Health) ಜೀವನವೆಂದರೆ ಉತ್ತಮ ಮತ್ತು ಸ್ವಾಸ್ಥ್ಯ ಆರೋಗ್ಯ ಹಾಗೂ ಸ್ವಾಸ್ಥ್ಯ ಸಮಾಜವನ್ನು ನಾವುಗಳು ಹೊಂದುವುದು ಎಂದರ್ಥ.
ಪ್ರತಿದಿನ ಬೆಳಗಿನ ಉಪಹಾರವು ದಿನದ ಪ್ರಮುಖ ಆಹಾರವಾಗಿದೆ. ಬೆಳಗಿನ ಸಮಯ ಉಪಹಾರ ದೇಹಕ್ಕೆ ಬಹಳಷ್ಟು ಪೋಷಕಾಂಶಗಳನ್ನು ಒದಗಿಸುತ್ತದೆ.
ಯಾವುದೇ ಪರಿಸ್ಥಿತಿಯಲ್ಲಿ ಉಪಹಾರವನ್ನು ತ್ಯಜಿಸಬಾರದು. ಯಾಕೆಂದರೆ ಬೆಳಗಿನ ಉಪಹಾರ ಬಹಳಷ್ಟು ಪೋಷಕಾಂಶಗಳನ್ನು ದೇಹಕ್ಕೆ ನೀಡಿ ದಿನವಿಡಿ ಚೈತನ್ಯ ಮತ್ತು ಲವಲವಿಕೆಯಿಂದ ಇರಲು ಸಹಕರಿಸುತ್ತದೆ.
ಪ್ರತಿದಿನ ಬೆಳಗ್ಗೆ ಆಹಾರ ಸೇವಿಸುವುದನ್ನು ತ್ಯಜಿಸಿದರೆ, ನೀವು ಕೆಟ್ಟ ಜೀವನ ಶೈಲಿಗೆ ಹೊಂದಿಕೊಂಡಿದ್ದೀರಿ ಎಂದರ್ಥ.
ಅದನ್ನು ಈಗಲೇ ಬದಲಿಸಿಕೊಳ್ಳಿ. ಉತ್ತಮ ಜೀವನ ಶೈಲಿ ಅಳವಡಿಸಿಕೊಳ್ಳವುದು ಪ್ರತಿಯೊಬ್ಬರಿಗು ಅತ್ಯವಶ್ಯಕ. ಯಾಕೆಂದರೆ ಉತ್ತಮ ಆರೋಗ್ಯ ಪಡೆಯಲು ಮತ್ತು ಸ್ವಾಸ್ಥ್ಯ ಜೀವನ ನಡೆಸಲು ಪರಿಣಾಮಕಾರಿ.
ಇತ್ತೀಚಿನ ದಿನಗಳಲ್ಲಿ ಯುವಕರು ಮತ್ತು ಯುವತಿಯರು ದುಶ್ಚಟಕ್ಕೆ ಬಲಿಯಾಗಿ ಧೂಮಪಾನ ಮತ್ತು ಮಧ್ಯಪಾನದ ದಾಸರಾಗಿ ತಮ್ಮ ಅತಿ ಅಮೂಲ್ಯವಾದ ಜೀವನವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ.
ಒಮ್ಮೆ ಯುವಕರು ದುಶ್ಚಟಕ್ಕೆ ಬಲಿಯಾದರೆ ಅವರು ಅದರಿಂದ ಹೋರಬರುವುದು ತುಂಬಾ ಕಷ್ಟ. “ಆರೋಗ್ಯವೇ ಭಾಗ್ಯ” ಎಂಬ ನಾಣ್ಣುಡಿಯಂತೆ, ಆರೋಗ್ಯ ಇದ್ದರೆ ಎಲ್ಲವು ಇದ್ದಂತೆ. ಆರೋಗ್ಯ ಸರಿಯಾಗಿ ಇಲ್ಲದೆ ಇದ್ದರೆ ಗಳಿಸಿದ ಹಣವು ಆಸ್ಪತ್ರೆಗೆ ಸುರಿಯಬೇಕಾಗುತ್ತದೆ.
ಅದಕ್ಕೆ ವಿಧ್ಯಾವಂತರು, ತಿಳಿದವರು ಹೇಳುವುದು ಕೋಟಿ ಆಸ್ತಿ ಮಾಡುವುದಕ್ಕಿಂತ ಉತ್ತಮ ಆರೋಗ್ಯ ಕಾಪಾಡು ಅಂತಾ. ಉತ್ತಮ ಜೀವನ ಶೈಲಿಯು ಆರೋಗ್ಯವಾಗಿರಲು ಹಲವು ಮಾರ್ಗಗಳಿವೆ ಅದನ್ನ ಅಳವಡಿಸಿಕೊಂಡು ಹೋದರೆ,
ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ಉತ್ತಮವಾದ ಆರೋಗ್ಯ ಪಡೆಯುವುದರ ಜೊತೆಗೆ ಮಾರಕ ರೋಗಗಳಿಂದ ಮುಕ್ತಿ ಹೊಂದಬಹುದು.
