ಬೆಂಗಳೂರು, ಮಾ. 01: ರಾಜ್ಯ ಸರ್ಕಾರ ಕುರಿ, ಮೇಕೆಗಳು ಆಕಸ್ಮಿಕವಾಗಿ ಸತ್ತರೆ ಐದು ಸಾವಿರ ರೂ.ಗಳ ಪರಿಹಾರ ನೀಡುವ “ಅನುಗ್ರಹ” ಯೋಜನೆಯನ್ನು ಮರು ಜಾರಿಗೊಳಿಸಿದ್ದರೆ ವಿಧಾನಸಭೆಯಲ್ಲಿ ಹೋರಾಟ ನಡೆಸಲಾಗುವುದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.
ಬೆಂಗಳೂರಿನಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಸಹಕಾರ ಕುರಿ ಮತ್ತು ಮೇಕೆ ಸಾಕಣೆದಾರರ ಮಹಾ ಮಂಡಳ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕುರಿಗಳನ್ನು ಕಾಡಿನಲ್ಲಿ ಮೇಯಿಸಲು ಹಾಗೂ ಅವುಗಳಿಗೆ ಕಾಯಿಲೆ ಕಾಣಿಸಿಕೊಂಡಾಗ ಕಡ್ಡಾಯವಾಗಿ ಚಿಕಿತ್ಸೆ ಮತ್ತು ಔಷಧ ನೀಡಲು ಅವಕಾಶ ಕಲ್ಪಿಸಿದ್ದು ನಮ್ಮ ಸರ್ಕಾರ. ಇದರ ಜೊತೆಗೆ ಕುರಿ ಮತ್ತು ಮೇಕೆ ಸಾಕಣೆದಾರರ ಮಹಾ ಮಂಡಳ ರಚನೆಯಾಗಿದ್ದೂ ನಮ್ಮ ಸರ್ಕಾರದ ಅವಧಿಯಲ್ಲಿ.
ಕುರಿ, ಮೇಕೆ, ದನ ಮತ್ತು ಎಮ್ಮೆಗಳು ಸಾವಿಗೀಡಾದಾಗ ಅದರ ಮಾಲೀಕರಿಗೆ ನೆರವಾಗುವ ದೃಷ್ಟಿಯಿಂದ ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ಅನುಗ್ರಹ ಯೋಜನೆ ಜಾರಿಗೆ ತಂದಿದ್ದೆ. ಆದರೆ, ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಎರಡು ವರ್ಷದಿಂದ ಯೋಜನೆ ಸ್ಥಗಿತಗೊಳಿಸಿದೆ ಹಾಗೂ ರೂ.30 ಕೋಟಿ ಬಾಕಿಯನ್ನೂ ಪಾವತಿ ಮಾಡಿಲ್ಲ.
ಕುರಿ ಸಾಕಾಣಿಕೆ ಕೇವಲ ಒಂದು ಸಮುದಾಯಕ್ಕೆ ಮಾತ್ರವೇ ಸೀಮಿತವಾಗಿಲ್ಲ. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ತಮ್ಮ ತೋಟದಲ್ಲಿ 500 ಕುರಿಗಳನ್ನು ಸಾಕಣೆ ಮಾಡುತ್ತಿದ್ದಾರೆ. ಕುರಿ ಸಾಕಣೆ ಎಂಬುದು ಬದುಕಿಗೆ ಒಂದು ದಾರಿ. ಒಂದು ಕುರಿಗೆ ಹತ್ತರಿಂದ ಇಪ್ಪತ್ತು ಸಾವಿರ ರೂ.ಗಳ ಬೆಲೆಯಿದೆ. ಆ ಕುರಿ ಸತ್ತರೆ ಕುರಿಗಾರರ ಬದುಕಿನ ದಾರಿಯೇ ಮುಚ್ಚಿಹೋಗುತ್ತದೆ. ಹಾಗಾಗಿ ಮುಂದೆ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಪರಿಹಾರದ ಮೊತ್ತವನ್ನು ಹತ್ತು ಸಾವಿರ ರೂ.ಗಳಿಗೆ ಏರಿಕೆ ಮಾಡುತ್ತೇವೆ ಎಂದರು.