ಮತ್ತು ದಿರ್ಘಾಯುಷ್ಯ ಪಡೆದು ದೈಹಿಕವಾಗಿ ಯಾವುದೇ ರೋಗ ರುಜಿನ ಬರದೆ ಒಳ್ಳೆಯ ಜೀವನ ನಡೆಸಬಹುದು. ಜೀವನ ಶೈಲಿಯನ್ನು ಸುಧಾರಿಸುವ 7 ಪ್ರಮುಖ ಅಂಶಗಳು
ಅಧುನಿಕ ಜೀವನ ಶೈಲಿಗೆ ಬೇಕು ಯೋಗ ಮತ್ತು ವ್ಯಾಯಾಮ : ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಬಯಸುವವರು ಯೋಗ ಮತ್ತು ವ್ಯಾಯಾಮ ಅಭ್ಯಾಸ ಕರಗತ ಮಾಡಿಕೊಳ್ಳವುದು ಅತ್ಯವಶ್ಯಕ. ಯೋಗ ಮತ್ತು ವ್ಯಾಯಾಮದಿಂದಾಗುವ ಪ್ರಯೋಜನಗಳು ಹಲವಾರು.
ಮಾನಸಿಕ ಖಿನ್ನತೆ, ಮಲಬದ್ದತೆ ಸಮಸ್ಯೆ, ಬೊಜ್ಜು ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ದೂರ ಮಾಡುತ್ತದೆ ಹಾಗೂ ವ್ಯಾಯಾಮ ಮಾಡಿದರೆ ದೇಹದ ಎಲ್ಲಾ ಸ್ನಾಯುಗಳು ಮತ್ತು ಮಾಂಸ ಖಂಡಗಳು ಸಕ್ರೀಯವಾಗುವುದರ ಜೊತೆಗೆ ಮಾಂಸ ಖಂಡಗಳು ಬಲಿಷ್ಠವಾಗುತ್ತವೆ. ಧ್ಯಾನ ಮಾಡಿದರೆ ಒತ್ತಡದಿಂದ ಮುಕ್ತಿ ಹೊಂದಬಹುದು.
ನಿಯಮಿತವಾಗಿ ಆಹಾರ ಸೇವಿಸುವ ಕ್ರಮ ಅತ್ಯಗತ್ಯ : ಬೆಳಗ್ಗೆ ಉಪಹಾರ ಸೇವಿಸುವುದರಿಂದ ದೇಹಕ್ಕೆ ಉತ್ತಮ ಪೋಷಕಾಂಶ ಲಭ್ಯವಾಗುವದರಿಂದ ಉತ್ತಮ ಆರೋಗ್ಯ ಸಿಗುತ್ತದೆ. ಬೆಳಿಗ್ಗೆ ಎದ್ದು ತಕ್ಷಣ ಖಾಲಿ ಹೊಟ್ಟೆಯಿಂದ ಒಂದು ಗ್ಲಾಸ್ ನೀರು ಕುಡಿಯಬಹುದು.
ಚಹಾ ಪಾನೀಯ ಖಾಲಿ ಹೊಟ್ಟೆಯಿಂದ ಕುಡಿಯುವುದರಿಂದ ಅನೇಕ ಆರೋಗ್ಯದ ಸಮಸ್ಯೆ ಉಲ್ಬಣವಾಗುತ್ತದೆ. ಆದ್ದರಿಂದ ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಚಹಾ ಮತ್ತು ಪಾನೀಯ ಕುಡಿಯುವುದನ್ನು ತಕ್ಷಣ ನಿಲ್ಲಿಸಬೇಕು.
ದೇಹಕ್ಕೆ ಪ್ರೋಟಿನ್ ಅಂಶ ಸರಿಯಾಗಿ ಸಿಗುತ್ತಿದೆಯೋ ಇಲ್ಲವೋ ಎಂದು ಗಮನಿಸುತ್ತಿರಬೇಕು. ಪ್ರೋಟಿನ್ ಇರುವ ಆಹಾರಗಳಾದ ಹಾಲು, ಮೊಸರು, ಮೊಟ್ಟೆ, ಮೀನು, ಮಾಂಸ ನಿಯಮಿತವಾಗಿ ಹಾಗೂ ಸಮತೋಲನ ಪದ್ಧತಿಯಲ್ಲಿ ಆಹಾರವನ್ನು ಸೇವಿಸಬೇಕು.
ದೇಹದ ತೂಕ ಕಾಪಾಡಿಕೊಳ್ಳಬಹುದು ಧೀರ್ಘಕಾಲ ರೋಗದಂತಹ ಮಧುಮೇಹ, ಹೃದ್ರೋಗ, ಕ್ಯಾನ್ಸರ್ ನಂತಹ ರೋಗಗಳ ಅಪಾಯವನ್ನು ಕಡಿಮೆ ಮಾಡಬಹುದು.
ಸರಿಯಾದ ಸಮಯಕ್ಕೆ ನಿದ್ರೆ : ಮೊಬೈಲ್ ಮತ್ತು ಲ್ಯಾಪ್ ಟಾಪ್ ಇತರೆ ಗ್ಯಾಜೇಟಗಳು ಇಂದಿನ ಯುವ ಪೀಳಿಗೆಗೆ ಸಿಕ್ಕ ಅತಿ ಅದ್ಬುತ ವಸ್ತುವಾಗಿ ಪರಿಣಮಿಸಿದೆ. ಪ್ರತಿದಿನ ಮಲಗುವಾಗ ಅತಿಯಾದ ಮೊಬೈಲ್ ಬಳಕೆಯಿಂದ ಕಣ್ಣಿಗೆ ಸಂಬಂಧಿಸಿದ ವ್ಯಾದಿಗಳು ಪ್ರಾರಂಭವಾಗುವುದರ ಜೊತೆಗೆ ರಾತ್ರಿ ಮಲಗುವುದು ಕೂಡಾ ವಿಳಂಬ ಮಾಡುತ್ತಿರುವುದು ಉತ್ತಮ ಜೀವನ ಶೈಲಿಗೆ ಮಾರಕವಾಗಿದೆ.
ಸಮಯಕ್ಕೆ ಸರಿಯಾಗಿ ಮಲಗದೆ ಇರುವುದು ಮಾನಸಿಕ ಹಾಗೂ ದೈಹಿಕವಾಗಿ ಪರಿಣಾಮಗಳು ಬೀರುತ್ತವೆ ಮತ್ತು ಅನಿಯಮಿತ ದಿನದ ಅತಿ ನಿದ್ರೆ ಮಾಡುವುದರಿಂದ ಪಾಶ್ಚವಾಯು ರೋಗಕ್ಕೆ ತುತ್ತಾಗಬಹುದೆಂದು ಒಂದು ಅಧ್ಯಯನ ತಿಳಿಸಿದೆ. ಸರಿಯಾದ ಸಮಯಕ್ಕೆ ಮಲಗಿ, ಸರಿಯಾದ ಸಮಯಕ್ಕೆ ಎಳುವುದು ಉತ್ತಮ ಜೀವನ ಶೈಲಿಯ ಒಂದು ಭಾಗವಾಗಿದೆ.
ಒತ್ತಡದ ಜೀವನ ಶೈಲಿ : ಪಟ್ಟಣದ ಜೀವನ ಅತಿ ಒತ್ತಡದ ಜೀವನವಾಗಿದೆ. ದಿನದ ಹಲವು ಗಂಟೆಗಳ ಕಾಲ ಸತತ ದುಡಿಯುವುದು ಮತ್ತು ಕಂಪ್ಯೂಟರ್ ನಲ್ಲಿ ಕಾರ್ಯ ನಿರ್ವಹಿಸುವದು ಹಾಗೂ ಇನ್ನಿತರ ಕಾರಣದಿಂದ ಒತ್ತಡ ಮಾನಸಿಕವಾಗಿ ಮತ್ತು ದೈಹಿಕವಾಗಿ ಕುಗ್ಗಿಸುವುದು ಅದರ ಜೊತೆಗೆ ಖಿನ್ನತೆಗೆ ದೂಡುತ್ತಿದೆ. ಹೆಚ್ಚೆಚ್ಚು ಧ್ಯಾನ ಮತ್ತು ಯೋಗ ಮಾಡುವುದರಿಂದ ಒತ್ತಡದ ಜೀವನದ ಕಡಿಮೆ ಮಾಡುತ್ತದೆ ಹಾಗೂ ಜೀವನಕ್ಕೆ ಉತ್ಸಾಹ ತುಂಬುತ್ತದೆ.
ಉತ್ತಮ ಆಹಾರ ಸೇವನೆ : ಇತ್ತೀಚಿನ ದಿನಗಳಲ್ಲಿ ಯುವಕರು, ಯುವತಿಯರು ದೇಹದ ಬೊಜ್ಜು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕಳಪೆ ಮಟ್ಟದ ಆಹಾರ ಪದಾರ್ಥ ಸೇವನೆ ಹಾಗೂ ಹೊರಗಡೆ ಜಂಕ್ ಫುಡ್ ಮತ್ತು ಎಣ್ಣೆಯಲ್ಲಿ ಕರಿದ ಆಹಾರ ಪದಾರ್ಥಗಳನ್ನು ಸೇವಿಸುವುದು ಕಾರಣವಾಗಿದೆ.
ಉತ್ತಮ ಹಣ್ಣು-ಹಂಪಲು ಹಾಗೂ ಉತ್ತಮ ಹಸಿ ತರಕಾರಿಗಳಲ್ಲಿ ಸಮೃದ್ಧವಾದ ವಿಟಮಿನ್ಗಳು, ಖನಿಜಗಳು ಹೇರಳವಾಗಿದೆ. ಹಸಿರು ಬಿನ್ಸ್, ಪಾಲಕ್, ಕೆಲ್, ಬ್ರೋಕೋಲಿಯಂ ಪೋಷಕಾಂಶಗಳನ್ನು ಹೊಂದಿರುವ ತರಕಾರಿಗಳು. ಇದರ ಜೊತೆಗೆ ಮೊಳಕೆಯೆಡೆದ ದ್ವಿದಳ ಧಾನ್ಯಗಳ ಪದಾರ್ಥ ಸೇವಿಸುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ಉತ್ತಮ ಮತ್ತು ಸ್ವಾಸ್ಥ್ಯ ಆರೋಗ್ಯ ಲಭಿಸುವುದು.
ದೇಹವನ್ನು ನಿರ್ವಿಷಗೊಳಿಸುವುದು : ದೇಹದಲ್ಲಿ ಇರುವಂತಹ ವಿಷಕಾರಿ ಅಂಶಗಳನ್ನು ಹೊರಗೆ ಹಾಕಲು ನಿರ್ವಿಷಗೊಳಿಸುವ ಕ್ರಿಯೆಯು ಅತಿ ಅಗತ್ಯವಾಗಿದೆ. ಇದು ಸಂಪೂರ್ಣವಾಗಿ ಆರೋಗ್ಯದ ಮೇಲೆ ಪರಿಣಾಮ ಬೀರುವುದು.
ಎಲ್ಲಾ ಅಂಗಾಂಗಗಳನ್ನು ಆರೋಗ್ಯವಾಗಿ ಇಡುವಲ್ಲಿ ಶುಂಠಿ ಬೆಳ್ಳುಳ್ಳಿ ಪರಿಣಾಮಕಾರಿ. ಇನ್ನು ಅನೇಕ ಗಿಡಮೂಲಿಕೆಗಳಾದ ತುಳಸಿ, ದಾಸವಾಳದಂತ ಎಲೆಗಳಿಂದ ದೇಹವನ್ನು ಶುದ್ಧೀಕರಿಸುವಂತಹ ಪಾನೀಯಗಳನ್ನು ಮನೆಯಲ್ಲಿ ತಯಾರಿಸಿ ಕುಡಿಯುವುದು ಉತ್ತಮ.
ದುಶ್ಚಟಗಳಿಂದ ದೂರವಿರುವುದು : ಈಗಿನ ಯುವಕರು ಮತ್ತು ಯುವತಿಯರು ವಿದೇಶಗಳ ಅನುಕರಣೆ ಮಾಡಲು ಹೋಗಿ ಧೂಮಪಾನ ಮತ್ತು ಮಧ್ಯಪಾನ ಹಾಗೂ ತಂಬಾಕು ಜಗಿಯುವ ಪ್ರಿಯರಾಗಿದ್ದಾರೆ. ಇದರಿಂದ ವ್ಯತಿರಿಕ್ತವಾಗಿ ದೈಹಿಕವಾಗಿ ಪರಿಣಾಮ ಬೀರುತ್ತಿವೆ.
ಮಾರಕ ರೋಗಗಳಾದ ಬಹು ಅಂಗಾಂಗ ವೈಪಲ್ಯ ಸಮಸ್ಯೆಯಂತಹ ಯಕೃತ್ತು ಮತ್ತು ಮೂತ್ರಪಿಂಡ ಹಾಗೂ ಕ್ಯಾನ್ಸರ್ ರೋಗಗಳಿಗೆ ಬಲಿಯಾಗಿ ತಮ್ಮ ಜೀವನವನ್ನೆ ಕಳೆದುಕೊಳ್ಳುತ್ತಿದ್ದಾರೆ.
- ರಾಘವೇಂದ್ರ ಗಣೇಶ ಬೆಂಡ್ಲಗಟ್ಟಿ (ಉ.ಕ)